ಸಾರಾಂಶ
ಕನ್ನಡಪ್ರಭವಾರ್ತೆ ಮಂಡ್ಯ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಹಿತ್ಯವೇ ದಲಿತ ಸಾಹಿತ್ಯದ ಮೂಲಸೆಲೆ. ದಲಿತ-ಬಂಡಾಯ ಸಾಹಿತ್ಯಗಳು ಅನೇಕ ಸಾಮಾಜಿಕ ಪಲ್ಲಟಗಳಿಗೆ ಸಾಕ್ಷಿಯಾದವು. ದಲಿತ ಲೇಖಕರ ಸಂಘಟನೆ ಹಾಗೂ ಬಂಡಾಯ ಸಾಹಿತ್ಯದ ಬೆಳವಣಿಗೆ ವೈಚಾರಿಕ ನೆಲೆಯ ವಿಚಾರ ಕ್ರಾಂತಿಗೆ ನಾಂದಿ ಹಾಡಿತು ಎಂದು ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮನಾಂತರ ವೇದಿಕೆ-೧ ರಲ್ಲಿ ನಡೆದ "ದಲಿತ ಸಾಹಿತ್ಯದ ನೆಲೆಗಳು " ಕುರಿತ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
೮೦ರ ದಶಕದವರೆಗೆ ಅಂಬೇಡ್ಕರ್ ಸಾಹಿತ್ಯ ಪರಿಚಯವೇ ಇರಲಿಲ್ಲ. ನಂತರದಲ್ಲಿ ದಲಿತ-ಬಂಡಾಯ ಸಾಹಿತ್ಯ ಅಗಾಧವಾಗಿ ಬೆಳೆದುಬಂತು. ದೇವನೂರು ಮಹಾದೇವ ಸೇರಿ ಅನೇಕ ಸಾಹಿತಿಗಳ ಜನಮುಖಿ ಚಿಂತನೆಯ ಕರೆ, ದಲಿತ ಸಾಹಿತ್ಯ ಬೆಳವಣಿಗೆ ಮೇಲೆ ಪರಿಣಾಮ ಬೀರಿತು.ಕವಿ ಸಿದ್ಧಲಿಂಗಯ್ಯ ಅವರು ಬರೆದ ಕವಿತೆಗಳು ದಲಿತ ಸಾಹಿತ್ಯಕ್ಕೆ ಹೊಸ ತಿರುವು ನೀಡಿದವು ಎಂದರು.
ಕೇಂದ್ರ ಸಚಿವರೊಬ್ಬರು "ಅಂಬೇಡ್ಕರ್ " ಎಂಬುದು ಫ್ಯಾಷನ್ ಆಗಿದೆ. ಅಂಬೇಡ್ಕರ್ ಬದಲುದೇವರ ಜಪ ಮಾಡಿದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ, ಈ ದೇಶದಲ್ಲಿ ಜಾತಿ ವ್ಯವಸ್ಥೆ ಹಾಗೂ ಅಸ್ಪೃಶ್ಯತೆ ಇರುವವರೆಗೆ ಅಂಬೇಡ್ಕರ್ ಜೀವಂತವಾಗಿರುತ್ತಾರೆ. ದುರಾದೃಷ್ಟವಶಾತ್ ಈ ದೇಶದಲ್ಲಿ ಜಾತಿವಿನಾಶವಾಗುತ್ತಿಲ್ಲ. ಅಸ್ಪೃಶ್ಯತೆ ನಿವಾರಣೆಯಾಗಿಲ್ಲ. ಇಂದಿಗೂ ದಲಿತ ಸಮುದಾಯ ಅವಮಾನ ಎದುರಿಸುತ್ತಿವೆ. ದಲಿತರು ದೇವಸ್ಥಾನ ಪ್ರವೇಶ ಮಾಡಿದ್ದಾರೆಂಬ ಕಾರಣಕ್ಕಾಗಿಯೇ ದೇವರು ಮೈಲಿಗೆಯಾದ ಎಂದು ದೇವರನ್ನು ದೇವಸ್ಥಾನದಿಂದ ಹೊರ ತಂದ ಪ್ರಕರಣಗಳು ಇಂದಿಗೂ ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಶೋಷಿತರ ಭಾಷಾ ಅನನ್ಯತೆಯ ಹುಡುಕಾಟವಿಲ್ಲ: "ಕನ್ನಡ ಸಂವರ್ಧನೆಯಲ್ಲಿ ತಳ ಸಮುದಾಯಗಳ ಪಾತ್ರ " ಕುರಿತು ಮಾತನಾಡಿದಲೇಖಕ ಹಾಗೂ ಜನಮುಖಿ ಚಿಂತಕ ಪ್ರೊ.ಚೆಲುವರಾಜು ಅವರು, ತಳ ಸಮುದಾಯಗಳಲ್ಲಿರುವ ಕನ್ನಡದ ಶಬ್ಧ ಸಂಪತ್ತಿನ ಕಡೆ ಯಾರೂ ಕಾಳಜಿ ವಹಿಸಿಲ್ಲ. ಕನ್ನಡದ ನಿಘಂಟು ರಚಿಸಿದ ರೆವರೆಂಡ್ ಕಿಟೆಲ್ ಅವರು ಸಹ ಶೋಷಿತ ಸಮುದಾಯಗಳಲ್ಲಿ ಹುದುಗಿರುವ ಭಾಷಾ ಅನನ್ಯತೆಯ ಹುಡುಕಾಟ ನಡೆಸಲಿಲ್ಲ. ಹೀಗಾಗಿಯೇ ದಲಿತ ಸಮಾಜದಲ್ಲಿನ ಅಭಿವ್ಯಕ್ತಿ ಅನಾವರಣಗೊಳ್ಳಲೇ ಇಲ್ಲ ಎಂದು ಹೇಳಿದರು.
ಶಿಲಾಯುಗದ ಜಗತ್ತು ಹಾಗೂ ಡಿಜಟಲೀಕರಣದ ಜಗತ್ತಿನ ನಡುವೆ ಶೋಷಿತ ಸಮುದಾಯದ ಒಂದು ಜಗತ್ತಿದೆ ಎಂಬುದನ್ನು ಅನೇಕರು ಮರೆತುಬಿಟ್ಟರು. ಈ ಸಮುದಾಯವೇ ಕನ್ನಡ ಉಳಿವಿಗೆ ಮೂಲ ಕಾರಣ ಎಂಬ ಅಂಶವನ್ನು ಪರಿಗಣಿಸಲೇ ಇಲ್ಲ. ಪ್ರತಿಯೊಂದು ತಳ ಸಮುದಾಯದಲ್ಲೊಂದು ಕನ್ನಡವಿದೆ; ಭಾಷಾ ಪರಂಪರೆಯಿದೆ ಎಂಬುದು ಕನ್ನಡ ನಿಘಂಟು ರಚಿಸುವವರು ಗಮನಿಸಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ, ಕನ್ನಡದ ಶಾಲೆಗಳು ಓದುತ್ತಿರುವ ಮಕ್ಕಳ ಪೈಕಿ ಬಹುತೇಕರು ದಲಿತ ಸಮುದಾಯದ ಮಕ್ಕಳು. ಇವರೇ ಕನ್ನಡ ಉಳಿಸಿ, ಬೆಳೆಸುವ ಕೈಂಕರ್ಯದಲ್ಲಿ ತೊಡಗಿಸಿಕೊಂಡವರು. ಬರೀ ಡಿಜಟಲೀಕರಣದಿಂದ ಕನ್ನಡ ಬೆಳವಣಿಗೆ ಸಾಧ್ಯವಾಗದು. ದಲಿತ ಸಮುದಾಯದೊಳಗಿನ ಕನ್ನಡವನ್ನು ಅನಾವರಣಗೊಳಿಸುವ ಹಾಗೂ ಕನ್ನಡಪರಂಪರೆಯನ್ನು ಜತನದಿಂದ ಕಾಪಾಡಿಕೊಳ್ಳುವ ಕೆಲಸವಾದಲ್ಲಿ ಮಾತ್ರ ಕನ್ನಡ ತಂತಾನೇ ಪ್ರಗತಿ ಕಂಡುಕೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು."ದಲಿತ ಸಾಹಿತ್ಯ ಚಳವಳಿ ಮತ್ತು ಮಹಿಳೆʼ ವಿಷಯ ಕುರಿತು ಮಾತನಾಡಿದ ಲೇಖಕಿ ಡಾ.ಜಯದೇವಿ ಗಾಯಕವಾಡ ಅವರು, ೧೨ನೇ ಶತಮಾನದಿಂದಲೂ ದಲಿತ ಮಹಿಳೆಯರು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿರುವುದು ಕಂಡು ಬರುತ್ತದೆ. ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಅಸ್ವಿತ್ವ ಪಡೆದ ಬಳಿಕ ರಾಜ್ಯದಲ್ಲಿ ದಲಿತ ಸಾಹಿತಿಗಳು, ಚಿಂತಕರು, ವಿದ್ವಾಂಸರು, ಹೋರಾಟಗಾರರು, ಗಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದುಬಂದರು. ದಲಿತ ಸಂಘರ್ಷ ಸಮಿತಿ ವಿಶ್ವವಿದ್ಯಾಲಯದಂತೆ ಕಾರ್ಯನಿರ್ವಹಿಸಿತು ಎಂದು ತಿಳಿಸಿದರು.
"ದಲಿತ ಸಂಘಟನೆಗಳ ಅಸ್ಮಿತೆʼ ಕುರಿತು ಡಾ.ಎಂ.ವೆಂಕಟಸ್ವಾಮಿ ಅವರು ಮಾತನಾಡಿದರು.ಸು.ಜಗದೀಶ್, ಹಾಸಿಂಪೀರ್ ವಾಲೀಕರ್, ಬಸವರಾಜ್ ಕಲ್ಲು ಸಕ್ಕರೆ ಹಾಗೂ ಸಿ.ಆರ್.ಚಂದ್ರಶೇಖರ್ ನಿರ್ವಹಿಸಿದರು.
ಗೋಷ್ಠಿಯ ನಡುವೆ ಹಿಂದಿ ಹೇರಿಕೆ ವಿರೋಧಿ ಘೋಷಣೆ :ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡುತ್ತಿದೆ. ಇದರಿಂದ ಪ್ರಾದೇಶಿಕ ಭಾಷೆಗೆ ಕುತ್ತಾಗುತ್ತಿದೆ ಎಂದು ಆರೋಪಿಸಿ ಕೆಲ ಕನ್ನಡಪರ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಗೋಷ್ಠಿಯ ವೇದಿಕೆ ಮುಂಭಾಗ ನಿಂತು ಘೋಷಣೆ ಕೂಗಿದರು.
ಗೋಷ್ಠಿಗೆ ಅಡ್ಡಿಪಡಿಸುವುದು ನಮ್ಮ ಉದ್ದೇಶವಲ್ಲ. ಕೇಂದ್ರದ ಹಿಂದಿ ಹೇರಿಕೆ ನೀತಿಯಿಂದ ಭಾಷೆ ನಶಿಸುತ್ತದೆ ಎಂಬುದಷ್ಟೇ ನಮ್ಮಆತಂಕ ಎಂದರು. ಜತೆಗೆ, "ಹಿಂದಿ ತೊಲಗಲಿ ಕನ್ನಡ ಬೆಳಗಲಿ " ಎಂದು ಕೆಲಹೊತ್ತು ಘೋಷಣೆ ಕೂಗಿದರು. ಬಳಿಕ ಗೋಷ್ಠಿ ಮುಂದುವರಿಯಿತು.