ಸಾರಾಂಶ
ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮದ ಕಚೇರಿಯು ಚಿಕ್ಕದಾದ ಕೊಠಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಬಳಲುವಂತಾಗಿದೆ. ಪ್ರಮುಖವಾಗಿ ಕಟ್ಟಡವು ಸಹ ಸಾಕಷ್ಟು ಹಳೆಯದಾಗಿದ್ದು ಬೀಳುವ ಹಂತಕ್ಕೆ ಬಂದು ತಲುಪಿದೆ.
ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರದ ಕೋಟೆ ವಾರ್ಡಿನ ಅಂಬೇಡ್ಕರ್ ಭವನದ ಪಕ್ಕದಲ್ಲಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮದ ಕಚೇರಿಯು ನಿರ್ವಹಣೆ ಕೊರತೆಯಿಂದ ಬಳಲುತ್ತಿದ್ದು, ತ್ವರಿತವಾಗಿ ದುರಸ್ತಿ ಕಾರ್ಯ ಮಾಡಬೇಕು ಎಂದು ಭೀಮ್ ಸೇವಾ ಸಮಿತಿ ಸಂಘಟನೆ ರಾಜ್ಯಾಧ್ಯಕ್ಷ ಶ್ರೀಕಾಂತ್ ರಾವಣ್ ಒತ್ತಾಯಿಸಿದ್ದಾರೆ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಆದಿ ಜಾಂಬವ ಅಭಿವೃದ್ಧಿ ನಿಗಮದ ಕಚೇರಿಯು ಚಿಕ್ಕದಾದ ಕೊಠಡಿಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದು, ಇಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಬಳಲುವಂತಾಗಿದೆ. ಪ್ರಮುಖವಾಗಿ ಕಟ್ಟಡವು ಸಹ ಸಾಕಷ್ಟು ಹಳೆಯದಾಗಿದ್ದು ಬೀಳುವ ಹಂತಕ್ಕೆ ಬಂದು ತಲುಪಿದೆ. ಕಟ್ಟಡದ ಮೇಲ್ಛಾವಣಿಯು ಬಿರುಕು ಬಿಟ್ಟು ನೆಲಕ್ಕೆ ಬಿದ್ದಿದ್ದು, ಕಿಟಕಿಗಳು ಸಹ ಗೆದ್ದಲು ತಿನ್ನುತ್ತಿವೆ. ಇನ್ನು ಇಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಅಧಿಕಾರಿಗಳಿಗೆ ಶೌಚಾಲಯದ ವ್ಯವಸ್ಥೆಯಾಗಲಿ, ಕುಡಿಯುವ ನೀರಿನ ವ್ಯವಸ್ಥೆಯಾಗಲಿ, ಅಥವಾ ದಾಖಲೆಗಳನ್ನು ಭದ್ರವಾಗಿಟ್ಟುಕೊಳ್ಳಲು ಕಬೋರ್ಡಿನ ವ್ಯವಸ್ಥೆ ಸಹ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಟ್ಟಾರೆಯಾಗಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ಬಳಲುತ್ತಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಅವ್ಯವಸ್ಥೆಯನ್ನು ಸಂಬಂಧಪಟ್ಟ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ, ಇತ್ತ ಗಮನಹರಿಸಿ ಕಟ್ಟಡವನ್ನು ದುರಸ್ತಿಗೊಳಿಬೇಕು. ಇಲ್ಲವಾದರೆ ಭೀಮ್ ಸೇವಾ ಸಮಿತಿ ವತಿಯಿಂದ ತಾಲೂಕು ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿ ಎದುರು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.