ಸಾರಾಂಶ
ಪ್ರಗತಿಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಗಲ್ಲಿ ಗಲ್ಲಿಗಳಲ್ಲಿ ವಾದ್ಯ ಪರಿಕರಗಳ ಸಮೇತ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ಹುಬ್ಬಳ್ಳಿ:
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜನ್ಮದಿನವನ್ನು ಮಹಾನಗರದಲ್ಲಿ ವಿವಿಧ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು, ಸಾರ್ವಜನಿಕರು ಅದ್ಧೂರಿಯಾಗಿ ಆಚರಿಸಿದರು. ನಗರದೆಲ್ಲಡೆಯೂ ಡಾ. ಅಂಬೇಡ್ಕರ್ ಭಾವಚಿತ್ರವುಳ್ಳ ಧ್ವಜಗಳು ರಾರಾಜಿಸಿದವು. ನಗರದಾದ್ಯಂತ ಅಭಿಮಾನಿಗಳಿಂದ ಎಲ್ಲೆಡೆ ಬೈಕ್ ರ್‍ಯಾಲಿ ನಡೆಯಿತು. ಸಂಘಟನೆಗಳ ಕಾರ್ಯಕರ್ತರಾದಿಯಾಗಿ ರಾಜಕೀಯ ನಾಯಕರು, ಮುಖಂಡರು ಅಂಬೇಡ್ಕರ್ ಮೂರ್ತಿ, ಪ್ರತಿಮೆಗಳಿಗೆ ಮಾಲಾರ್ಪಣೆ, ಪುಷ್ಪಾಚರಣೆಗೈದು ಗೌರವ ಸಮರ್ಪಿಸಿದರು.ಬಳಿಕ ನೆರೆದಿದ್ದ ಅಭಿಮಾನಿಗಳನ್ನು ಉದ್ದೇಶಿಸಿ ಅಂಬೇಡ್ಕರ್ ಸಾಧನೆ, ಬೆಳೆದು ಬಂದ ಹಾದಿ, ಅವರು ರಚಿಸಿದ ಸಂವಿಧಾನದ ಬಗ್ಗೆ ಅಭಿಮಾನದ ಮಾತುಗಳನ್ನಾಡಿದರು. ಸೂರ್ಯ ಚಂದ್ರರಷ್ಟೇ ಸಂವಿಧಾನ ಸರ್ವಶ್ರೇಷ್ಠ ಎಂದು ಬಣ್ಣಿಸಿದರು. ಪ್ರಗತಿಪರ ಸಂಘಟನೆಗಳು ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಗಲ್ಲಿ ಗಲ್ಲಿಗಳಲ್ಲಿ ವಾದ್ಯ ಪರಿಕರಗಳ ಸಮೇತ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಮಾಡಿ ಸಂಭ್ರಮಿಸಿದರು.
ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಔಪಚಾರಿಕವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಗೌರವ ಸಮರ್ಪಿಸಿದರು. ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ, ಎಸ್.ಸಿ. ಬೇವೂರ, ಫಕೀರಪ್ಪ ಇಂಗಳಗಿ ಹಾಗೂ ಆನಂದ್ ಕಾಂಬಳೆ, ಪ್ರಶಾಂತ ಶಿವಮೊಗ್ಗಿ, ಫಿರೋಜ್ ಸೇರಿದಂತೆ ಇತರ ಅಧಿಕಾರಿಗಳು ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮಾಡಿ ಗೌರವ ಅರ್ಪಿಸಿದರು. ಕಿಮ್ಸ್ ಆವರಣದಲ್ಲಿರುವ ಅಂಬೇಡ್ಕರ್ ಮೂರ್ತಿಗೆ ನಿರ್ದೇಶಕರು ಹಾಗೂ ಹಿರಿಯ ವೈದ್ಯರು, ಅಧಿಕಾರಿಗಳು ಪುಷ್ಪಾರ್ಚಣೆ ಮಾಡಿದರು.ನಗರದ ಪ್ರಧಾನ ಅಂಚೆ ಕಚೇರಿ ಬಳಿಯ ಅಂಬೇಡ್ಕರ್ ವೃತ್ತದಲ್ಲಿ ಡಾ. ಅಂಬೇಡ್ಕರ್ ಮೂರ್ತಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಸಂಸದ ಐ,ಜಿ. ಸನದಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕಿರ್ ಸನದಿ, ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು ಸೇರಿದಂತೆ ಹಲವಾರು ರಾಜಕೀಯ ನಾಯಕರು, ಮುಖಂಡರು ಮಾಲಾರ್ಪಣೆ ಮಾಡಿದರು.
ಭುವನೇಶ್ವರಿ ಸೇವಾ ಸಂಘ, ಲಿಡಕರ ಕಾಲನಿ, ಸಮತಾ ಸೇನಾ, ಕರಸೇ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ವತಿಯಿಂದ ಮಹಾಮಂಡಳ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ನೇತೃತ್ವದ ಪದಾಧಿಕಾರಿಗಳು, ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆಗೈದು ಗೌರವ ಸಲ್ಲಿಸಿದರು.