ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಹಲವು ಸಂಸ್ಕೃತಿ, ಪದ್ಧತಿಗಳ ವೈವಿಧ್ಯತೆಯ ದೇಶ ಅಖಂಡ ಭಾರತವಾಗಿ ಉಳಿಯಲು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನ ಕಾರಣವಾಗಿದೆ. ದೇಶದ ಜನ ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಬಾಳಲು ಸಂವಿಧಾನದ ವ್ಯವಸ್ಥೆಯಿಂದ ಸಾಧ್ಯವಾಗಿದೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.ಭಾನುವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಗೌರವ ಸಲ್ಲಿಸಿ ಮಾತನಾಡಿದರು. ಬಲಿಷ್ಠರ ಎದುರು ತಲೆ ಎತ್ತಿ ನಿಲ್ಲುವಂತಹ ಸ್ವಾಭಿಮಾನ ನೀಡುವುದು ಶಿಕ್ಷಣ. ಶಿಕ್ಷಣಕ್ಕೆ ಅಂತಹ ಶಕ್ತಿ ಇದೆ. ಶಿಕ್ಷಣದ ಮಹತ್ವ ಸಾರಿ, ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಪ್ರತಿಪಾದಿಸಿ ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಹಕ್ಕು, ಸೌಲಭ್ಯ ದೊರೆಯಬೇಕು, ಸಾಮಾಜಿಕವಾಗಿ ಎಲ್ಲರೂ ಸಮಾನರಾಗಿ, ಗೌರವದಿಂದ ಬಾಳಬೇಕು ಎಂಬ ಆಶಯ ಸಂವಿಧಾನದ ಮೂಲಕ ಈಡೇರುತ್ತಿದೆ ಎಂದರು.ಡಾ.ಅಂಬೇಡ್ಕರ್ ಅವರಿಗೆ ಬಿಜೆಪಿ ಎಲ್ಲಾ ರೀತಿಯ ಗೌರವ ನೀಡುತ್ತಾ ಬಂದಿದೆ. ಅಂಬೇಡ್ಕರ್ ಅವರ ದೂರದೃಷ್ಟಿ, ಅವರ ಆದರ್ಶ ಅನುಸರಿಸಿಕೊಂಡು ಎಲ್ಲರೂ ಭಾವೈಕ್ಯಯಿಂದ ಬಾಳುತ್ತಾ ದೇಶದ ಅಖಂಡತೆ ಕಾಪಾಡಬೇಕು ಎಂದರು.ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ ಮಾತನಾಡಿ, ಅಂಬೇಡ್ಕರ್ ಅವರು ಶೋಷಿತ ಸಮುದಾಯಗಳ ಬದುಕನ್ನು ಬೆಳಗುವ ಸೂರ್ಯ. ಅಂಬೇಡ್ಕರ್ ಅವರು ಉನ್ನತ ಶಿಕ್ಷಣ ಪಡೆಯಲು ಗಾಯಕ್‌ವಾಡ್ ಮಹಾರಾಜರು ಸಹಾಯ ಮಾಡದಿ ದ್ದರೆ, ಅವರು ಸಂವಿಧಾನ ರಚನಾ ಸಮಿತಿ ಅಧ್ಯಕ್ಷರಾಗದಿದ್ದರೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ. ಹೀಗಾಗಿ ಅಂಬೇಡ್ಕರ್ ಬದುಕಿನಲ್ಲಿ ಆ ಎರಡು ಪ್ರಕರಣಗಳು ಮಹತ್ವಪೂರ್ಣ. ದೇಶದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗುವಂತಹ ಸಂವಿಧಾನ ರಚಿಸಿದ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಎರಡು ಬಾರಿ ಸೋಲಿಸಿತು. ಅಂಬೇಡ್ಕರ್ ಅವರನ್ನು ಕಾಂಗ್ರೆಸ್‌ನ ವರು ಸೋಲಿಸಬಾರದಾಗಿತ್ತು, ಅವಿರೋಧವಾಗಿ ಆಯ್ಕೆ ಮಾಡಬೇಕಾಗಿತ್ತು. ಆದರೆ ಶ್ಯಾಂಪ್ರಕಾಶ್ ಮುಖರ್ಜಿ ಅವರು ಅಂಬೇಡ್ಕರ್ ಅವರು ರಾಜ್ಯಸಭೆಗೆ ಆಯ್ಕೆಯಾಗಲು ಕಾರಣರಾದರು ಎಂದರು.ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಚಿ.ನಾ.ರಾಮು, ಜಿಲ್ಲಾಅಧ್ಯಕ್ಷ ಆಂಜನಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಶಿವಪ್ರಸಾದ್, ಲೋಕಸಭಾ ಕ್ಷೇತ್ರದ ಸಹ ಸಂಚಾಲಕ ಭೈರಣ್ಣ, ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ಪಿ.ಅಂಜನಮೂರ್ತಿ, ಲೋಕೇಶ್, ನಗರಅಧ್ಯಕ್ಷ ಹನುಮಂತರಾಯಪ್ಪ ಮೊದಲಾದವರು ಭಾಗವಹಿಸಿದ್ದರು.