ಜೀವನದ ಕಷ್ಟ ಎದುರಿಸುವ ಶಕ್ತಿ ಅಂಬಿಗ ಸಮಾಜಕ್ಕಿದೆ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

| Published : Jan 16 2024, 01:48 AM IST

ಜೀವನದ ಕಷ್ಟ ಎದುರಿಸುವ ಶಕ್ತಿ ಅಂಬಿಗ ಸಮಾಜಕ್ಕಿದೆ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾನ್ಯ ವ್ಯಕ್ತಿಯಿಂದ ಆಗದ ಕಾರ್ಯ ಅಂಬಿಗನಿಂದ ಸಾಧ್ಯ, ಅವನ ಪಯಣ ನಿರಂತರವಾಗಿರುತ್ತದೆ. ನದಿಯಂತೆ ಜೀವನದ ಕಷ್ಟವನ್ನು ಎದುರಿಸುವ ಶಕ್ತಿ ಅವರಿಗಿದೆ.

ಕನ್ನಡಪ್ರಭ ವಾರ್ತೆ ಗುತ್ತಲ

ಅಂಬಿಗ ಸಮಾಜದವರು ಶ್ರೇಷ್ಠ ಕುಲದಲ್ಲಿ ಜನಿಸಿದ್ದನ್ನು ಎಂದೂ ಮರೆಯಬಾರದು. ಸಾಮಾನ್ಯ ವ್ಯಕ್ತಿಯಿಂದ ಆಗದ ಕಾರ್ಯ ಅಂಬಿಗನಿಂದ ಸಾಧ್ಯ, ಅವನ ಪಯಣ ನಿರಂತರವಾಗಿರುತ್ತದೆ. ನದಿಯಂತೆ ಜೀವನದ ಕಷ್ಟವನ್ನು ಎದುರಿಸುವ ಶಕ್ತಿ ಅವರಿಗಿದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸಮೀಪದ ನರಸೀಪುರ ಗ್ರಾಮದಲ್ಲಿ ನಿಜ ಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ ಹಾಗೂ 6ನೇ ಶರಣ ಸಂಸ್ಕೃತಿ ಉತ್ಸವ, ಶಾಂತಮುನಿ ಸ್ವಾಮಿಗಳ 8ನೇ ಸ್ಮರಣೋತ್ಸವ, ಶಾಂತಭೀಷ್ಮ ಚೌಡಯ್ಯ ಸ್ವಾಮಿಗಳ 8ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಂಗವಾಗಿ ಭಾನುವಾರ ರಾತ್ರಿ ನಡೆದ ಸಾಂಸ್ಕೃತಿಕ ಮತ್ತು ಜಾನಪದ ಕಲಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಬಿಗರಿಗೆ ನದಿಯಲ್ಲಿ ದೋಣಿಯನ್ನು ನಡೆಸುವಾಗ ಸಾವು ಅವರಿಗೆ ಹತ್ತಿರ ಬಂದರೂ ಸಹ ಅದನ್ನು ಮೆಟ್ಟಿ ನಿಂತು ನಂಬಿದ ಜನರನ್ನು ದಡಕ್ಕೆ ಸೇರಿಸುವ ಅವರ ಧೈರ್ಯ ಮೆಚ್ಚಲೇಬೇಕೆಂದ ಅವರು, ಅಂಬಿಗರ ಚೌಡಯ್ಯನವರು ಸಮಾಜದ ಅಂಕುಡೊಂಕುಗಳನ್ನು ಕಠೋರವಾಗಿ ತಿಳಿಸಿದರೂ ಸಹ ಅವರ ಮುಗ್ಧ ಸ್ವಭಾವ ಅವರ ವಚನದಲ್ಲಿ ನಾವು ಕಾಣಬಹುದಾಗಿದೆ ಎಂದರು.

ಅನುಭವ ಮಂಟಪದಲ್ಲಿ ನೂರಾರು ಶಿವಶರಣರ ಸಾಂಗತ್ಯದಲ್ಲಿ ಶ್ರೇಷ್ಠ ಚಿಂತನೆ ನಡೆದ ಪರಿಣಾಮ ಸಮಾಜದಲ್ಲಿ ಶರಣ ತತ್ವಗಳು ಇಂದಿಗೂ ಜೀವಂತ ಇವೆ. ರಾಜಕೀಯ ಲಾಭಕ್ಕಾಗಿ ಅಲ್ಲದೆ ನಾವು ಹಿಂದೆ ಅಧಿಕಾರದಲ್ಲಿದ್ದಾಗ ಪೀಠಕ್ಕೆ ಹೆಚ್ಚಿನ ಅನುದಾನ ನೀಡಿದ್ದೇನೆ. ಕೆಲವರು ರಾಜಕೀಯ ಲಾಭಕ್ಕೆ ತಳವಾರ- ಪರಿವಾರ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆಂದು ಆರೋಪಿಸಿದರು.

ಮಾಜಿ ಶಾಸಕ, ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಮಾತನಾಡಿ, ಮಠ ಮಾನ್ಯಗಳಿಗೆ ಹೆಚ್ಚಿನ ಕೊಡುಗೆ ನೀಡಿರುವುದು ಬಿಜೆಪಿ ಸರ್ಕಾರ. ಬೊಮ್ಮಾಯಿ ಅವರು ಜಲ ಸಂಪನ್ಮೂಲ ಸಚಿವರಿದ್ದಾಗ ಹಾಗೂ ಮುಖ್ಯಮಂತ್ರಿ ಆಗಿದ್ದಾಗ, ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ ಅಂಬಿಗರ ಪೀಠಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆಂದರು.

ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಮಾತನಾಡಿ, ಪೀಠದ ಅಭಿವೃದ್ಧಿಗೆ ಅನೇಕ ಭಕ್ತರ ಪರಿಶ್ರಮವಿದೆ. ಅಂಬಿಗರ ಚೌಡಯ್ಯನವರು ಕಲ್ಲಿನ ದೋಣಿ ನಡೆಸಿ ಅನೇಕರ ರೋಗ ರುಜಿನಗಳನ್ನು ವಾಸಿ ಮಾಡಿದ ಪವಾಡ ಅವಿಸ್ಮರಣೀಯವಾಗಿದೆ ಎಂದರು.

ಇದಕ್ಕೂ ಮುನ್ನ ಬೆಳಗ್ಗೆ ಸುಮಂಗಲೆಯರಿಂದ ತೊಟ್ಟಿಲೋತ್ಸವ, ಬೆಳಗ್ಗೆ 8ಕ್ಕೆ ನಿಜಶರಣ ಅಂಬಿಗರ ಚೌಡಯ್ಯನವರ ಗದ್ದುಗೆ ಪೂಜೆ ನಂತರ ರಕ್ತದಾನ ಶಿಬಿರ ನೆರವೇರಿತು. ಮಧ್ಯಾಹ್ನ ಅಂಬಿಗರ ಚೌಡಯ್ಯನವರ ವಚನ ಕಂಠಪಾಠ ಸ್ಪರ್ಧೆ ಜರಗಿತು.

ಬಾಗಲಕೋಟಿ ಜಿಲ್ಲೆಯ ಸೀಮಿಕೇರಿ ರಾಮಾರೂಢಮಠದ ಪರಮರಾಮಾರೂಢ ಸ್ವಾಮೀಜಿ, ಜಂಗಮ ಕ್ಷೇತ್ರ ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ, ಗುತ್ತಲ-ಅಗಡಿ ಮಠದ ಗುರುಸಿದ್ದ ಸ್ವಾಮೀಜಿ, ಬಾಗಲಕೋಟಿ ಜಿಲ್ಲೆಯ ಶಿರೂರ ಮಹಾಂತಿತೀರ್ಥಮಠದ ಬಸವಲಿಂಗ ಸ್ವಾಮೀಜಿ, ಹಾವನೂರ ದಳವಾಯಿ ಮಠದ ಶಿವಕುಮಾರ ಸ್ವಾಮೀಜಿ, ರಾಣಿಬೆನ್ನೂರ ತಾಲೂಕಿನ ಗಂಗಾಪೂರ ಸಿದ್ಧಾರೂಢಮಠದ ಮರುಳ ಶಂಕರದೇವರ, ಕೆಎಂಎಫ್ ನಿರ್ದೇಶಕ ಬಸವರಾಜ ಅರಬಗೊಂಂಡ, ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಮುತ್ತಣ್ಣ ಯಲಿಗಾರ, ಗವಿಸಿದ್ದಪ್ಪ ದ್ಯಾಮಣ್ಣನವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಬಸವರಾಜ ಸಪ್ಪನಗೋಳ ಸ್ವಾಗತಿಸಿದರು. ವರ್ಷಾ ಬಾರಕೇರ ಕಾರ್ಯಕ್ರಮ ನಿರೂಪಿಸಿದರು.