ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಅಂಗವಾಗಿ ಕುರುಗೋಡು ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ ಚಿತ್ರಪಟ ಮೆರವಣಿಗೆ ಮಂಗಳವಾರ ಜರುಗಿತು.
ಕುರುಗೋಡು: ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಂ ಜಯಂತಿ ಅಂಗವಾಗಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ ಚಿತ್ರಪಟ ಮೆರವಣಿಗೆ ಮಂಗಳವಾರ ಜರುಗಿತು.
ಪಟ್ಟಣದ ದೊಡ್ಡಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸಮಾವೇಶಗೊಂಡಿತು. ಸುಮಂಗಳೆಯರ ಕಳಸ, ಪೂರ್ಣಕುಂಭ, ತಾಸಿರಾಮ್, ರಾಮಡೋಲ್, ಹಗಲುವೇಷ ಕಲಾವಿದರ ತಂಡ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದವು. ವಿವಿಧ ಸಂಘಟನೆಗಳ ಮುಖಂಡರು, ತಹಸೀಲ್ದಾರ್ ಕಚೇರಿ ಮತ್ತು ಪುರಸಭೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಮೆರವಣಿಗೆಯಲ್ಲಿ ಹೆಜ್ಜೆಹಾಕಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ನರಸಪ್ಪ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರು ಬರೆದ ಭಾರತ ದೇಶದ ಜಾತಿ ವ್ಯವಸ್ಥೆ ಪುಸ್ತಕ ಸಮಾಜದ ಪರಿವರ್ತನೆಗೆ ಆತ್ಯವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಕುರಿತು ಸಂವಾದ ಕಾರ್ಯಕ್ರಮ ಆಯೋಜನೆ ಮಾಡೋಣ ಎಂದು ಹೇಳಿದರು.
ಸಮಾಜದಲ್ಲಿ ಅಸ್ಪಶ್ಯತೆ ಹೋಗಲಾಡಿಸಲು ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ಬಿ.ಆರ್. ಅಂಬೇಡ್ಕರ್ ಅವರನ್ನು ಜಾತಿ ಭೇದವಿಲ್ಲದೇ ಎಲ್ಲರೂ ಅಪ್ಪಿಕೊಳ್ಳಬೇಕು ಮತ್ತು ಅವರ ವಿಚಾರಧಾರೆಗಳನ್ನು ಒಪ್ಪಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮುಖ್ಯ ಗುರುಗಳಾದ ಡಿ.ಎಂ. ಮಲ್ಲಿಕಾರ್ಜುನ ವಿಶೇಷ ಉಪನ್ಯಾಸ ನೀಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಪ್ರತಿಯೊಬ್ಬರಿಗೂ ಶಿಕ್ಷಣ ಸೌಲಭ್ಯ ಸಿಗಬೇಕು ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ಅವಕಾಶ ನೀಡಿದರು. ಎಲ್ಲರಿಗೂ ಸಮಾನತೆ ನೀಡಿದರು. ಭಾರತೀಯರು ನಾವು ಎಂದು ಸಾರಿದರು. ಅಂಬೇಡ್ಕರ್ ಅಂದರೆ ಭಾರತ. ಭಾರತ ಸಂವಿಧಾನದ ಮೇಲೆ ನಿಂತಿದೆ. ಹಾಗಾಗಿ ಸಂವಿಧಾನ ಮೂಲಕ ಪ್ರತಿಯೊಬ್ಬರೂ ಆತ್ಮಲೋಕನ ಮಾಡಿಕೊಳ್ಳಬೇಕು ಎಂದರು.
ಪುರಸಭೆ ಅಧ್ಯಕ್ಷ ಟಿ. ಶೇಖಣ್ಣ ಮಾತನಾಡಿ, ಮಹಾನ್ ಮಾನವತಾವಾದಿ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರೆ ಸಾಲದು. ಅವರ ವಿಚಾರಧಾರೆಗಳನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡಬೇಕು ಎಂದರು.ಉಪನ್ಯಾಸಕ ಹುಲುಗಪ್ಪ ಬಿ.ಆರ್. ಅಂಬೇಡ್ಕರ್ ಕುರಿತು ಉಪನ್ಯಾಸ ನೀಡಿದರು. ಪುರಸಭೆ ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಗ್ರೇಡ್-೨ ತಹಸೀಲ್ದಾರ್ ಮಲ್ಲೇಶಪ್ಪ, ಸಿಪಿಐ ಬಾಳನಗೌಡ ಎಸ್. ಮಾನಶೆಟ್ಟಿ, ಬಿ.ಆರ್. ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಟಿ. ಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗ ಮೂರ್ತಿ, ಪಿಎಸ್‌ಐ ಸುಪ್ರಿತ್ ವಿರೂಪಾಕ್ಷಪ್ಪ, ಗೌರವಾಧ್ಯಕ್ಷ ಎಂ. ರುದ್ರಪ್ಪ, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಜಿ. ಬಸವನಗೌಡ, ಬಾಬು ಜಗಜೀನವ್ ರಾಂ ಸಂಘದ ತಾಲೂಕು ಅಧ್ಯಕ್ಷ ಸುರೇಶ್, ರೈತ ಮುಖಂಡ ವಿ.ಎಸ್. ಶಿವಶಂಕರ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಮಸೂತಿ, ಬಸವರಾಜ್ ಇದ್ದರು.