ಅಂಬೇಡ್ಕರ್, ಬಾಬೂಜಿ ದಲಿತರ ಎರಡು ಕಣ್ಣು

| Published : Apr 07 2025, 01:35 AM IST

ಸಾರಾಂಶ

ಕೋಟೆ ನಾಡು ಬುದ್ಧ ವಿಹಾರ ಕೇಂದ್ರದಲ್ಲಿ ಭಾನುವಾರ ನಡೆದ ಬಾಬು ಜಗಜೀವನರಾಂ ಜನ್ಮ ದಿನಾಚರಣೆಯಲ್ಲಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಬಾಬು ಜಗಜೀವನ್‌ ರಾಮ್‌ ಜಯಂತಿಯಲ್ಲಿ ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್‌ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರು ದಲಿತ ಸಮುದಾಯದ ಎರಡು ಕಣ್ಣುಗಳಿದ್ದಂತೆ ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ಆಯೋಜಿಸಿದ್ದ ಬಾಬು ಜಗಜೀವನ್ ರಾಮ್ ಅವರ 118ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಬಾ ಸಾಹೇಬರು ಸಮಾಜ ಸುಧಾರಕರಾದರೆ ಬಾಬು ಜಗಜೀವನ್ ರಾಮ್ ರವರು ಪ್ರಭುದ್ಧ ರಾಜಕಾರಣಿಯಾಗಿದ್ದಾರೆ. ಬಾಬಾ ಸಾಹೇಬರು ತಂದ ಸಂವಿಧಾನದ ಆಶಯವನ್ನು ತಮ್ಮ ಕಾಲಘಟ್ಟದಲ್ಲಿ ಯಥಾರ್ಥವಾಗಿ ಜಾರಿಗೆ ತರಲು ಪ್ರಯತ್ನಿಸಿದ ಕೀರ್ತಿ ಬಾಬು ಜಗಜೀವನ್ ರಾಮ್ ರವರಿಗೆ ಸಲ್ಲುತ್ತದೆ ಎಂದರು.

ಹಿಂದೂವಾಗಿ ಹುಟ್ಟಿದ್ದೇನೆ, ಹಿಂದೂವಾಗಿ ಸಾಯಲಾರೆ ಎಂದು ಬಾಬಾ ಸಾಹೇಬರು ಘೋಷಿಸಿದರೆ, ಹಿಂದೂ ಧರ್ಮದಲ್ಲಿ ಇದ್ದುಕೊಂಡೆ ಹಿಂದೂ ಧರ್ಮದಲ್ಲಿ ಸುಧಾರಣೆ ಮಾಡಬಹುದು ಎಂಬುದು ಬಾಬೂಜಿಯವರ ಪ್ರಬಲ ಪ್ರತಿಪಾದನೆಯಾಗಿತ್ತು. ಕೇಂದ್ರದಲ್ಲಿ ನಿರಂತರ 35 ವರ್ಷಗಳ ಸಚಿವರಾಗಿದ್ದ ಬಾಬೂಜಿಯವರು ಸ್ವತಂತ್ರ ಬಂದಾಗ ಹಸಿವಿನಿಂದ ತತ್ತರಿಸಿದ್ದ ಭಾರತವನ್ನು ಹಸಿರು ಕ್ರಾಂತಿ ಮಾಡಿ ಹಸಿವು ನೀಗಿಸಿದರು. ರೈಲ್ವೆ ಸಚಿವರಾಗಿ ಅಂಬೇಡ್ಕರ್ ಅವರ ಆಶಯದಂತೆ ಶೇಕಡ 100ರಷ್ಟು ಮೀಸಲಾತಿ ಜಾರಿಗೆ ತಂದರು, ಕಾರ್ಮಿಕ ಸಚಿವರಾಗಿ ಕಾರ್ಮಿಕರ ಹಕ್ಕುಗಳ ರಕ್ಷಣೆ ಜೊತೆಗೆ ಮಹಿಳಾ ನೌಕರರಿಗೆ ವಿಶೇಷ ಸೌಲಭ್ಯಗಳಿಗೆ ಕಾರಣಿ ಭೂತರಾಗಿದ್ದಾರೆ ಎಂದು ಹೇಳಿದರು.

ರಕ್ಷಣಾ ಸಚಿವರಾಗಿ ಪಾಕಿಸ್ತಾನ ಮತ್ತು ಬಾಂಗ್ಲಾ ಯುದ್ಧಗಳನ್ನು ಗೆಲ್ಲುವ ಮೂಲಕ ಸಮರ್ಥ ನಾಯಕತ್ವ ಪ್ರದರ್ಶಿಸಿದ ಬಾಬೂಜಿ, ಅತ್ಯಂತ ಜಾಣ, ಸ್ವಾಭಿಮಾನಿಯಾಗಿದ್ದರು. ಅಸ್ಪೃಶ್ಯರಿಗೆ ಅವಕಾಶ ಸಿಕ್ಕರೆ ಸಮರ್ಥ ಆಡಳಿತ ನೀಡಬಲ್ಲರೆಂಬುದನ್ನು ನಿರೂಪಿಸಿ ತೋರಿಸಿದ ಮಹಾನ್ ದೇಶಭಕ್ತ. ಭಾರತದ ಜಾತಿ ಮನಸ್ಸುಗಳು ಅವರನ್ನು ಪ್ರಧಾನಿಯಾಗುವ ಅವಕಾಶ ವಂಚಿಸಿದ್ದು ಇಂಡಿಯಾದ ಚರಿತ್ರೆ ತನಗೆ ತಾನೇ ಮಾಡಿಕೊಂಡ ಅವಮಾನ ಎಂದು ಬಿ.ಪಿ.ತಿಪ್ಪೇಸ್ವಾಮಿ ಹೇಳಿದರು.

ಬಿಎಸ್ಐ ಜಿಲ್ಲಾ ಕಾರ್ಯದರ್ಶಿ ನನ್ನಿವಾಳ ರವಿಕುಮಾರ್, ಖಜಾಂಚಿ ಬೆಸ್ಕಾಂ ತಿಪ್ಪೇಸ್ವಾಮಿ, ಪರಿವರ್ತನಾ ಸಂಘದ ಅಧ್ಯಕ್ಷ ಪಿಲ್ಲಳ್ಳಿ ಹರೀಶ್, ಉಪನ್ಯಾಸಕ ಈ ನಾಗೇಂದ್ರಪ್ಪ, ಶಾಂತಮ್ಮ, ಶಕುಂತಲಾ, ಗಿರಿಜಾ, ಬನ್ನಿಕೋಡ್ ರಮೇಶ್, ರಾಮಣ್ಣ, ಉಷಾ ಯರದಕಟ್ಟೆ, ಲಕ್ಷ್ಮಿ,ಲಾವಣ್ಯ ಇದ್ದರು.