ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಿಜಶರಣ ಅಂಬಿಗರ ಚೌಡಯ್ಯನವರ ಜೀವನ ಸಂದೇಶಗಳು ಆರೋಗ್ಯವಂತ ಸಮ ಸಮಾಜದ ನಿರ್ಮಾಣಕ್ಕೆ ದಾರಿ ದೀಪವಾಗಿವೆ ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.ಪಟ್ಟಣದ ತಾಲೂಕು ಆಡಳಿತ ಕಾರ್ಯ ಸೌಧದ ಸಭಾಂಗಣದಲ್ಲಿ ನಡೆದ ನಿಜಶರಣ ಅಂಬಿಗರ ಚೌಡಯ್ಯರ ಜಯಂತಿಯಲ್ಲಿ ಭಾವಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಕಾಯಕಯೋಗಿ ಬಸವಣ್ಣನವರ ಪ್ರಮುಖ ಶಿಷ್ಯರಾಗಿ ವಚನ ಕ್ರಾಂತಿಗೆ ಮುನ್ನುಡಿ ಬರೆಯಲು ಅಂಬಿಗರ ಚೌಡಯ್ಯ ಕಾರಣರಾದರು ಎಂದರು.
ಅನುಭವ ಮಂಟಪದಲ್ಲಿ ತಮ್ಮ ವಿಚಾರಧಾರೆಗಳ ಮೂಲಕ ಹೊಸ ಸಂಚಾಲನವನ್ನು ಮೂಡಿಸಿದ್ದ ನಿಜಶರಣ ಅಂಬಿಗರ ಚೌಡಯ್ಯ ಅವರು ಮಂಡಿಸಿದ ವಿಚಾರ ಧಾರೆಗಳು ಸಾರ್ವಕಾಲಿಕ ಸತ್ಯವಾಗಿವೆ. ಜಾತಿ, ಮತ ಪಂಥಗಳಿಂದ ತುಂಬಿರುವ ಇಂದಿನ ಸಮಾಜದಲ್ಲಿ ಅಂಬಿಗರ ಚೌಡಯ್ಯ ಅವರ ಸಂದೇಶಗಳು ಶಾಂತಿ ನೆಮ್ಮದಿ ಮೂಲಕ ಜೀವನ ನಡೆಸಲು ದಾರಿ ಮಾರ್ಗವಾಗಿವೆ ಎಂದರು.ತಾಲೂಕು ನಯನಜ ಕ್ಷತ್ರೀಯ ಸಮಾಜದ ಅಧ್ಯಕ್ಷ ಕೆ.ಎಂ.ಶಿವಪ್ಪ ವಿಶೇಷ ಉಪನ್ಯಾಸ ನೀಡಿ, 12ನೇ ಶತಮಾನದ ಅತ್ಯಂತ ವಿಶಿಷ್ಟ ವಚನ ಕಾರರಲ್ಲಿ ಪ್ರಮುಖನಾದ ಅಂಬಿಗರ ಚೌಡಯ್ಯರ ವಚನಗಳಲ್ಲಿ ಸಮ ಸಮಾಜ ನಿರ್ಮಾಣ, ಜೀವನ ಮೌಲ್ಯಗಳ ಜೊತೆ ಜೊತೆಯಲ್ಲಿಯೇ ಸಮಾಜ ಸುಧಾರಣೆ ಹೋರಾಟದ ಕೆಚ್ಚು ಕಾಣುತ್ತದೆ. ಬಸವಣ್ಣನವರ ನೇತೃತ್ವದ ಕಲ್ಯಾಣ ಕ್ರಾಂತಿಯನ್ನು ಸ್ಮರಿಸಿದರು.
ಜನವರಿ 26 ರಂದು ಗಣರಾಜ್ಯೋತ್ಸವದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರು ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ ಸನ್ಮಾನ ಮಾಡೋಣ ಎಂದು ಸೂಚನೆ ನೀಡಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಡಾ.ಅಶೋಕ್, ಪುರಸಭೆ ಚೀಫ್ ಆಫೀಸರ್ ನಟರಾಜ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ದಿವಾಕರ್, ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ಸುಮಾರಾಣಿ, ಆನಂದೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ಅಜಿತ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ. ಶಶಿಧರ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯಮಂಡ್ಯ: 66/11 ಕೆ.ವಿ. ಮಂಡ್ಯ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ F3-DC Office Urban ಫೀಡರ್‌ನಲ್ಲಿ ತುರ್ತು ಕಾರ್ಯನಿರ್ವಹಣೆ ಕೆಲಸ ಹಮ್ಮಿಕೊಂಡಿರುವುದರಿಂದ ಜ.23ರ ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ನಗರದ ಪ್ರದೇಶಗಳಾದ ಚಾಮುಂಡೇಶ್ವರಿ ನಗರ, ಅನ್ನಪೂರ್ಣೇಶ್ವರಿ ನಗರ, ಶಂಕರನಗರ, ಕ್ಯಾತುಂಗೆರೆ ಬಡಾವಣೆ, ವಿ.ವಿ.ನಗರ, ಕಲ್ಲಹಳ್ಳಿ, ಬನ್ನೂರು ರಸ್ತೆ, ನಂದಿನ ಲೇಔಟ್, ಕಿರಗಂದೂರು ಬಡಾವಣೆ, ಮರಿಗೌಡ ಬಡಾವಣೆ, ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು. ಗ್ರಾಮಾಂತರ ಪ್ರದೇಶಗಳಾದ ತಾಲೂಕಿನ ಕೊತ್ತತ್ತಿ, ಮೊತ್ತಹಳ್ಳಿ, ಬೇವಿನಹಳ್ಳಿ, ಹುಲ್ಲುಕೆರೆ, ಎ. ಹುಲಿಕೆರೆ, ಬಿ.ಹುಲಿಕೆರೆ. ಮತ್ತು ಐ.ಪಿ ಮಾರ್ಗಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಸೆಸ್ಕ್, ಕಾ ಮತ್ತು ಪಾ ಮಂಡ್ಯ ಉಪ ವಿಭಾಗ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.