ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಭಾರತಕ್ಕೆ ಸಂವಿಧಾನ ಮೂಲಕ ಭದ್ರ ಅಡಿಪಾಯ ಹಾಕಿರುವುದು ಡಾ. ಬಿ.ಆರ್. ಅಂಬೇಡ್ಕರ್. ಮೇಲು- ಕೀಳು ಎಂಬ ಬೇಧವಿಲ್ಲದೆ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಡುವಲ್ಲಿ ಸಂವಿಧಾನದ ಕೊಡುಗೆ ಬಹುಮಹತ್ವವಾಗಿದೆ. ಇಂಥ ಬೃಹತ್ ಸಂವಿಧಾನ ಕರ್ತೃ ಅಂಬೇಡ್ಕರ್ ಅವರ ಸ್ಮರಣಾರ್ಥ ತಾಲೂಕಿನ ಅಂಬ್ಲಿಗೊಳ ಸರ್ಕಾರಿ ಶಾಲೆಯಲ್ಲಿ ಪ್ರತಿಮೆ ನಿರ್ಮಿಸುವ ಉತ್ತಮ ಕಾರ್ಯ ಸದ್ದಿಲ್ಲದೇ ನಡೆದಿದೆ. ಶಾಲೆ ಹಾಗೂ ಪೋಷಕರು, ಸಾರ್ವಜನಿಕರಲ್ಲಿ ಸಂವಿಧಾನದ ಮಹತ್ವ ಅರಿವು ಮೂಡಿಸುವುದು ಈ ಪ್ರಯತ್ನದ ಉದ್ದೇಶವಾಗಿದೆ.ಅಂಬ್ಲಿಗೊಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕ ಪಾಪಯ್ಯ ನೇತೃತ್ವದಲ್ಲಿ ಎಲ್ಲ ಶಿಕ್ಷಕರು, ಸ್ಥಳೀಯ ದಾನಿಗಳ ನೆರವಿನಿಂದ ಸಂವಿಧಾನ ಶಿಲ್ಪಿಯ ಅಂದಾಜು 13 ಅಡಿ ಎತ್ತರದ ಪ್ರತಿಮೆ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಫೆ.28ರಂದು ಲೋಕಾರ್ಪಣೆಗೆ ಸಕಲ ಸಿದ್ಧತೆ ನಡೆದಿದೆ. ಅಂದಾಜು ₹1.5 ಲಕ್ಷ ವೆಚ್ಚದಲ್ಲಿ ಈ ಪ್ರತಿಮೆ ಶಾಲೆ ಆವರಣದಲ್ಲಿ ತಲೆಯೆತ್ತಿ ನಿಲ್ಲಲಿದೆ.
ಈ ಕಾರ್ಯದಲ್ಲಿ ಮುಖ್ಯಶಿಕ್ಷಕ ಪಾಪಯ್ಯ ಅವರ ಆಸಕ್ತಿ, ಶ್ರಮ ಮೆಚ್ಚುವಂಥದು. ಬರುವ ಜೂನ್‌ನಲ್ಲಿ ಸೇವೆಯಿಂದ ನಿವೃತ್ತಿ ನಿವೃತ್ತಿ ಹೊಂದಲಿರುವ ಪಾಪಯ್ಯ ಸದಾಕ್ರಿಯಾಶೀಲ ವ್ಯಕ್ತಿತ್ವದವರು. ಸುದೀರ್ಘ ಕಾಲ ಸೇವೆ ಸಲ್ಲಿಸಿದ ಶಾಲೆಗೆ ಕೊಡುಗೆ ನೀಡುವ ಬಹು ಮಹತ್ವಾಕಾಂಕ್ಷೆಯಿಂದ ಎಲ್ಲರ ಸಹಕಾರದಿಂದ ಅಂಬೇಡ್ಕರ್ ಪ್ರತಿಮೆ ಸ್ಥಾಪನೆಗೆ ಶ್ರಮಿಸುತ್ತಿದ್ದಾರೆ.ದೇಶದಲ್ಲಿ ಸಂವಿಧಾನ ಜಾರಿಯಾಗಿ 75 ವರ್ಷ ಪೂರ್ಣಗೊಂಡಿವೆ. ಆದ್ದರಿಂದ ರಾಜ್ಯ ಸರ್ಕಾರ ವಜ್ರ ಮಹೋತ್ಸವ ವರ್ಷ ಎಂದು ಪರಿಗಣಿಸಿ ರಾಜ್ಯಾದ್ಯಂತ ಕಲಾತಂಡಗಳೊಂದಿಗೆ ಜಾಗೃತಿ ಮೂಡಿಸುತ್ತಿದೆ. ಇಂಥ ಸುಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಗ್ರಾಮ ಪಂಚಾಯಿತಿ, ಶಾಲಾಭಿವೃದ್ಧಿ ಸಮಿತಿ, ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಕರ ವಂತಿಗೆಯಿಂದ ಅಂಬೇಡ್ಕರ್ ಪ್ರತಿಮೆ ನಿರ್ಮಾಣಗೊಂಡಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಶಾಲೆ ಆವರಣಕ್ಕೆ ಆಗಮಿಸಿ, ಮಹಾನಾಯಕನ ಪ್ರತಿಮೆ ದರ್ಶನ ಪಡೆಯುತ್ತಿದ್ದಾರೆ. ಅಕ್ಕಪಕ್ಕದ ಊರಿನವರನ್ನು ಸಹ ಹೆಮ್ಮೆಯಿಂದ ಶಾಲೆಯತ್ತ ಕರೆತರುತ್ತಿದ್ದಾರೆ. ಶಿಕ್ಷಕರ ಈ ಮಹತ್ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬೆಂಗಳೂರು, ಶಿವಮೊಗ್ಗ, ಮುರುಡೇಶ್ವರ, ಶಿಕಾರಿಪುರದಲ್ಲಿ ಈಗಾಗಲೇ ಹಲವು ಮಹನೀಯರ ಪ್ರತಿಮೆಗಳ ನಿರ್ಮಿಸಿ ಪ್ರಸಿದ್ಧರಾಗಿರುವ ಕಲಾವಿದ ಕಾಶೀನಾಥ್ ಅವರ ಶಿಷ್ಯ ರಘುಶಿಲ್ಪಿ ಶಾಲೆಯ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಅತ್ಯಲ್ಪ ಅವಧಿಯಲ್ಲಿ ನಿರ್ಮಿಸಿದ್ದಾರೆ. ಕಬ್ಬಿಣ, ಸಿಮೆಂಟ್, ಮರಳು, ಇಟ್ಟಿಗೆ ಬಳಸಿ ಅಂಬೇಡ್ಕರ್ ಪ್ರತಿಮೆ ನಿರ್ಮಿಸಿದ್ದು, ಫೆ.28ರಂದು ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಅವರಿಂದ ಉದ್ಘಾಟನೆಗೆ ಸಿದ್ಧವಾಗಿದೆ.- - - ಕೋಟ್
ಸಮಾಜಮುಖಿ ಕಾರ್ಯಕ್ಕೆ ಜನಸ್ಪಂದನೆ ಮುಖ್ಯವಾಗಿದ್ದು, ಹಲವು ವರ್ಷಗಳ ಪ್ರತಿಮೆ ನಿರ್ಮಾಣದ ಕನಸಿಗೆ ಗ್ರಾಮಸ್ಥರು, ಸಾರ್ವಜನಿಕರು, ಶಿಕ್ಷಕರು ಹಾಗೂ ಗ್ರಾಪಂ ಚುನಾಯಿತ ಸದಸ್ಯರ ಸಹಕಾರ ಅವಿಸ್ಮರಣೀಯ. ಅಂಬೇಡ್ಕರ್ ಪ್ರತಿಮೆ ನಿರ್ಮಾಣದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳು- ಪಾಪಯ್ಯ ಮುಖ್ಯಶಿಕ್ಷಕ, ಸರ್ಕಾರಿ ಶಾಲೆ, ಅಂಬ್ಲಿಗೊಳ್ಳ
- - - -26ಕೆಎಸ್.ಕೆಪಿ1:ಅಂಬ್ಲಿಗೊಳ್ಳ ಸರ್ಕಾರಿ ಶಾಲೆಯಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅಂತಿಮ ಹಂತ ನೀಡುತ್ತಿರುವ ಶಿಲ್ಪಿ.