ಅಂಬೇಡ್ಕರ್ ಫೋಟೋ, ಬುದ್ಧ ಪುತ್ಥಳಿ ಭಗ್ನ

| Published : Oct 25 2025, 01:00 AM IST

ಸಾರಾಂಶ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಗೂ ಭಗವಾನ್ ಬುದ್ಧರ ಪುತ್ಥಳಿಯನ್ನು ಭಗ್ನಗೊಳಿಸಿ ವಿಕೃತಿ ಮೆರೆದ ಘಟನೆ ನಡೆದಿರುವ ತಾಲೂಕಿನ ಜ್ಯೋತಿಗೌಡನಪುರಕ್ಕೆ ಮಾಜಿ ಸಚಿವ ಎನ್.ಮಹೇಶ್, ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಗೂ ಭಗವಾನ್ ಬುದ್ಧರ ಪುತ್ಥಳಿಯನ್ನು ಭಗ್ನಗೊಳಿಸಿ ವಿಕೃತಿ ಮೆರೆದ ಘಟನೆ ನಡೆದಿರುವ ತಾಲೂಕಿನ ಜ್ಯೋತಿಗೌಡನಪುರಕ್ಕೆ ಮಾಜಿ ಸಚಿವ ಎನ್.ಮಹೇಶ್, ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಹಾಗೂ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.

ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಜ್ಯೋತಿಗೌಡನಪುರದಲ್ಲಿ ಯಾರೋ ಕಿಡಿಗೇಡಿಗಳು ಅಂಬೇಡ್ಕ‌ರ್ ಭಾವಚಿತ್ರ ಹರಿದು, ಬುದ್ಧ ಪುತ್ಧಳಿ ವಿಘ್ನಗೊಳಿಸಿರುವುದು ಅತ್ಯಂತ ಖಂಡನೀಯವಾಗಿದೆ. ಅಪರಾಧಿಗಳು ಯಾರೇ ಆಗಲಿ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವರುಣಾ ವಿಧಾನಸಭಾ ಕ್ಷೇತ್ರದ ವಾಜಮಂಗಲದಲ್ಲಿ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿಂಧುವಳ್ಳಿ ಇಂತಹ ಘಟನೆ ನಡೆದಿದೆ. ಜ್ಯೋತಿಗೌಡನಪುರ 3ನೇ ಘಟನೆ ಆಗಿದೆ. ಈ ಮೂರು ಘಟನೆಗಳು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನವಲ್ಲ. ಭಾರತದ ಸಂವಿಧಾನದ ಶಿಲ್ಪಿಗೆ ಅವಮಾನ ಮಾಡುವ ಮೂಲಕ ದೇಶದ್ರೋಹದ ಅಪರಾಧ ಮಾಡಿದ್ದಾರೆ. ಪೊಲೀಸರು, ಸರ್ಕಾರ ಈ ಘಟನೆಯನ್ನು ತೀವ್ರವಾಗಿ ಪರಿಗಣಿಸಿ ಅಪರಾಧಿಗಳ ವಿರುದ್ಧ ದೇಶದ್ರೋಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾದ್ಯಂತ ಎಲ್ಲ ರಾಷ್ಟ್ರನಾಯಕರು, ಮಹನೀಯರ ಪುತ್ಥಳಿ ಮುಂಭಾಗದಲ್ಲಿ ಜಿಲ್ಲಾಡಳಿತದ ವತಿಯಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಜ್ಯೋತಿ ಗೌಡನಪುರ ಗ್ರಾಮದಲ್ಲಿ ನಡೆದಿರುವ ಘಟನೆಯ ಆರೋಪಿಗಳನ್ನು ನಿಗದಿತ ಅವಧಿಯಲ್ಲಿ ಬಂಧಿಸಬೇಕು ಎಂದು ಒತ್ತಾಯಿಸಿದರು.

ನಂಜನಗೂಡು ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ಜ್ಯೋತಿಗೌಡನಪುರದಲ್ಲಿ ಪ್ರತಿಷ್ಠಾಪಿಸಿದ್ದ ಬುದ್ಧನ ವಿಗ್ರಹಗಳನ್ನು ಭಗ್ಮಗೊಳಿಸಿ ವಿವಿಧೆಡೆ ಅಳವಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಫ್ಲೆಕ್ಸ್ ಹಾಗೂ ಫೋಟೋಗಳನ್ನು ಹರಿದು ಹಾಕಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ ಮಾತನಾಡಿ, ಜ್ಯೋತಿಗೌಡನಪುರದಲ್ಲಿ ಪ್ರತಿಷ್ಠಾಪಿಸಿದ್ದ ಬುದ್ಧನ ವಿಗ್ರಹಗಳನ್ನು ಭಗ್ಮಗೊಳಿಸಿ ವಿವಿಧೆಡೆ ಅಳವಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಫ್ಲೆಕ್ಸ್ ಹಾಗೂ ಫೋಟೋಗಳನ್ನು ಹರಿದು ಹಾಕಲಾಗಿರುವ ಘಟನೆ ಖಂಡನೀಯ. ಇದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ವಿಚಾರವಾಗಿದೆ ಎಂದರು.

ಈಸಂದರ್ಭದಲ್ಲಿ ಮುಖಂಡ, ವೇಣುಗೋಪಾಲ , ಚಿಗುರುಬಂಗಾರು, ಕೆ.ನಾಗರಾಜು, ಶಶಿ ಇತರರು ಹಾಜರಿದ್ದರು.