ಅಂಬಾದೇವಿ ಜಾತ್ರೆ: ವಿಜೃಂಭಣೆಯಿಂದ ನಡೆದ ರಥೋತ್ಸವ

| Published : Jan 26 2024, 01:49 AM IST

ಸಾರಾಂಶ

ಸೋಮಲಾಪುರ ಬಳಿ ಇರುವ ಅಂಬಾಮಠದ ಅಂಬಾದೇವಿ ಜಾತ್ರೆಯ ನಿಮಿತ್ತ ವೈಭವದ ರಥೋತ್ಸವಕ್ಕೆ ಬಗಳಾಂಬ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ತಾಲೂಕಿನ ಸಿದ್ಧಪರ್ವತದ ಸೋಮಲಾಪುರ ಬಳಿ ಇರುವ ಅಂಬಾಮಠದ ಅಂಬಾದೇವಿ ಜಾತ್ರೆಯ ಅಂಗವಾಗಿ ಗುರುವಾರ ಅದ್ಧೂರಿಯಾಗಿ ರಥೋತ್ಸವ ಜರುಗಿತು. ಶಾಸಕ ಹಂಪನಗೌಡ ಬಾದರ್ಲಿ ಬಗಳಾಂಬ ದೇವಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಪ್ರತಿ ವರ್ಷ ಬನದ ಹುಣ್ಣಿಮೆ ದಿನ ನಡೆಯುವ ಈ ಜಾತ್ರೆಗೆ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದಿಂದ ಬಂದಿದ್ದ ಸಹಸ್ರಾರು ಭಕ್ತರು ಬಗಳಾಂಬ ದೇವಿ ಉಘೇ ಉಘೇ ಎನ್ನುತ್ತಾ ಹರ್ಷೋದ್ಘಾರ ಮಾಡಿದರು.

ರಥಕ್ಕೆ ಹೂವು, ಹಣ್ಣು, ಕಾಯಿ, ಉತ್ತತ್ತಿ, ಮಂಡಾಳ, ದಕ್ಷಿಣೆ ಎಸೆದು ಶ್ರದ್ಧಾ ಭಕ್ತಿಯನ್ನು ಸಮರ್ಪಿಸಿದರು.

ದೇವಸ್ಥಾನದ ಮುಂಭಾಗದಿಂದ ಪ್ರಾರಂಭವಾದ ರಥ ಪಾದಗಟ್ಟೆ ತಲುಪಿ ಮರಳಿ ಸ್ವಸ್ಥಾನಕ್ಕೆ ಹಿಂತಿರುಗಿತು.

ರಥೋತ್ಸವದ ಬಳಿಕ ಹದಿನೈದು ದಿನಗಳವರೆಗೂ ಜಾತ್ರೆಯ ಸಂಭ್ರಮವಿರುತ್ತದೆ. ಈ ಜಾತ್ರೆಗೆ ಬಹಳಷ್ಟು ಜನ ಸಾಧು ಸಂತರು ಬಂದಿದ್ದಾರೆ ಎಂದು ಅಂಬಾದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷರೂ ಆದ ತಹಸೀಲ್ದಾರ್ ಅರುಣ್‌ ದೇಸಾಯಿ ತಿಳಿಸಿದರು.

ರಥೋತ್ಸವ ಚಾಲನಾ ಸಮಯದಲ್ಲಿ ಮಾಜಿ ಶಾಸಕ ವೆಂಕಟರಾವ್ ನಾಡಗೌಡ, ಆರ್‌ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಬಿಜೆಪಿ ಮುಖಂಡರಾದ ಕೆ.ಕರಿಯಪ್ಪ, ಅಮರೇಗೌಡ ವಿರುಪಾಪುರ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಬಸವರಾಜ ಹಿರೇಗೌಡ, ಆದಿಮನಿ ವೀರಲಕ್ಷ್ಮಿ, ಪರಮೇಶ್ವರಪ್ಪ ಧಡೆಸುಗೂರು ಭಾಗವಹಿಸಿದ್ದರು.