ಸಾರಾಂಶ
ಆಯ್ಕೆಗೆ ಕೈನ ನೂತನ ಸಾರಥಿ ಸಂತಸ । ಹೆಚ್ಚಿನ ಮತಗಳ ಅಂತರಕ್ಕೆ ಪಕ್ಷದ ಸದಸ್ಯರು, ಕಾರ್ಯಕರ್ತರಿಗೆ ಧನ್ಯವಾದ
ಕನ್ನಡಪ್ರಭ ವಾರ್ತೆ ಶಿವಮೊಗ್ಗಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾರ್ಯಕರ್ತರು ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ಪಕ್ಷದ ಹಿರಿಯರ ಮಾರ್ಗದರ್ಶನದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಪಕ್ಷವನ್ನು ಬಲಪಡಿಸುವೆ ಎಂದು ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಹರ್ಷಿತ್ ಗೌಡ ತಿಳಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಯುವ ಕಾಂಗ್ರೆಸ್ ಚುನಾವಣೆಯ ಇತಿಹಾಸದಲ್ಲೇ ಭಾರಿ ಮತಗಳ ಅಂತರದಿಂದ ಕಾರ್ಯಕರ್ತರು ಗೆಲ್ಲಿಸಿದ್ದಾರೆ. ನನಗೆ ಒಟ್ಟು 48,473 ಮತಗಳು ಬಂದಿದ್ದು, ಇದರಲ್ಲಿ 33,408 ಮತಗಳ ಅಂತರ ಸಿಕ್ಕಿದೆ. ಇದಕ್ಕೆ ಕಾರಣರಾದ ಯುವ ಕಾಂಗ್ರೆಸ್‌ನ ಎಲ್ಲಾ ಸದಸ್ಯರಿಗೆ, ಪಕ್ಷದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.ಕಾಂಗ್ರೆಸ್ ಪಕ್ಷವು ಯುವ ಕಾಂಗ್ರೆಸ್ ಪದಾಧಿಕಾರಿಗಳ ಆಯ್ಕೆಯನ್ನು ಪ್ರಜಾಪ್ರಭುತ್ವದ ಮಾದರಿಯಲ್ಲೇ ನಡೆಸುತ್ತ ಬಂದಿದೆ. ಯುವ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ವಿವಿಧ ಹುದ್ದೆಗಳು ಮತ್ತು ತಾಲೂಕು ಅಧ್ಯಕ್ಷರ ಆಯ್ಕೆಗಳಿಗೆ ಕಳೆದ ಮೂರು ತಿಂಗಳ ಹಿಂದೆಯೇ ಚುನಾವಣೆ ಪ್ರಕ್ರಿಯೆ ನಡೆದಿತ್ತು, ಅದರ ಫಲಿತಾಂಶ ಈಗ ಪ್ರಕಟವಾಗಿದೆ. ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ನೇತೃತ್ವ ವಹಿಸಲು ನನಗೆ ಸದವಕಾಶ ಸಿಕ್ಕಿದೆ ಎಂದರು.
ಹಿರಿಯರ ಮಾರ್ಗದರ್ಶನ, ಕಾರ್ಯಕರ್ತರ ಬೆಂಬಲದೊಂದಿಗೆ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಸಂಘಟನೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿ, ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವೆ. ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಇಟ್ಟ ನಂಬಿಕೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುವೆ ಎಂದು ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್ ಮಾತನಾಡಿ, ಎನ್‌ಎಸ್‌ಯುಐ ಮತ್ತು ಯುವ ಕಾಂಗ್ರೆಸ್ ಸಂಘಟನೆಗಳು ಕಾಂಗ್ರೆಸ್ ಪಕ್ಷದ ಬೇರುಗಳು. ಅಲ್ಲಿಂದ ಬಂದವರು ಅಧಿಕಾರ ಸಿಗಲಿ, ಬಿಡಲಿ ಎಂದಿಗೂ ಕಾಂಗ್ರೆಸ್ ಪಕ್ಷವನ್ನು ಕಟ್ಟುವ ಕೆಲಸದಲ್ಲಿ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ. ಆ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ನ ನೂತನ ಪದಾಧಿಕಾರಿಗಳು ಪಕ್ಷವನ್ನು ಕಟ್ಟುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವ ಕಡೆ ತೊಡಗಿಸಿಕೊಳ್ಳಲಿ ಎಂದು ಸಲಹೆ ನೀಡಿದರು.
ಪಾಲಿಕೆ ಮಾಜಿ ಸದಸ್ಯ ಎಚ್.ಸಿ.ಯೋಗೇಶ್ ಮಾತನಾಡಿ, ಪಕ್ಷದಲ್ಲಿ ಅಂತರಿಕ ಚುನಾವಣೆಯನ್ನು 2011 ರಲ್ಲಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಪರಿಚಯಿಸಿದ್ದರು. ಇದು ಪಕ್ಷದ ಸಾಮಾನ್ಯ ಕಾರ್ಯಕರ್ತನು ಕೂಡ ಉನ್ನತ ಹುದ್ದೆಗೆ ಬರುವಂತೆ ಮಾಡಿದೆ. ಯಾವುದೇ ರಾಜಕೀಯದ ಹಿನ್ನೆಲೆ ಇಲ್ಲದವರು ಕೂಡ ಉನ್ನತ ಸ್ಥಾನಕ್ಕೆರುವಂತಹ ಅವಕಾಶ ಪಕ್ಷದ ಈ ಆಂತರಿಕ ಚುನಾವಣೆಯ ಮೂಲಕ ಸಿಕ್ಕಿದೆ ಎಂದರು.ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಆದರ್ಶ್ ಹುಂಚನದ ಕಟ್ಟೆ ಮಾತನಾಡಿ, ಜಿಲ್ಲಾ ಯುವ ಕಾಂಗ್ರೆಸ್ ನ ಚುನಾವಣಾ ಪ್ರಕ್ರಿಯೆಯು 2024ರ ಆಗಸ್ಟ್ 20ರಿಂದ ಸೆ.22ರ ವರೆಗೆ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 1,22,144 ಮತದಾರರು ನೋಂದಣಿಯಾಗಿದ್ದರು. ಇದರಲ್ಲಿ ಸುಮಾರು 58 ಮತದಾರರ ನೋಂದಣಿ ತಿರಸ್ಕೃತಗೊಂಡು, 64,081 ಅರ್ಹ ಮತದಾರರು ಉಳಿದಿದ್ದರು. ಇದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹರ್ಷಿತ್ ಗೌಡ ಅವರಿಗೆ 48, 473 ಮತಗಳನ್ನು ಪಡೆದು, ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇನ್ನು 15,065 ಮತಗಳನ್ನು ಪಡೆದು ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಪಕ್ಷದ ಮುಖಂಡರಾದ ಯು.ಶಿವಾನಂದ, ವಿಜಯ್ ಕುಮಾರ್, ಮಧುಸೂದನ್, ಚೇತನ್‍ಗೌಡ, ವಿಜಯ್, ರೇಷ್ಮಾ, ಹರ್ಷಿತಾ ರಾಣಿ, ಅಬ್ದುಲ್ ಸತ್ತಾರ್, ಪ್ರವೀಣ್ ಕುಮಾರ್, ಆಕಾಶ್, ಸಾಕ್ಲೀನ್, ಶಿವು, ಮಂಜುನಾಯ್ಕ್ ಮುಂತಾದವರು ಹಾಜರಿದ್ದರು.