ಅಂಬಲಗೆರೆ ಕೆರೆ ಕೋಡಿ; ಜಲರಾಶಿ ಹೇಗಿದೆ ನೋಡಿ

| Published : May 01 2024, 01:17 AM IST

ಸಾರಾಂಶ

ಕೆರೆಗಳೆಲ್ಲಾ ಬತ್ತಿ ಹೋಗಿ ಬೋರ್‌ವೆಲ್‌ಗಳೆಲ್ಲಾ ಒoದೊಂದಾಗಿ ಉಸಿರು ನಿಲ್ಲಿಸುತ್ತಿರುವ ಈ ಹೊತ್ತಲ್ಲಿ ತಾಲೂಕಿನ ಕೆರೆಯೊಂದು ವಿವಿ ಸಾಗರದ ಕೃಪಾಕಟಾಕ್ಷದಿಂದ ತುಂಬಿ ಕೋಡಿ ಬಿದ್ದಿರುವುದು ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದೆ.

ರಮೇಶ್ ಬಿದರಕೆರೆ

ಹಿರಿಯೂರು: ಕೆರೆಗಳೆಲ್ಲಾ ಬತ್ತಿ ಹೋಗಿ ಬೋರ್‌ವೆಲ್‌ಗಳೆಲ್ಲಾ ಒoದೊಂದಾಗಿ ಉಸಿರು ನಿಲ್ಲಿಸುತ್ತಿರುವ ಈ ಹೊತ್ತಲ್ಲಿ ತಾಲೂಕಿನ ಕೆರೆಯೊಂದು ವಿವಿ ಸಾಗರದ ಕೃಪಾಕಟಾಕ್ಷದಿಂದ ತುಂಬಿ ಕೋಡಿ ಬಿದ್ದಿರುವುದು ಕಣ್ಣಿಗೆ ಹಬ್ಬ ಉಂಟು ಮಾಡುತ್ತಿದೆ. ಬಿಸಿಲಿಂದ ಬಸವಳಿದವರಿಗೆ ಮುಂದ ನೀಡುತ್ತಿದೆ. ಭೀಕರ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ಹನಿ ನೀರಿಗೂ ಬೆಲೆ ಬಂದಿದ್ದು ಹಿರಿಯೂರು ತಾಲೂಕಿನ ಬಹುತೇಕ ಕೆರೆಗಳು ಒಣಗಿ ಹೋಗಿವೆ.

ತಾಲೂಕಿನ ಸಾಕಷ್ಟು ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮಳೆಯ ಅಭಾವದಿಂದ ಕೆರೆ ಕಟ್ಟೆಗಳೆಲ್ಲಾ ಖಾಲಿಯಾಗಿ ದನ, ಕರುಗಳಿಗೆ ನೀರು ಸಿಗದ ಸ್ಥಿತಿ ಸೃಷ್ಟಿಯಾಗಿದೆ. ಇಂತಹ ಬೆಂಕಿಯುಗುಳುವ ಬಿಸಿಲಲ್ಲಿ ತಾಲೂಕಿನ ಅಂಬಲಗೆರೆ ಗ್ರಾಮದ ಕೆರೆ ಮೈದುಂಬಿ ಹರಿದಿರುವುದು ಈ ಭಾಗದ ರೈತರ ಸಂತಸ ಹೆಚ್ಚಿಸಿದೆ.

ಕುಡಿಯುವ ನೀರಿನ ಉದ್ದೇಶಕ್ಕಾಗಿ ವಾಣಿವಿಲಾಸ ಸಾಗರ ಜಲಾಶಯದಿಂದ ತಾಲೂಕಿನ ಮಸ್ಕಲ್, ಬಿದರಕೆರೆ ಹಾಗೂ ಅಂಬಲಗೆರೆ ಕೆರೆಗಳಿಗೆ ಗುರುತ್ವಾಕರ್ಷಣೆ ಬಲದಲ್ಲಿ ಎಡ ನಾಲೆ ಮೂಲಕ 200 ಕ್ಯುಸೆಕ್ಸ್ ನೀರು ಹರಿಸಿದ್ದರಿಂದ ಬತ್ತಿದ್ದ ಈ ಮೂರೂ ಕೆರೆಗಳು ತುಂಬಿವೆ. ಈಗಾಗಲೇ 2021-22 ರಲ್ಲಿ ಎರಡು ಬಾರಿ ಅಂಬಲಗೆರೆ ತುಂಬಿಸಲಾಗಿತ್ತು. ಸುಮಾರು 88 ಹೆಕ್ಟರ್ ವಿಸ್ತೀರ್ಣವಿರುವ ಕೆರೆಯಲ್ಲಿ 11.28 ಎಂಸಿಎಫ್‌ಟಿ ಯಷ್ಟು ನೀರು ಸಂಗ್ರಹವಾಗಲಿದೆ. ಈ ಕೆರೆ ತುಂಬಿ ಹರಿದ ಕೋಡಿಯ ನೀರು ಬಿದರಕೆರೆ ಕೆರೆ ತಲುಪಿ ಆ ಕೆರೆಯೂ ತುಂಬಿದೆ. ಅದು ಚಿಕ್ಕ ಕೆರೆಯಾಗಿದ್ದು 2 ಎಂಸಿಎಫ್‌ಟಿಯಷ್ಟು ನೀರು ಸಂಗ್ರಹವಾಗಿದೆ. ಅಂಬಲಗೆರೆ ಕೆರೆ ತುಂಬಿದ್ದರಿಂದ ಸುತ್ತಮುತ್ತಲಿನ ಆರ್ ಎಸ್ ಉಪ್ಪಾರಹಟ್ಟಿ, ಹೊಸ ಐನಳ್ಳಿ, ಹಳೇ ಐನಳ್ಳಿ, ಉಪ್ಪಾರಹಟ್ಟಿ, ಬಂದ್ರೆ ಹಳ್ಳಿ ಮುಂತಾದ ಹಳ್ಳಿಗಳವರಿಗೆ ಅಂತರ್ಜಲ ವೃದ್ಧಿಯಾಗುವ ಕನಸು ಚಿಗುರೊಡೆದಿದೆ. ಕೆರೆಯಿಂದ ಸುಮಾರು 6-7 ಕಿಮೀ ವರೆಗೂ ಬೋರ್ ವೆಲ್ ಗಳಿಗೆ ಜೀವ ಬರಲಿದ್ದು ತೋಟಗಾರಿಕೆ ಬೆಳೆಗಳಿಗೆ ನೀರಿನ ಕೊರತೆ ತಗ್ಗಲಿದೆ ಎಬುದು ಜನರ ಆಸೆ. ಎಡ ನಾಲೆ ಮೂಲಕ ಕೆರೆಗಳಿಗೆ ನೀರು ಹರಿಸುವುದರಿಂದ ಸುತ್ತಮುತ್ತಲಿನ ಹತ್ತಾರು ಗ್ರಾಮದ ಜನ-ಜಾನುವಾರುಗಳ ಕುಡಿವ ನೀರಿಗೆ ಆಸರೆಯಾದಂತಾಗಿದೆ.

ಇದೀಗ ವಿವಿ ಸಾಗರ ಜಲಾಶಯದಲ್ಲಿ 113 ಅಡಿ ನೀರು ಸಂಗ್ರಹವಿದ್ದು ಈಗಾಗಲೇ ವೇದಾವತಿ-ಸುವರ್ಣಮುಖಿ ನದಿಗೆ ನೀರು ಹರಿಸಿರುವುದು ನದಿಯ ಪರಿಸರದಲ್ಲಿ ಜೀವಕಳೆ ಬಂದಿದೆ. ಕೆರೆಗಳ ತುಂಬಿಸುವಿಕೆಯಿಂದ ಬರದ ಕಾವು ಆ ಭಾಗದಲ್ಲಿ ತಗ್ಗಿದ್ದು ಜನರ ಮುಖದಲ್ಲಿ ಆಶಾಭಾವನೆ ಮೂಡಿದೆ.