ಸಾರಾಂಶ
ಹಾವೇರಿ: ಆರೂವರೆ ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಬಡವರ, ದೀನ ದಲಿತರ, ಹಿಂದುಳಿದ ವರ್ಗಗಳ ಶ್ರೇಯಸ್ಸಿಗೆ ಶ್ರಮಿಸಲು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ರೂಪಿಸಿದ ಹೆಗ್ಗಳಿಕೆ ಹೊಂದಿದೆ. ಹತ್ತು ವರ್ಷ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಉದ್ದೇಶದಿಂದ ಭಾವನಾತ್ಮಕ ವಿಷಯಗಳಲ್ಲಿ ಉತ್ಸುಕತೆ ಹೊಂದಿದೆ ಎಂದು ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಹೇಳಿದರು.ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದಲ್ಲಿ ಭಾನುವಾರ ಚುನಾವಣಾ ಪ್ರಚಾರ ಕೈಗೊಂಡು ಮತಯಾಚಿಸಿ ಮಾತನಾಡಿದರು. ಬಡ ಕುಟುಂಬದ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಸದಾ ಅಪಸ್ವರ ಎತ್ತುವ ಮೂಲಕ ಬಂಡವಾಳಶಾಹಿಗಳ ಪರ ತನ್ನ ಒಲವನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕೆಂದು ಮನವಿ ಮಾಡಿದರು.ಶಾಸಕ ಯು.ಬಿ. ಬಣಕಾರ ಮಾತನಾಡಿ, ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿ ಯೋಜನೆಗಳು ಐದು ವರ್ಷಗಳ ಕಾಲ ಮುಂದುವರಿಯಲಿವೆ. ಒಂದು ವೇಳೆ ಯೋಜನೆ ಸ್ಥಗಿತಗೊಂಡರೆ ರಾಜಕೀಯವಾಗಿ ನಿವೃತ್ತಿ ಹೊಂದುವೆ. ಯೋಜನೆ ಮುಂದುವರಿದರೆ ಬಿಜೆಪಿ ನಾಯಕರು ರಾಜಕೀಯವಾಗಿ ನಿವೃತ್ತಿ ಹೊಂದುತ್ತೀರಾ ಎಂದು ಗ್ಯಾರಂಟಿ ಯೋಜನೆಗೆ ಗೊಂದಲ ಮೂಡಿಸುವ ನಾಯಕರಿಗೆ ಸವಾಲು ಹಾಕಿದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಗ್ಯಾರಂಟಿ ಯೋಜನೆ ಜಾರಿಗೊಳಿಸಿರುವ ಕಾಂಗ್ರೆಸ್ ಸರ್ಕಾರ ತನ್ನ ಮಾತಿನಂತೆ ನಡೆದುಕೊಂಡಿದೆ. ಉದ್ಯಮಿಗಳ, ಬಂಡವಾಳಶಾಹಿಗಳ, ಶ್ರೀಮಂತರ ಸಾಲ ಮನ್ನಾ ಮಾಡುವ ವಚನ ಭ್ರಷ್ಟ ಬಿಜೆಪಿಯನ್ನು ಧಿಕ್ಕರಿಸಬೇಕು ಎಂದು ಹೇಳಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ ಹಾಗೂ ರಮೇಶ ಮಡಿವಾಳರ, ಮುಖಂಡರಾದ ಹೇಮಪ್ಪ ಮುದರಡ್ಡೇರ, ನಿಜಲಿಂಗಪ್ಪ, ನಿಂಗಪ್ಪ ಚಳಗೇರಿ, ಪ್ರಕಾಶ ಬನ್ನಿಕೋಡ, ಮುದರಡ್ಡೇರ, ಮಂಜನಗೌಡ ಗುಡದಳ್ಳಿ, ಮಹೇಶ ಗುಬ್ಬಿ, ಲೀಲಾವತಿ ಗೋಣಿಗೇರ, ನಿಂಗಪ್ಪ ಕಡೂರ, ದುರಗಪ್ಪ ನೀರಲಗಿ, ವಿ.ಎನ್. ಪ್ಯಾಟಿಗೌಡ್ರ, ಸುಮಾ ಪಾಟೀಲ, ಶಶಿಕಲಾ ಹಾದಿಹಳ್ಳಿ, ನಿಜಲಿಂಗಪ್ಪರಡ್ಡಿ ಮರಿಬಸಪ್ಪನವರ, ಆರ್.ಎಸ್. ಗೌರಕ್ಕನವರ, ಹನುಮಂತಗೌಡ ಭರಮಣ್ಣನವರ ಇದ್ದರು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿ: ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಯು.ಬಿ. ಬಣಕಾರ ಅವರು ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಫೋನ್ ಕರೆ ಮಾಡಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಮಾಹಿತಿ ಪಡೆದರು. ಆಗ ಮೊಬೈಲ್ ಮೂಲಕವೇ ಮೈಕ್‌ನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಮ್ಮ ಪಕ್ಷದ ಅಭ್ಯರ್ಥಿ ಆನಂದಸ್ವಾಮಿ ಅವರನ್ನು ಗೆಲ್ಲಿಸಿ ಎಂದು ಹೇಳುತ್ತಿದ್ದಂತೆ ಜಮಾಯಿಸಿದ್ದ ಜನರು ಹರ್ಷದಿಂದ ಕೇಕೆ ಹಾಕಿದರು.