ಮಹಾಶಿವರಾತ್ರಿಗೆ ಅಮರನಾಥ ಶಿವಲಿಂಗ ದರ್ಶನ: ರಾಜಯೋಗಿನಿ ಬಿ.ಕೆ.ಶಾರದಾಜೀ

| Published : Feb 21 2025, 11:46 PM IST

ಮಹಾಶಿವರಾತ್ರಿಗೆ ಅಮರನಾಥ ಶಿವಲಿಂಗ ದರ್ಶನ: ರಾಜಯೋಗಿನಿ ಬಿ.ಕೆ.ಶಾರದಾಜೀ
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಹ್ಮ ಕುಮಾರೀಸ್ ಮಂಡ್ಯ ಶಾಖೆಯ ಸ್ವರ್ಣಿಮ ಮಹೋತ್ಸವ ಹಾಗೂ ಮಹಾ ಶಿವರಾತ್ರಿ ಪ್ರಯುಕ್ತ ಫೆ.೨೩ರಿಂದ ಮಾ.೨ರವರೆಗೆ ಬೆಳಗ್ಗೆ ಗಂಟೆಯಿಂದ ರಾತ್ರಿ ೯ರ ವರೆಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಅಮರನಾಥ ಶಿವಲಿಂಗ, ಚೈತನ್ಯದೇವಿಯರು, ಸಹಸ್ರಲಿಂಗ, ಮಾತನಾಡುವ ಕುಂಭಕರ್ಣ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಬ್ರಹ್ಮ ಕುಮಾರೀಸ್ ಮಂಡ್ಯ ಶಾಖೆಯ ಸ್ವರ್ಣಿಮ ಮಹೋತ್ಸವ ಹಾಗೂ ಮಹಾ ಶಿವರಾತ್ರಿ ಪ್ರಯುಕ್ತ ಫೆ.೨೩ರಿಂದ ಮಾ.೨ರವರೆಗೆ ಬೆಳಗ್ಗೆ ಗಂಟೆಯಿಂದ ರಾತ್ರಿ ೯ರ ವರೆಗೆ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಅಮರನಾಥ ಶಿವಲಿಂಗ, ಚೈತನ್ಯದೇವಿಯರು, ಸಹಸ್ರಲಿಂಗ, ಮಾತನಾಡುವ ಕುಂಭಕರ್ಣ ದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರಾಜಯೋಗಿನಿ ಬಿ.ಕೆ.ಶಾರದಾಜೀ ಹೇಳಿದರು.

ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸುವರು. ದಿವ್ಯ ಸಾನಿಧ್ಯವನ್ನು ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ವಹಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಪಿ.ರವಿಕುಮಾರ್ ಆಗಮಿಸುವರು. ವಿಶೇಷ ಅತಿಥಿಗಳಾಗಿ ಜಿಪಂ ಸಿಇಒ ಕೆ.ಆರ್.ನಂದಿನಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ, ಇಮಾಮ್ ಮಹಾದವಿಯಾ ಸಾದತ್ ಮಸೀದಿಯ ಸೈಯದ್ ಮುಬಾರಕ್ ಇಶಾಕ್, ಸಂತ ಜೋಸೆಫರ ಚರ್ಚ್‌ನ ಫಾದರ್ ಮಿರಾಜ್, ಜೈನ ಶ್ವೇತಾಂಬರ ತೇರಾಪಂತ್ ಸಭಾದ ಉಪಾಧ್ಯಕ್ಷ ಎಲ್.ವಿನೋದ್ ಕುಮಾರ್ ಆಗಮಿಸುವರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬೆಟ್ಟದ ಗುಹೆಯೊಳಗೆ ವಿರಾಜಮಾನನಾಗಿರುವ ಅಮರನಾಥ ಶಿವಲಿಂಗ ದರ್ಶನ, ಒಂದೇ ಸ್ಥಳದಲ್ಲಿ ಭಾರತದ ನಕ್ಷೆಯ ಮೇಲೆ ಸುಪ್ರಸಿದ್ಧ ೧೨ ಜ್ಯೋತಿರ್ಲಿಂಗಗಳ ದರ್ಶನ, ೨೧ ಅಡಿ ಉದ್ದದ ಕುಂಭಕರ್ಣನಿಗೆ ಪರಮಾತ್ಮನ ಅವತರಣಿಕೆಯ ಬಗ್ಗೆ ಸಂದೇಶ ನೀಡಿ ಅವನನ್ನು ಜಾಗೃತಗೊಳಿಸುವ ಮತ್ತು ಜಾಗೃತಗೊಂಡ ಕುಂಭಕರ್ಣನ ಸಂದೇಶ ಕೇಳುವ ವಿಶೇಷ ಅವಕಾಶ ದೊರಕಿಸಲಾಗಿದೆ ಎಂದರು.

ಒಂದೇ ಸ್ಥಳದಲ್ಲಿ ೯ ಚೈತನ್ಯದೇವಿಯರ ದರ್ಶನ, ಜೊತೆಗೆ ಸಹಸ್ರಾರು ಶಿವಲಿಂಗಗಳ ದರ್ಶನವನ್ನು ಏರ್ಪಡಿಸಲಾಗಿದೆ. ಪ್ರತಿದಿನ ಸಂಜೆ ೬.೩೦ರಿಂದ ೮.೩೦ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮನವಿ ಮಾಡಿದರು.