ಅಂಬೇಡ್ಕರ್ ಬದುಕು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ

| Published : Apr 16 2025, 12:47 AM IST

ಸಾರಾಂಶ

ಸೊರಬ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಜೀವನ ಶೈಲಿ, ಕೊಡುಗೆಗಳು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿದಾಯಕ ಎಂದು ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು.

ಸೊರಬ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಜೀವನ ಶೈಲಿ, ಕೊಡುಗೆಗಳು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿದಾಯಕ ಎಂದು ಉಪನ್ಯಾಸಕ ರವಿ ಕಲ್ಲಂಬಿ ಹೇಳಿದರು. ಪಟ್ಟಣದ ಡಾ.ರಾಜ್ ಕಲಾಕ್ಷೇತ್ರದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಹೋರಾಟಗಳ ಮೂಲಕ ಶೋಷಿತ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಒದಗಿಸಿದ ಮಹಾನ್ ಚೇತನ ಅಂಬೇಡ್ಕರ್ ಆಗಿದ್ದಾರೆ. ಸಂವಿಧಾನ ರಚಿಸುವ ಮೂಲಕ ಸಮತಾ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಕೊಡುಗೆ ಅನನ್ಯ. ದಲಿತರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ, ರಾಜಕೀಯವಾಗಿ ಪ್ರಾಬಲ್ಯತೆ ಹೊಂದಲು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು. ಇಡೀ ವಿಶ್ವವೇ ಗೌರವಿಸಲ್ಪಡುವ ಮಹಾ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಆಗಿದ್ದಾರೆ ಎಂದರು. ಡಾ.ಬಾಬು ಜಗಜೀವನ್ ರಾಂ ಅವರ ಕುರಿತು ಉಪನ್ಯಾಸ ನೀಡಿದ ಸಾಮಾಜಿಕ ಕಾರ್ಯಕರ್ತ ನಾಗರಾಜ್ ನ್ಯಾಮತಿ, ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಆಡಳಿತದುದ್ದಕ್ಕೂ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದವರು ಬಾಬು ಜಗಜೀವನ್ ರಾಂ ಆಗಿದ್ದಾರೆ. ಸುಮಾರು ೫೦ ವರ್ಷಗಳ ರಾಜಕೀಯ ಜೀವನದಲ್ಲಿ ದೇಶದ ಅಭಿವೃದ್ಧಿಗೆ ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದು ಮುನ್ನುಡಿ ಬರೆದಿದ್ದರು ಎಂದರು. ಪೊಲೀಸ್ ವೃತ್ತ ನಿರೀಕ್ಷಕ ಎಲ್.ರಾಜಶೇಖರ್, ತಾಪಂ ಇಒ ಡಾ.ಎನ್.ಆರ್.ಪ್ರದೀಪ್ ಕುಮಾರ್, ಬಿಇಒ ಆರ್.ಪುಷ್ಪಾ ಮಾತನಾಡಿದರು. ಇದೇ ವೇಳೆ ಸೂಲಗಿತ್ತಿ ಶಾಂತಮ್ಮ ಮೂಗೂರು, ಉದ್ರಿ ಗ್ರಾಮ ಪಂಚಾಯಿತಿ ಪಿಡಿಒ ಹೋಮೇಶ್, ಗುತ್ಯಪ್ಪ ಮತ್ತು ಕೆಂಚಮ್ಮ ಹುರುಳಿಕೊಪ್ಪ ಹಾಗೂ ಕ್ರೀಡಾಪಟು ನಂದಿತಾ ಯಲವಳ್ಳಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅಂತರ್ಜಾತಿ ವಿವಾಹವಾದವರಿಗೆ ಪ್ರೋತ್ಸಾಹ ಧನದ ಬಾಂಡ್ ವಿತರಿಸಲಾಯಿತು.ತಹಸೀಲ್ದಾರ್ ಮಂಜುಳಾ ಬಿ.ಹೆಗಡಾಳ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಇಕ್ಬಾಲ್ ಜಾತಿಗೇರ, ಅಧೀಕ್ಷಕಿ ಅಶ್ವಿನಿ ಭಂಡಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಜಿ.ಕುಮಾರ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ್, ಪಿಡಬ್ಲ್ಮೂಡಿ ಎಇಇ ಯಶೋಧರ್, ಜಿಪಂ ಎಇಇ ಕೆ.ಮುರುಗೇಶಿ, ಸಿಡಿಪಿಒ ಮಂಜಪ್ಪ, ಟಿಎಚ್‌ಒ ಡಾ.ನವೀನ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಚಂದನ್, ಜಗದೀಶ್, ನಾಗರಾಜ್ ಅನ್ವೇಕರ್, ದಲಿತ ಸಂಘಟನೆ ಮುಖಂಡರಾದ ಗುರುರಾಜ್, ಬಂಗಾರಪ್ಪ ನಿಟ್ಟಕ್ಕಿ, ಮಹೇಶ್ ಶಕುನವಳ್ಳಿ, ಹರೀಶ್ ಚಿಟ್ಟೂರು, ನಾಗರಾಜ ಹುರಳಿಕೊಪ್ಪ, ಬಸವರಾಜ್ ಹಸ್ವಿ, ಪುರುಷೋತ್ತಮ ಗುಡ್ಡೆಕೊಪ್ಪ, ಅಭಿಷೇಕ್ ಹುರಳಿಕೊಪ್ಪ ಇತರರಿದ್ದರು.