ಸಾರಾಂಶ
ಕುಮಟಾ: ಸತತ ಹೋರಾಟ, ನಿರಂತರ ಅಧ್ಯಯನ, ಸತ್ಯದ ಹುಡುಕಾಟ, ಭವಿಷ್ಯದ ಚಿಂತನೆಗಳ ಮೂಲಕ ಡಾ. ಅಂಬೇಡ್ಕರ ದೇಶದ ಸಾಮಾಜಿಕ ಹಾಗೂ ರಾಜಕೀಯ ಚಿತ್ರಣವನ್ನು ಆಮೂಲಾಗ್ರವಾಗಿ ಬದಲಿಸಿದ ವಿಶೇಷ ಪಾಂಡಿತ್ಯವುಳ್ಳ ವ್ಯಕ್ತಿ. ಕೇವಲ ಭಾಷಣಗಳಿಗೆ ಸೀಮಿತರಾದವರಲ್ಲ, ತಮ್ಮ ಅಧ್ಯಯನದ ಪ್ರತಿಫಲವನ್ನು ವಿಶ್ವಶ್ರೇಷ್ಠ ಸಂವಿಧಾನದ ಮೂಲಕ ದೇಶಕ್ಕೆ ಕೊಡುಗೆಯಾಗಿ ನೀಡಿದರು ಎಂದು ಪ್ರೊ. ಕೃಷ್ಣನಾಯ್ಕ ತಿಳಿಸಿದರು.
ತಾಲೂಕು ಸೌಧದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್. ಅಂಬೇಡ್ಕರ ೧೩೩ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.ಬುಡಕಟ್ಟುಗಳ ಒಳಗಿನ ಸಂಘರ್ಷದ ಪ್ರತಿಫಲದ ಸೋಲು- ಗೆಲುವಿನ ಸಂಕೇತವಾಗಿ ಸಮಾಜದಲ್ಲಿ ಮೇಲು- ಕೀಳು ಸೃಷ್ಟಿಯಾಯಿತು ಎಂದರು.
ತಾಪಂ ಇಒ ರಾಜೇಂದ್ರ ಭಟ್ಟ ಕಾರ್ಯಕ್ರಮ ಉದ್ಘಾಟಿಸಿ, ಅಂಬೇಡ್ಕರ ವ್ಯಕ್ತಿತ್ವ ಹಾಗೂ ಅವರ ಚಿಂತನೆಗಳು ಸದಾ ಅನುಕರಣೀಯ ಎಂದರು.ಉಪವಿಭಾಗಾಧಿಖಾರಿ ಕಚೇರಿಯ ತಹಸೀಲ್ದಾರ್ ಅಶೋಕ ಭಟ್ಟ ಮಾತನಾಡಿ, ಅಂಬೇಡ್ಕರ ದೇಶದ ಶಕ್ತಿ, ದೇಶಕ್ಕೆ ಸಂವಿಧಾನದ ಮೂಲಕ ಭದ್ರ ಬುನಾದಿ ಹಾಕಿದರು. ಸಂವಿಧಾನ ಪ್ರತಿಯೊಬ್ಬರ ಸುಸ್ಥಿರ ಬದುಕಿಗೆ ದಾರಿ ತೋರಿಸಿಕೊಟ್ಟಿದೆ ಎಂದರು.
ದಲಿತ ಸಂಘಟನೆಯ ಮುಖಂಡ ಬೊಮ್ಮಯ್ಯ ಹಳ್ಳೇರ, ಸಂವಿಧಾನಕ್ಕೆ ಸರಿಸಾಟಿ ಬೇರೆ ಇಲ್ಲ. ಸಂವಿಧಾನದಿಂದ ಎಲ್ಲ ವರ್ಗದವರ ಬದುಕು ಸುಗಮವಾಗಲು ಕಾರಣವಾಗಿದೆ ಎಂದರು.ತಹಸೀಲ್ದಾರ್ ಪ್ರವೀಣ ಕರಾಂಡೆ, ಕೃಷ್ಣ ನಾಯ್ಕ ವಿರಚಿತ ಅಂಬೇಡ್ಕರ ಅರಿವು ಎಂಬ ಪುಸ್ತಕ ಬಿಡುಗಡೆಗೊಳಿಸಿ, ಅಂಬೇಡ್ಕರ ಅವರ ಪುಸ್ತಕ ಹಾಗೂ ಶಿಕ್ಷಣಪ್ರೇಮ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಸಮಾಜ ಜಾಗೃತಿಗೆ ಕಾರಣವಾದ ಅಂಬೇಡ್ಕರ ಅವರು ಭಾರತರತ್ನ ಮಾತ್ರವಲ್ಲ ವಿಶ್ವರತ್ನ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಭಾರತಿ ಆಚಾರ್ಯ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಗ್ರೇಡ್ ತಹಸೀಲ್ದಾರ್ ಸತೀಶ ಗೌಡ, ಪಶುವೈದ್ಯಾಧಿಕಾರಿ ವಿಶ್ವನಾಥ ಹೆಗಡೆ, ನಾಗರಾಜ ಶೆಟ್ಟಿ, ವಿನಾಯಕ ವೈದ್ಯ ಇತರರು ಇದ್ದರು. ಸತೀಶ ಭಟ್ ನಿರ್ವಹಿಸಿದರು.