ಅಂಬೇಡ್ಕರ್ ಬಹುಮುಖಿ ವ್ಯಕ್ತಿತ್ವದ ವಿಶ್ವ ಜ್ಞಾನಿ: ಡಿಸಿ ಮೀನಾ ನಾಗರಾಜ್‌

| Published : Apr 15 2024, 01:17 AM IST

ಅಂಬೇಡ್ಕರ್ ಬಹುಮುಖಿ ವ್ಯಕ್ತಿತ್ವದ ವಿಶ್ವ ಜ್ಞಾನಿ: ಡಿಸಿ ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮ ಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿ, ಅವರು ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ, ಭಾವಚಿತ್ರಕ್ಕೆ ಪುಷ್ಪಾರ್ಚನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮ ಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿ, ಅವರು ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಭಾನುವಾರ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಹಾಗೂ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು ಪ್ರಸ್ತುತ ಮನುಕುಲದ ಉಳಿವಿಗೆ ಹಾಗೂ ದೇಶದ ಪ್ರಗತಿಗೆ ಆಧಾರ ಸ್ತಂಭ ಗಳಾಗಿವೆ. ಅವರು ವಿಶ್ವದ ಮಹಾನ್ ಸಂಶೋಧಕರು, ದೇಶದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಸುಧಾರಣೆಗಳನ್ನು ಆವಿಷ್ಕರಿಸುವ ಮೂಲಕ ದೇಶದ ಭದ್ರತೆಗೆ ಸಂವಿಧಾನ ರಚಿಸಿದ್ದಾರೆ. ಅವರ ಮೌಲ್ಯಯುತ ಚಿಂತನೆ ಮತ್ತು ಸಾಧನೆಯನ್ನು ಯುವ ಜನಾಂಗ ಸ್ಮರಿಸಿಕೊಂಡು ಹೊಸತನದ ಸಮಾಜಕ್ಕೆ ಸ್ವತಂತ್ರ ಮನಸ್ಸಿನಿಂದ ತೆರೆದುಕೊಳ್ಳಬೇಕಿದೆ ಎಂದರು.ಸಮಾನತೆ ಸಂದೇಶ ಸಾರಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಅಧ್ಯಯನದ ಶಿಸ್ತು, ಕಾರ್ಯಬದ್ಧತೆ ಮತ್ತು ಕರ್ತವ್ಯ ಪ್ರಜ್ಞೆ ಮೂಲಕ ಇಡೀ ಜಗತ್ತನ್ನೇ ಬೆಳಗಿದರು. ಸಮಾಜದ ಎಲ್ಲಾ ವರ್ಗಗಳ ಬದಲಾವಣೆಗೆ ಬೆಳಕು ತೋರಿದರು. ಅವರು ಕೌಟುಂಬಿಕ ಬದುಕಿಗೆ ಆದ್ಯತೆ ನೀಡದೆ ಶೋಷಿತ ಹಾಗೂ ದುರ್ಬಲರ ಪರವಾಗಿ ದಿಟ್ಟತನದಿಂದ ಹೋರಾಡಿದ ಮಹಾನ್ ಚೇತನ ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ, ಡಾ. ಬಿ.ಆರ್ ಅಂಬೇಡ್ಕರ್ ಆದರ್ಶ ವ್ಯಕ್ತಿತ್ವ ಮತ್ತು ಜ್ಞಾನವನ್ನು ಇಡೀ ಜಗತ್ತು ಸ್ಮರಿಸಿ ಗೌರವಿಸುತ್ತಿದೆ. ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕ ಚಿಂತನೆಗಳ ಮೂಲಕ ಸರಳೀಕರಿಸಿ ಸುಧಾರಣೆ ಮಾಡಿದ ಮೇಧಾವಿ ಎನಿಸಿಕೊಂಡಿದ್ದಾರೆ. ಅವರ ಮಾನವೀಯತೆ, ಸಮಾನತೆ ಮತ್ತು ಮೌಲ್ಯಗಳು ಇಂದಿಗೂ ಪ್ರಸ್ತುತ. ಯುವ ಜನಾಂಗ ಅವರ ಚಿಂತನೆಗಳನ್ನು ಅಧ್ಯಯನ ಮಾಡಿ, ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ್ ಅಮ್ಟೆ ಮಾತನಾಡಿ, ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಜೀವನ, ಸಾಧನೆ, ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಿದೆ. ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದಿಂದ ವಿಶ್ವದಲ್ಲಿಯೇ ಭಾರತ ಮಾದರಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣಮೂರ್ತಿ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯೋಗೀಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು. 14 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಪಂ ಸಭಾಂಗಣದಲ್ಲಿ ಭಾನುವಾರ ಡಾ.ಬಿ.ಆರ್‌. ಅಂಬೇಡ್ಕರ್‌ ಜಯಂತಿ ಆಚರಿಸಲಾಯಿತು. ಡಿಸಿ ಮೀನಾ ನಾಗರಾಜ್‌, ಎಸ್ಪಿ ಡಾ. ವಿಕ್ರಂ ಅಮಟೆ ಇದ್ದರು.