ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಇಡೀ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ಬರೆಯುವ ಮೂಲಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ದಲಿತ ಮುಖಂಡ ಹರೀಶ್ ನಟಿಕಾರ ಹೇಳಿದರು.
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಇಡೀ ದೇಶಕ್ಕೆ ಸರ್ವಶ್ರೇಷ್ಠ ಸಂವಿಧಾನ ಬರೆಯುವ ಮೂಲಕ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ದಲಿತ ಮುಖಂಡ ಹರೀಶ್ ನಟಿಕಾರ ಹೇಳಿದರು.ಪಟ್ಟಣದ ತಾಲೂಕು ಆಡಳಿತ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತಪರ ಸಂಘಟನೆ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರು ನಮಗೆ ಸಂವಿಧಾನ ನೀಡಿದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬರೂ ಒಂದೇ ಎಂಬ ಭಾವನೆಯಿಂದ ಬಾಳಬೇಕು, ಸಮಾನತೆಯಿಂದ ಬದುಕಬೇಕು ಎಂಬುದು ಅವರ ಉದ್ದೇಶವಾಗಿತ್ತು. ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ, ಶಿಕ್ಷಣ ಸಿಗಬೇಕೆಂಬ ಕಲ್ಪನೆ ಹೊಂದಿದ್ದ ಅಂಬೇಡ್ಕರ್ ಅವರು, ತಮ್ಮ ಜೀವಿತಾವಧಿಯರೆಗೂ ಸಮಾಜದ ಒಳಿತಿಗಾಗಿಯೇ ಮೀಸಲಿಟ್ಟರು. ತಮ್ಮ ಬದುಕನ್ನು ಸಮಾಜಕ್ಕಾಗಿಯೇ ಅರ್ಪಿಸಿದರು ಎಂದರು.ಅವರೊಬ್ಬ ಮಹಾನ್ ವ್ಯಕ್ತಿ ಹಾಗೂ ದೇಶ ಕಂಡ ಒಬ್ಬ ಅಪರೂಪದ ನಾಯಕ. ದಲಿತರಿಗೆ ಮಾತ್ರವಲ್ಲದೆ ಎಲ್ಲಾ ಶೋಷಿತರಿಗೆ ಗೌರವ ತಂದುಕೊಡಲು ಪ್ರಯತ್ನಿಸಿದವರು. ದೇಶದಲ್ಲಿ ಸಾಮಾಜಿಕ ನ್ಯಾಯ ಸಿಗದವರ ಪರವಾಗಿ ಹೋರಾಟ ಮಾಡಿದ ಭಾರತ ರತ್ನ ಎಂದು ಶ್ಲಾಘಿಸಿದರು.
ಈ ವೇಳೆ ತಹಶೀಲ್ದಾರ ಕೀರ್ತಿ ಚಾಲಕ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ಬಸಂತಿ ಮಠ, ಮುಖಂಡರಾದ ಶಾಂತಗೌಡ ಪಾಟೀಲ(ನಡಹಳ್ಳಿ), ಚನ್ನಪ್ಪ ವಿಜಯಕರ, ವೈ.ಎಚ್. ವಿಜಯಕರ ಮಾತನಾಡಿ, ಡಾ. ಬಿಆರ್ ಅಂಬೇಡ್ಕರ್ ಅವರು ಅಸ್ಪೃಶ್ಯತೆ ಎಂಬ ಸಾಮಾಜಿಕ ಪಿಡುಗು ನಿವಾರಣೆ ಮಾಡಿ, ಸಮ ಸಮಾಜಕ್ಕಾಗಿ ಶ್ರಮಿಸಿದರು. ಅವರು ಇಡೀ ದೇಶಕ್ಕೆ ಆದರ್ಶ. ದೇಶದ ಏಳಿಗೆಗಾಗಿ ಅವರು ಕೊಟ್ಟ ಕೊಡುಗೆ ಅನನ್ಯ. ಪ್ರಪಂಚ ಕಂಡ ಪ್ರತಿಭಾವಂತ ಅರ್ಥಶಾಸ್ತ್ರಜ್ಞರಾಗಿದ್ದ ಅವರು, ಮಹಿಳಾ ಸಮಾನತೆ, ಸ್ವಾತಂತ್ರಕ್ಕಾಗಿ ಶ್ರಮಿಸಿದರು. ದೇಶಕ್ಕೆ ಏಕತೆಗೆ ಸಶಕ್ತ ಸಂವಿಧಾನ ನೀಡಿದರು. ವಿಶ್ವದಲ್ಲೇ ಮಾದರಿ ಸಂವಿಧಾನ ನೀಡಿದವರು ಎಂದು ಹೇಳಿದರು.ಈ ವೇಳೆ ಸಿಪಿಐ ಮಹಮ್ಮದ ಪಸುವುದ್ದಿನ, ಮಾಜಿ ಅಧ್ಯಕ್ಷ ಮೈಬೂಬ ಗೊಳಸಂಗಿ, ಮಲ್ಲು ತಳವಾರ, ಪಶುವೈದ್ಯಾಧಿಕಾರಿ ಮೇಟಿ, ಶಿವಪುತ್ರ ಅಜಮನಿ, ತಾಪಂ ಇಲಾಖೆಯ ಖೂಬಾ ಶಿಂಗ್ ಜಾಧವ, ಬಿಸಿಎಂ ಇಲಾಖೆ ಸವೀತಾ ಕೊಣ್ಣೂರ, ಯಲ್ಲಪ್ಪ ಚಲವಾದಿ, ಗೋಪಿ ಮಡಿವಾಳ, ಎಸ್.ಆರ್.ಕಟ್ಟಿಮನಿ, ಶರಣಬಸು ಚಲವಾದಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ, ಬಲ್ಲಪ್ಪ ನಾಯಕಮಕ್ಕಳ, ಸಂಗಮೇಶ ಚಲವಾದಿ ಸೇರಿದಂತೆ ಅನೇಕ ಗಣ್ಯರು ಇದ್ದರು.