ಅಂಬೇಡ್ಕರ್, ಬಾಬೂಜಿ ಸಾಮಾಜಿಕ ಪರಿವರ್ತನೆ 2 ಮುಖಗಳು

| Published : Apr 30 2024, 02:01 AM IST

ಸಾರಾಂಶ

ಸಾಧನೆಯಲ್ಲಿ ಸಾರ್ಥಕತೆ ಕಂಡುಕೊಂಡ, ಜಾತಿ ಜಾಡ್ಯ ಜಾಲಾಡಿಸಿದ ಹಾಗೂ ಸಾಮಾಜಿಕ ಪರಿವರ್ತನೆ ನಾಣ್ಯದ ಎರಡು ಮುಖಗಳು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ್ ರಾಮ್ ಎಂದು ಕುವೆಂಪು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ ಅಭಿಪ್ರಾಯಪಟ್ಟರು.

ಚಿತ್ರದುರ್ಗ: ಸಾಧನೆಯಲ್ಲಿ ಸಾರ್ಥಕತೆ ಕಂಡುಕೊಂಡ, ಜಾತಿ ಜಾಡ್ಯ ಜಾಲಾಡಿಸಿದ ಹಾಗೂ ಸಾಮಾಜಿಕ ಪರಿವರ್ತನೆ ನಾಣ್ಯದ ಎರಡು ಮುಖಗಳು ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ್ ರಾಮ್ ಎಂದು ಕುವೆಂಪು ವಿಶ್ವವಿದ್ಯಾನಿಲಯ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಹಾಗೂ ನಿರ್ದೇಶಕ ಡಾ.ನೆಲ್ಲಿಕಟ್ಟೆ ಎಸ್.ಸಿದ್ದೇಶ ಅಭಿಪ್ರಾಯಪಟ್ಟರು.

ಚಿತ್ರದುರ್ಗ ತಾಲೂಕಿನ ಜಿ.ಆರ್.ಹಳ್ಳಿಯ ದಾವಣಗೆರೆ ವಿಶ್ವವಿದ್ಯಾನಿಯಲಯದ ಜ್ಞಾನ ಗಂಗೋತ್ರಿಯ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿಜ್ಞಾನ ಭವನ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ್ ರಾಮ್ ಅವರ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಸಮಾನತೆ, ಅವಮಾನ ಮತ್ತು ಹಸಿವುಗಳಿಂದ ತಲ್ಲಣಿಸುತ್ತಿದ್ದ ಜನತೆಗೆ ಅರಿವು ಬಿತ್ತಿದರು. ಅಭಿವೃದ್ಧಿ ಪಥದಲ್ಲಿ ನೆಲೆಯಾಗಿಸಲು ಅಪಮಾನ, ಅಗೌರವಗಳಿಗೆ ಹೆದರದೆ, ಎದುರಿಸುವ ತಾಕತ್ತು ಸರ್ವರೂ ಸಂಪಾದಿಸಿಕೊಳ್ಳಬೇಕೆಂದು ಸಾರಿದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬೂ ಜಗಜೀವನ್ ರಾಮ್ ಅವರದು ಅನುಭವಿ ರೂಪಿತ ವ್ಯಕ್ತಿತ್ವ. ವಿರೂಪವಾಗಿರುವ ಭಾರತೀಯ ಸಾಮಾಜಿಕ ಸಂರಚನೆಯನ್ನು ಸುಸ್ವರೂಪಕ್ಕೆ ಪ್ರೇರೇಪಿಸುವ ಚಿಂತನೆಗಳು ಅವರಲ್ಲಿ ಇದ್ದವೆಂದರು.

ಅಂಬೇಡ್ಕರ್ ಹಾಗೂ ಬಾಬೂಜಿ ಅವರ ಜೀವನ ಮತ್ತು ಸಾಧನೆಗಳನ್ನು ಅರಿಯುವುದೆಂದರೆ ಮಾನವೀಯತೆಯನ್ನು ಅರಿತಂತೆ. ಮನುಷ್ಯರಲ್ಲಿ ಪ್ರೀತಿ, ಕರುಣೆ, ಸಮಾನತೆ, ಸಂಬಂಧ, ಸೌಜನ್ಯ, ಸತ್‍ಚಿಂತನೆ, ಸತ್ ನುಡಿ, ಸತ್ ನಡೆಗಳನ್ನು ಬಿತ್ತಿ ಬೆಳೆಯುವಂತಹದು ಹಾಗೂ ಮನದ ಮಾಲಿನ್ಯವನ್ನೂ ತೊಳೆಯುವಂತಹದು ಡಾ.ಅಂಬೇಡ್ಕರ್ ಹಾಗೂ ಡಾ.ಬಾಬೂಜಿ ಅವರ ಜೀವನ ಚರಿತ್ರೆಯಾಗಿದೆ ಎಂದರು.

ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ಜಿ.ಆರ್.ಹಳ್ಳಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಯು.ಲೋಕೇಶ್ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ವಿಭಾಗದ ಸಂಯೋಜಕ ಡಾ.ಹೆಚ್.ಜಿ.ವಿಜಯಕುಮಾರ್, ಸಸ್ಯಶಾಸ್ತ್ರ ವಿಭಾಗದ ಸಂಯೋಜಕಿ ಬಿ.ಟಿ.ನಿವೇದಿತಾ, ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ.ಆರ್.ಕೆ.ಸತೀಶ್, ಪ್ರಾಧ್ಯಾಪಕ ಡಾ.ಪ್ರಕಾಶ್, ಡಾ.ಭೀಮಾಶಂಕರ್ ಜೋಶಿ ಇದ್ದರು.