ಯಲ್ಲಾಪುರ: ಡಾ. ಬಿ.ಆರ್. ಅಂಬೇಡ್ಕರ್ ಅವರು ಜಾತ್ಯತೀತ ಸಂದೇಶವನ್ನು ಜಗತ್ತಿಗೆ ಸಾರಿದ್ದಾರೆ. ಅವರ ಮಾನವೀಯ ಕಳಕಳಿ ಅನುಕರಣೀಯ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಅಡಿಕೆ ಭವನದಲ್ಲಿ ಬುಧವಾರ ಉತ್ತರ ಕನ್ನಡ ಜಿಲ್ಲಾ ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಉದ್ಘಾಟಿಸಿ, ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಂಬೇಡ್ಕರ್ ಒಂದು ಸಮಾಜಕ್ಕೆ ಸೀಮಿತ ಅಲ್ಲ ಎನ್ನುವ ತಳಹದಿಯನ್ನು ಸಂಘಟನೆ ತೋರಿಸಿಕೊಟ್ಟಿದೆ. ಮಾನವತಾವಾದಿ, ಎಲ್ಲ ಜಾತಿಯವರನ್ನು ಜೋಡಿಸಿಕೊಂಡು ಹೋಗಬೇಕು. ಮಕ್ಕಳು ಪುಸ್ತಕದ ಜ್ಞಾನದ ಜತೆಗೆ ಸಾಮಾಜಿಕ ಆಗುಹೋಗುಗಳ ಬಗೆಗೂ ಅರಿವು ಹೊಂದಬೇಕು. ವಿದ್ಯಾರ್ಥಿಗಳು ಪರಿಪೂರ್ಣ ಜ್ಞಾನ ಹೊಂದಬೇಕು ಎಂದರು. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಅಂಬೇಡ್ಕರ್ ಆದರ್ಶಗಳು ಸಾರ್ವಕಾಲಿಕವಾದದ್ದು ಎಂದರು.ಎಂ.ಎಲ್.ಸಿ. ಶಾಂತಾರಾಮ ಸಿದ್ದಿ ಮಾತನಾಡಿ, ಆಧ್ಯಾತ್ಮಿಕ ಕ್ಷೇತ್ರದಲ್ಲಿ ಭಗವದ್ಗೀತೆ ಎಷ್ಟು ಪ್ರಾಮುಖ್ಯತೆ ಪಡೆದಿದೆಯೋ ಸಂವಿಧಾನವೂ ಭೌತಿಕವಾಗಿ ಅಷ್ಟೇ ಮುಖ್ಯವಾಗಿದೆ. ಸಂವಿಧಾನ ಭೌತಿಕ ಜೀವನದ ಭಗವದ್ಗೀತೆಯಾಗಿದೆ. ಕೇವಲ ಸೌಲಭ್ಯ ಪಡೆಯುವುದಕ್ಕಾಗಿ ಜಾತಿ ಬಳಸಿಕೊಳ್ಳುವವರು, ತಮ್ಮ ಜಾತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಮುಜುಗರ ಪಡಬಾರದು ಎಂದರು.
ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಮಾತನಾಡಿ, ಸಮಾನ ಹಕ್ಕು, ಶಕ್ತಿಯನ್ನು ಎಲ್ಲರೂ ಹೊಂದಲು ಡಾ. ಅಂಬೇಡ್ಕರ್ ಕಾರಣ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯುವ ಮೂಲಕ ಸಂವಿಧಾನದ ಆಶಯಗಳನ್ನು ಗೌರವಿಸಬೇಕು ಎಂದರು.ಕಾರ್ಯನಿರತ ಪತ್ರಿಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಬಿದ್ರೆಮನೆ, ವಿವಿಧ ಸಂಘಟನೆಗಳ ಪ್ರಮುಖರಾದ ಎಸ್ ಫಕೀರಪ್ಪ, ಚಿದಾನಂದ ಹರಿಜನ, ಭೀಮಶಿ ವಾಲ್ಮೀಕಿ, ಮಾರುತಿ ಬೋವಿವಡ್ಡರ್, ನಾಗೇಶ ಬೋವಿವಡ್ಡರ್, ದ್ಯಾಮಣ್ಣ ಬೋವಿವಡ್ಡರ್, ಅರ್ಜುನ ಬೆಂಗೇರಿ, ಗಿರೀಶ ಎಸ್.ಎಸ್., ಸುಮನ್ ಜಿ. ಹರಿಜನ, ಹನುಮಂತಪ್ಪ, ಎಂ.ಡಿ. ಮುಲ್ಲಾ, ರಾಮು ನಾಯ್ಕ, ಗಣೇಶ ಹೆಗಡೆ ಪಣತಗೇರಿ, ವಿ.ಎಸ್. ಭಟ್ಟ ಉಪಳೇಶ್ವರ, ವಿಲ್ಸನ್ ಫರ್ನಾಂಡೀಸ್, ಎ.ಎ. ಶೇಖ್, ನರಸಿಂಹ ನಾಯ್ಕ, ಎಲಿಶಾ ಎಲಕಪಾಟಿ, ಯಲ್ಲಪ್ಪ ಹೊಸ್ಮನಿ, ಜಗನ್ನಾಥ ರೇವಣಕರ, ಸಂತೋಷ ಪಾಟಣಕರ್, ಅಶೋಕ ಕೊರವರ ಉಪಸ್ಥಿತರಿದ್ದರು.
ಇದೇ ವೇಳೆ ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಕ್ರೀಡಾ ಸಾಧಕರನ್ನು ಗೌರವಿಸಲಾಯಿತು. ಕೇಬಲ್ ನಾಗೇಶ ಕಾರ್ಯಕ್ರಮ ನಿರೂಪಿಸಿದರು.