ಆಳ್ವಾಸ್ ಪ್ರಗತಿ: ೧,೮೭೧ ಮಂದಿಗೆ ಉದ್ಯೋಗ
KannadaprabhaNewsNetwork | Published : Oct 08 2023, 12:01 AM IST
ಆಳ್ವಾಸ್ ಪ್ರಗತಿ: ೧,೮೭೧ ಮಂದಿಗೆ ಉದ್ಯೋಗ
ಸಾರಾಂಶ
ಆಳ್ವಾಸ್ಸ್ ಉದ್ಯೋಗ ಮೇಳ ಸಂಪನ್ನ- ೧,೮೭೧ ಮಂದಿಗೆ ಉದ್ಯೋಗ
ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾಗಿರಿಯ ಆಳ್ವಾಸ್ ಆವರಣದಲ್ಲಿ ಆಯೋಜಿಸಿದ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ’ಯ ೧೩ನೇ ಆವೃತಿಯು ಶನಿವಾರ ಸಮಾರೋಪಗೊಂಡಿದೆ. ಈ ಪ್ರತಿಷ್ಠಿತ ಉದ್ಯೋಗ ಮೇಳದಲ್ಲಿ ೧,೮೭೧ ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲಿಯೇ ನೇಮಕಗೊಂಡಿದ್ದಾರೆ. ಭಾಗವಹಿಸಿದ ಒಟ್ಟು ೧೯೮ ಕಂಪನಿಗಳ ಪೈಕಿ ೧೭೪ ಕಂಪನಿಗಳು, ೩,೨೫೯ ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ ೨,೨೮೪ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು ಎರಡು ದಿನಗಳ ಉದ್ಯೋಗ ಮೇಳದಲ್ಲಿ ೧೦,೨೫೨ ಅಭ್ಯರ್ಥಿಗಳು ಭಾಗವಹಿಸಿದರು. ಅಮೆರಿಕಾದ ಮೂಲದ ಫ್ಯಾಕ್ಟ್ಸೆಟ್ ಸಿಸ್ಟಮ್ಸ್ ಇಂಡಿಯಾ ಫ್ರೈ.ಲಿ. ಕಂಪನಿಯು ಒಬ್ಬನನ್ನು ವಾರ್ಷಿಕ ವೇತನ ೭.೧ ಲಕ್ಷ ರು.ಗೆ ಹಾಗೂ ೨೦ ಅಭ್ಯರ್ಥಿಗಳನ್ನು ತಲಾ ವಾರ್ಷಿಕ ೩.೪ ಲಕ್ಷ ರು. ವೇತನಕ್ಕೆ ಸಂಶೋಧನಾ ವಿಶ್ಲೇಷಕರ ಹುದ್ದೆಗೆ ಆಯ್ಕೆ ಮಾಡಿದೆ. ಇಎಕ್ಸ್ಎಲ್ ಕಂಪನಿಯು ಒಟ್ಟು ೩೯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಒಬ್ಬನಿಗೆ ಸುಮಾರು ೭ ಲಕ್ಷ ರು. ವಾರ್ಷಿಕ ವೇತನದ ಭರವಸೆ ನೀಡಿದೆ. ಉಳಿದ ೩೮ ಅಭ್ಯರ್ಥಿಗಳಿಗೆ ತಲಾ ವಾರ್ಷಿಕ ಸುಮಾರು ೪ ಲಕ್ಷ ರು. ವೇತನದ ಭರವಸೆ ನೀಡಿದೆ. ಬ್ಲೂಸ್ಟೋನ್ ಜ್ಯುವೆಲ್ಲರಿಯು ವಾರ್ಷಿಕ ವೇತನ ೫ ಲಕ್ಷ ರೂಪಾಯಿಯ ಹುದ್ದೆಗೆ ೧೬ ಮಂದಿಯನ್ನು ಆಯ್ಕೆ ಮಾಡಿದೆ. ಆರೋಗ್ಯ ಸಂಬಂಧಿತ ಕಲ್ಟ್ಫಿಟ್ ಕಂಪನಿಯು ವಾರ್ಷಿಕ ತಲಾ ೪ ಲಕ್ಷ ರು. ವೇತನಕ್ಕೆ ೧೬ ಜನರನ್ನು ಆಯ್ಕೆ ಮಾಡಿದೆ. ಅಜೆಕ್ಸ್ ಕಂಪನಿಯು ವಾರ್ಷಿಕ ತಲಾ ೩.೫ ಲಕ್ಷ ರೂಪಾಯಿ ವೇತನಕ್ಕೆ ೨೨ ಮಂದಿಯನ್ನು ಆಯ್ಕೆ ಮಾಡಿದೆ. ಸ್ವಿಚ್‌ಗಿಯರ್ ಕಂಪನಿಯು ವಾರ್ಷಿಕ ತಲಾ ವೇತನ ೩.೨ ಲಕ್ಷ ರುಪಾಯಿಯಂತೆ ೩೬ ಮಂದಿಗೆ ಉದ್ಯೋಗ ನೀಡಿದೆ. ಟ್ರಿಪ್ ಫ್ಯಾಕ್ಟರಿಯು ವಾರ್ಷಿಕ ತಲಾ ೩ ಲಕ್ಷ ರುಪಾಯಿ ವೇತನಕ್ಕೆ ೩೭ ಮಂದಿಯನ್ನು ಆಯ್ಕೆ ಮಾಡಿದೆ. ಸ್ನೆಂಡರ್ ಎಲೆಕ್ಟ್ರಿಕ್ ಇಂಡಿಯಾ ಕಂಪನಿಯು ವಾರ್ಷಿಕ ತಲಾ ೨.೫ ಲಕ್ಷ ರು. ವೇತನಕ್ಕೆ ೧೮ ಜನರನ್ನು ಆಯ್ಕೆ ಮಾಡಿದೆ.