ಸಾರಾಂಶ
ಈ ಸಂದರ್ಭದಲ್ಲಿ ನಿಡಂಬೂರು ಮಾಗಣೆಯ ಸಾಧಕರೂ, ಸಾಮಾಜಿಕ ಬದ್ಧತೆಯ ವೈದ್ಯರೂ ಆದ ಡಾ.ಕೆ.ಆರ್.ಕೆ. ಭಟ್‌ಗೆ ‘ನಿಡಂಬೂರು ಬೀಡುಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಯಕ್ಷಗಾನ ಮಂಡಳಿಗೆ ನೀಡಲ್ಪಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಗೆ ಪ್ರದಾನ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಕಳೆದ 67 ವರ್ಷಗಳಿಂದ ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ವಿಶಿಷ್ಟವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಅಂಬಲಪಾಡಿಯ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಮಂಡಳಿಯ 67ನೇ ವಾರ್ಷಿಕೋತ್ಸವ ಅಂಬಲಪಾಡಿ ದೇವಳದ ಧರ್ಮದರ್ಶಿಗಳಾದ ಡಾ.ನಿ.ಬೀ.ವಿಜಯ ಬಲ್ಲಾಳರ ಅಧ್ಯಕ್ಷತೆಯಲ್ಲಿ ಶನಿವಾರ ನಡೆಯಿತು. ಈ ಸಂದರ್ಭದಲ್ಲಿ ನಿಡಂಬೂರು ಮಾಗಣೆಯ ಸಾಧಕರೂ, ಸಾಮಾಜಿಕ ಬದ್ಧತೆಯ ವೈದ್ಯರೂ ಆದ ಡಾ.ಕೆ.ಆರ್.ಕೆ. ಭಟ್‌ಗೆ ‘ನಿಡಂಬೂರು ಬೀಡುಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಯಕ್ಷಗಾನ ಮಂಡಳಿಗೆ ನೀಡಲ್ಪಡುವ ನಿಡಂಬೂರು ಬೀಡು ಬಲ್ಲಾಳ ಪ್ರಶಸ್ತಿಯನ್ನು ಮಾರ್ಪಳ್ಳಿಯ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿಗೆ ಪ್ರದಾನ ಮಾಡಲಾಯಿತು.ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಕರ್ಜೆ ಶ್ರೀಧರ ಹೆಬ್ಬಾರರಿಗೆ ಕಿದಿಯೂರು ಜನಾರ್ದನ ಆಚಾರ್ಯ ಪ್ರಶಸ್ತಿಯನ್ನು, ಹಿರಿಯ ಪ್ರಸಾದನ ತಜ್ಞರಾದ ವಿಠಲ ಕರ್ಕೇರರಿಗೆ ಕಪ್ಪೆಟ್ಟು ಬಾಬು ಶೆಟ್ಟಿಗಾರ ಪ್ರಶಸ್ತಿಯನ್ನು, ಕುತ್ಪಾಡಿ ಆನಂದಗಾಣಿಗ ಪ್ರಶಸ್ತಿಯನ್ನು ಬೆಳ್ತೂರು ರಮೇಶ್ ಇವರಿಗೆ ನೀಡಿ ಗೌರವಿಸಲಾಯಿತು. ಅಭ್ಯಾಗತರಾಗಿ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಪ್ರಶಾಂತ್ ಶೆಟ್ಟಿ ಶುಭಾಶಂಸನೆ ಮಾಡಿದರು. ಮಂಡಳಿಯ ಅಧ್ಯಕ್ಷ ಕೆ. ಅಜಿತ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ಎ. ನಟರಾಜ್ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು. ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎ. ಪ್ರವೀಣ್ ಉಪಾಧ್ಯ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಮಂಡಳಿಯ ಬಾಲ ಕಲಾವಿದರಿಂದ ವೀರ ತರಣಿಸೇನ ಮತ್ತು ಮಂಡಳಿಯ ಸದಸ್ಯರಿಂದ ವೀರ ಬರ್ಬರೀಕ ಯಕ್ಷಗಾನ ಪ್ರದರ್ಶನಗೊಂಡಿತು.