ಸಾರಾಂಶ
ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ । ವಿದ್ಯಾರ್ಥಿ ಒಕ್ಕೂಟ ಆಯೋಜನೆ
ಕನ್ನಡಪ್ರಭ ವಾರ್ತೆ ಹಾಸನಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನೆಮನೆಗೂ ತಲುಪಿಸಲಾಗುತ್ತಿದ್ದರೂ ಅದು ಅನೇಕರ ಮನಗಳನ್ನು ಮುಟ್ಟುತ್ತಿಲ್ಲ ಎಂದು ಪ್ರಾಂಶುಪಾಲ ಡಿ.ಕೆ. ಮಂಜಯ್ಯ ವಿಷಾದ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ನಿವೃತ್ತ ನೌಕರರ ಭವನದಲ್ಲಿ ವಿದ್ಯಾರ್ಥಿ ಒಕ್ಕೂಟದಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ೨೯ ಪದವಿ ಹಾಗೂ ೭ ಡಾಕ್ಟರೇಟ್ ಪಡೆದಿದ್ದ ಮಹಾಜ್ಞಾನಿ. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಶತಮಾನಗಳ ಹಿಂದಿನ ಅಸಮಾನತೆ ಜಾತೀಯತೆಯನ್ನು ತೊಡೆದು ಹಾಕುವ ಚಿಕಿತ್ಸಕರಾದ ಅಂಬೇಡ್ಕರ್ ಜೀವನ ಮೌಲ್ಯಗಳು ಹಾಗೂ ಆದರ್ಶಗಳನ್ನು ಭಾಷಣಗಳಿಗೆ ಸೀಮಿತಗೊಳಿಸುವ ಬದಲು ಪ್ರತಿಯೊಬ್ಬರೂ ಅನುಸರಿಸಿಕೊಂಡು ಹೋದಾಗ ಮಾತ್ರ ಸಂವಿಧಾನಕ್ಕೆ ನಿಜವಾದ ಬೆಲೆ ಕೊಟ್ಟಂತಾಗುತ್ತದೆ. ಅಂಬೇಡ್ಕರ್ ಹೆಸರಲ್ಲಿ ಸುಮಾರು ೩೫೦೦ಕ್ಕೂ ಹೆಚ್ಚು ಸಂಘಟನೆಗಳಿವೆ. ಅವರ ಹೆಸರೇ ಬಹು ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.
ಸಾಹಿತಿ ಸಿ.ಸುವರ್ಣ ಕೆ.ಟಿ.ಶಿವಪ್ರಸಾದ್ ಮಾತನಾಡಿ, ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸಿದಾಗ ಮಾತ್ರ ಅವರ ಜನ್ಮದಿನಾಚರಣೆ ನಿಜವಾದ ಅರ್ಥ ಲಭಿಸುತ್ತದೆ. ಕೆಟ್ಟ ಮನಸ್ಥಿತಿ ಹೊಂದಿದವರಿಂದ ಸಂವಿಧಾನ ಬದಲಿಸುವ ಮಾತು ಕೇಳಿ ಬರುತ್ತಿದ್ದು, ಯುವ ಸಮೂಹ ಜಾಗೃತರಾಗಿ ಪ್ರಜಾಪ್ರಭುತ್ವ ಸಿದ್ದಾಂತಗಳನ್ನು ಎತ್ತಿ ಹಿಡಿಯಬೇಕು ಎಂದರು.ಸಾಹಿತಿ ರೂಪಹಾಸನ ಮಾತನಾಡಿ, ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ನೀಡಿರುವ ಮತ ಅಧಿಕಾರವನ್ನು ಪ್ರಜ್ಞಾನವಂತಿಕೆಯಿಂದ ಚಲಾಯಿಸಬೇಕು. ಉತ್ತಮ ವ್ಯಕ್ತಿಗೆ ತಮ್ಮ ಅಮೂಲ್ಯವಾದ ಮತ ನೀಡುವ ಮೂಲಕ ಜನಪರ ಕಾಳಜಿಹೊಂದಿರುವ ಸರ್ಕಾರ ಅಧಿಕಾರಕ್ಕೆ ಬರಲು ಅವಕಾಶ ಕಲ್ಪಿಸಿ ಕೊಡಬೇಕು ಎಂದು ತಿಳಿಸಿದರು. ತಾಯ್ತಾನದ ವ್ಯಕ್ತಿತ್ವ ಹೊಂದಿದ ಅಂಬೇಡ್ಕರ್ ಅವರು ಈ ದೇಶದಲ್ಲಿ ಹುಟ್ಟದೇ ಇದ್ದಿದ್ದರೆ ದಮನಿತರ ಪರಿಸ್ಥಿತಿ ಏನಾಗುತ್ತಿತ್ತು ಎನ್ನುವುದನ್ನು ನಾವೆಲ್ಲರೂ ಚಿಂತನೆ ಮಾಡಬೇಕು. ತಲೆತಲಾಂತರದಿಂದ ಬಂದ ಅಸಮಾನತೆ ಅಸ್ಪೃಶ್ಯತೆ ತಾರತಮ್ಯಗಳನ್ನು ಹೊಡೆದುರುಳಿಸಿ ಸಂವಿಧಾನವನ್ನು ಮರು ಸ್ಥಾಪಿಸಬೇಕಾದರೆ ದೇಶದ ಬಗ್ಗೆ ಕಾಳಜಿ ಇರುವ ನಾಯಕರು ಹೆಚ್ಚಾಗಬೇಕು ಆಗ ಮಾತ್ರವೇ ಭಾರತ ಉಜ್ವಲವಾಗಲು ಸಾಧ್ಯ ಎಂದು ವ್ಯಾಖ್ಯಾನಿಸಿದರು.
ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕ ಐ.ಆರ್. ಪ್ರದೀಪ್ ಅಧ್ಯಕ್ಷತೆ ವಹಿಸಿದ್ದರು ರಂಗಕಲಾವಿದೆ ಡಿ.ಎಂ. ನಂದಿನಿ, ಬಿ.ಆರ್.ಸಿ. ಶ್ವೇತಾ ರಾಣಿ ಸಿ. ಸುಜಾತಾ, ಚಲಂ ಹಾಡ್ಲಹಳ್ಳಿ ಇತರರು ಭಾಗವಹಿಸಿದ್ದರು. ವೀರೇಶ್ ಬಾಬು ಪ್ರಾರ್ಥಿಸಿದರು. ಬಸವರಾಜು ಸ್ವಾಗತಿಸಿದರು. ಜಿ.ಎನ್. ಕೋಮಲ ವಂದಿಸಿದರು. ಎ.ಸಿ. ಮಂಜುನಾಥ್ ನಿರೂಪಿಸಿದರು. ಧನಂಜಯ ಸಂವಿಧಾನ ಪೀಠಿಕೆ ಬೋಧಿಸಿದರು.ಹಾಸನದ ನಿವೃತ್ತ ನೌಕರರ ಭವನದಲ್ಲಿ ವಿದ್ಯಾರ್ಥಿ ಒಕ್ಕೂಟದಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಅಂಬೇಡ್ಕರ್ ಭಾವಚಿತ್ರದ ಮುಂದೆ ಮೆಣದ ಬತ್ತಿ ಹಚ್ಚುವ ಮೂಲಕ ಉದ್ಘಾಟಿಸಲಾಯಿತು.