ಸಾರಾಂಶ
ಕೊಪ್ಪಳ:
ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣ ಮತ್ತು ಅದ್ಧೂರಿಯಾಗಿ ಆಚರಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಹಿಂದೇ ಚುನಾವಣೆ ಇರುವುದರಿಂದ ಜಯಂತಿಯನ್ನು ಸರಳವಾಗಿ ಆಚರಿಸಲಾಗಿತ್ತು. ಈ ವರ್ಷ ಅರ್ಥಪೂರ್ಣ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಂ ಅವರ 118ನೇ ಜಯಂತಿಯನ್ನು ಏ. 5ರಂದು ಹಾಗೂ ಏ. 14ರಂದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿಯನ್ನು ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದೆ. ಏ. 5ರಂದು ಬೆಳಗ್ಗೆ 8.30ಕ್ಕೆ ಬಾಬು ಜಗಜೀವನರಾಂ ಅವರ ಭಾವಚಿತ್ರದ ಮೆರವಣಿಗೆಯು ಬಾಬು ಜಗಜೀವನರಾಂ ವೃತ್ತದಿಂದ ಹಾಗೂ ಏ. 14ರಂದು ಬೆಳಗ್ಗೆ 8.30ಕ್ಕೆ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭಗೊಂಡು ಸಾಹಿತ್ಯ ಭವನದ ವರೆಗೆ ನಡೆಯಲಿದೆ. ಆಯಾ ದಿನಗಳಂದು ಮಧ್ಯಾಹ್ನ 12 ಗಂಟೆಗೆ ಸಾಹಿತ್ಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮಹನೀಯರ ಭಾವಚಿತ್ರಕ್ಕೆ ಪೂಜೆ, ವಿಶೇಷ ಉಪನ್ಯಾಸ ಸೇರಿದಂತೆ ಇತರೆ ಕಾರ್ಯಕ್ರಮ ಜರುಗಲಿವೆ ಎಂದು ಹೇಳಿದರು.ಮಹನೀಯರ ಜಯಂತಿಯಂದು ಸಾಹಿತ್ಯ ಭವನ, ವೃತ್ತ ಮತ್ತು ರಸ್ತೆ ಸ್ವಚ್ಛತೆ, ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳಬೇಕು. ಜಯಂತಿಯನ್ನು ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಆಚರಿಸಬೇಕು ಎಂದ ಜಿಲ್ಲಾಧಿಕಾರಿ, ಸಾಹಿತ್ಯ ಭವನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ, ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಹಾಜರಿರಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಸಾಧನೆಗೈದ ಸಮಾಜದ ವಿದ್ಯಾರ್ಥಿಗಳು ಹಾಗೂ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಭೀಮವ್ವ ಶಿಳ್ಳೆಕ್ಯಾತರ್ ಅವರನ್ನು ಸನ್ಮಾನಿಸಬೇಕು. ಅಂಬೇಡ್ಕರ್, ಬಾಬು ಜಗಜೀವನರಾಂ ಅವರ ಕುರಿತು ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಚರ್ಚಾ ಸ್ಪರ್ಧೆ, ಪ್ರಬಂಧ ಹಾಗೂ ವೇಷಭೂಷಣ ಸ್ಪರ್ಧೆ ಏರ್ಪಡಿಸಬೇಕೆಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಹೇಳಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೋಗಲದ, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಹಳ್ಳಿ, ನಗರಸಭೆ ಪೌರಾಯುಕ್ತ ಗಣಪತಿ ಪಾಟೀಲ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ. ಬಸವರಾಜ, ಸಮಾಜದ ಮುಖಂಡರಾದ ಗೂಳಪ್ಪ ಹಲಗೇರಿ, ಗಾಳೇಪ್ಪ ಪೂಜಾರ, ಸಿದ್ದೇಶ ಪೂಜಾರ, ಯಲ್ಲಪ್ಪ ಬಳಗಾನೂರ, ಸಿದ್ದರಾಮಪ್ಪ ಹೊಸಮನಿ, ಬಿ. ಜ್ಞಾನ ಸುಂದರ, ರಾಮಣ್ಣ ಕಂದಾರಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.