ಸಾರಾಂಶ
ಜಿಲ್ಲಾ ಕಾಂಗ್ರೆಸ್ ಭವನದ ಮುಂಭಾಗ ಉಡುಪಿ ಕಾಂಗ್ರೆಸ್ ಹಠಾವೋ- ದಲಿತ ಬಚಾವೋ ಎಂದು ಪ್ರತಿಭಟನೆ ನಡೆಯಿತು. ದಲಿತ ಚಿಂತಕ ಜಯನ್ ಮಲ್ಪೆ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷವು ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ, ಬುಧವಾರ ಅಂಬೇಡ್ಕರ್ ಯುವಸೇನೆ ವತಿಯಿಂದ ಜಿಲ್ಲಾ ಕಾಂಗ್ರೆಸ್ ಭವನದ ಮುಂಭಾಗ ಉಡುಪಿ ಕಾಂಗ್ರೆಸ್ ಹಠಾವೋ - ದಲಿತ ಬಚಾವೋ ಎಂದು ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಚಿಂತಕ ಜಯನ್ ಮಲ್ಪೆ, ತಮ್ಮದು ದಲಿತರಪರ ಪಕ್ಷ ಎನ್ನುವ ಕಾಂಗ್ರೆಸ್ ನ ಸರ್ಕಾರ, ದಲಿತರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಕ್ಕೆ ‘ಬಿ’ ರಿಪೋರ್ಟ್ ಹಾಕುತ್ತಿದೆ. ದಲಿತ ಕುಂದು ಕೊರತೆ ಸಭೆಗಳ ಬಗ್ಗೆ ಜಿಲ್ಲಾಡಳಿತಗಳಿಗೆ ಆಸಕ್ತಿಯೇ ಇಲ್ಲ. ಖಾಸಗಿ ಸಂಸ್ಥೆಗಳಲ್ಲಿ ಮೀಸಲಾತಿಯನ್ನು ವಂಚಿಸಲಾಗುತ್ತಿದೆ. ಡಿಸಿ ಮನ್ನಾ ಭೂಮಿ ದಲಿತರಿಗೆ ಹಂಚಿಕೆಯಾಗಿಲ್ಲ, ಸ್ಥಳೀಯಾಡಳಿತ ಸಂಸ್ಥೆಗಳ ಶೇ 22.75 ನಿಧಿಯ ದುರುಪಯೋಗವಾಗುತ್ತಿದೆ. ಇಂತಹ ಅಧಿಕಾರಿಗಳ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆಯಲ್ಲಿಯೇ ದಲಿತರಿಗಾಗುತ್ತಿರುವ ಅನ್ಯಾಯದ ಬಗ್ಗೆ ಕಾಂಗ್ರೆಸ್ ಸರ್ಕಾರ 14 ನಾಯಕರಿಗೆ ಪತ್ರ ಬರೆದು, ನ್ಯಾಯ ದೊರಕಿಸುವಂತೆ ವಿನಂತಿಸಿದರೂ, ಪ್ರಯೋಜನವಾಗಿಲ್ಲ. ಅವರಿಗೆ ಅಧಿಕಾರ ಬೇಕು, ಜನರು ಬೇಡ. ಇಂತಹ ನಾಯಕರಿಂದಲೇ ಕಾಂಗ್ರೆಸ್ ಸರ್ವನಾಶವಾಗುತ್ತಿದೆ ಎಂದವರು ಹೇಳಿದರು.ಪತ್ರಿಭಟನೆಯಲ್ಲಿ ಅಂಬೇಡ್ಕರ್ ಯುವ ಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್, ಪ್ರಮುಖರಾದ ಸಂಜಯ್ ಬಳ್ಕೂರು, ಕೃಷ್ಣ ಮುಂತಾದವರು ಭಾಗಿಯಾಗಿದ್ದರು.