ಸಾರಾಂಶ
ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಭಕ್ತಿ ಮತ್ತು ನಿಷ್ಠೆಯ ಕಾಯಕದ ಮೂಲಕ ನಿಜಶರಣ ಅಂಬಿಗರ ಚೌಡಯ್ಯ ವೃತ್ತಿಗೆ ಘನತೆ ತಂದುಕೊಟ್ಟಿದ್ದಾರೆ ಎಂದು ಪಟ್ಟಣದ ಸರ್ಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಎಚ್ ಪುಟ್ಟಪ್ಪ ಹೇಳಿದರು.ಭಾನುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ. ಪುರಸಭೆ, ತಾಲೂಕು ಗಂಗಾಮತಸ್ಥರ ಸಮಾಜ ವತಿಯಿಂದ ನಡೆದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದಲ್ಲಿ ಅಸಮಾನತೆ, ಶೋಷಣೆ, ಮೇಲುಕೀಳು, ಕಂದಾಚಾರ, ಮೂಢನಂಬಿಕೆ ಉತ್ತುಂಗದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬಸವೇಶ್ವರರು ಜಾತಿ ಅಸಮಾನತೆ ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಬದುಕನ್ನು ಮುಡಿಪಾಗಿಟ್ಟು ಶ್ರಮಿಸಿದ್ದರು. ಅವರೊಂದಿಗೆ ಸಮಸಮಾಜಕ್ಕಾಗಿ ಶ್ರಮಿಸಿದ ಶರಣರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರಾಗಿದ್ದರು ಎಂದು ತಿಳಿಸಿದರು.ನೇರ ನಡೆ-ನುಡಿಯ, ಹರಿತ ಮಾತಿನ, ನಿಷ್ಠುರ ನಿಲುವಿನ ಕ್ರಾಂತಿಕಾರಿ ನಿಜಶರಣ ಅಂಬಿಗರ ಚೌಡಯ್ಯ ತುಂಗಭದ್ರಾ ನದಿಯ ಚೌಡದಾನಪುರದಲ್ಲಿ ಹರಿಗೋಲಿನ ಸಹಾಯದಿಂದ ತೆಪ್ಪ ನಡೆಸುವ ಕಾಯಕವನ್ನು ಭಕ್ತಿ ಮತ್ತು ನಿಷ್ಠೆಯಿಂದ ನಿರ್ವಹಿಸುವ ಮೂಲಕ ವೃತ್ತಿಗೊಂದು ಘನತೆ ತಂದುಕೊಟ್ಟರು ಎಂದು ತಿಳಿಸಿದರು.
ನದಿಯನ್ನು ಹರಿಗೋಲಿನ ಸಹಾಯದಿಂದ ತೆಪ್ಪದ ಮೂಲಕ ಜಾತಿ- ಬೇಧವಿಲ್ಲದೆ ಪ್ರತಿಯೊಬ್ಬರನ್ನು ಭಕ್ತಿಯಿಂದ ದಾಟಿಸುವ ಮೂಲಕ ಗಂಗಾಮತಸ್ಥ ಸಮಾಜ ನಂಬಿಕೆ ನಿಷ್ಠೆಯ ವೃತ್ತಿಗೆ ಘನತೆ, ಶ್ರೇಷ್ಠತೆ ತಂದುಕೊಟ್ಟ ಹೆಗ್ಗಳಿಕೆ ಅಂಬಿಗರ ಚೌಡಯ್ಯನವರ ಮೂಲಕ ಸಮುದಾಯಕ್ಕೆ ಒಲಿದುಬಂದಿದೆ ಎಂದರು.ಅಂಬಿಗರ ಸಮುದಾಯದಲ್ಲಿ ಕೋಳಿ- ಕಬ್ಬಲಿಗ-ಬೆಸ್ತ- ಬೋವಿ- ಮೊಗವೀರ- ಗಂಗಾಮತ ಮುಂತಾದ 39 ಪರ್ಯಾಯ ಹೆಸರುಗಳಿಂದ ಕರೆಯುವ ಉಪ ಪಂಗಡಗಳಿವೆ. ವಿದ್ವಾಂಸರ ಪ್ರಕಾರ ಅಂಬಿಗರು ಈ ದೇಶದ ಮೂಲ ನಿವಾಸಿಗಳು ಮತ್ತು ಆದಿವಾಸಿಗಳಾಗಿದ್ದು, ವಿಶಿಷ್ಟ ಸಂಸ್ಕೃತಿ ಹೊಂದಿದ್ದಾರೆ. ಈ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೌಲಭ್ಯಗಳಿಂದ ವಂಚಿತರಾಗಿದ್ದು ಹಿಂದುಳಿದಿದ್ದಾರೆ. ಸಮುದಾಯದ ಕುಲಗುರು, ಸಾಂಸ್ಕೃತಿಕ ನಾಯಕ ಅಂಬಿಗರ ಚೌಡಯ್ಯನ ಜಯಂತಿ ಆಚರಣೆ ಮೂಲಕ ಒಗ್ಗೂಡಿ ಸಮಾಜ ಅಭಿವೃದ್ಧಿ ಹೊಂದಬೇಕಾಗಿದೆ. ಮಕ್ಕಳು ಕಡ್ಡಾಯವಾಗಿ ಉನ್ನತ ಶಿಕ್ಷಣ ಪಡೆದಾಗ ಸಮಾಜ ಸಹಜವಾಗಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದರು.
ಸಮಾಜದ ಮುಖಂಡ ಪ್ರಾಚಾರ್ಯ ಡಾ.ಪರಮೇಶಪ್ಪ ಮಾತನಾಡಿ, ನಮ್ಮ ಸಮಾಜ ಬುಡಕಟ್ಟು ಜನಾಂಗವಾಗಿದ್ದು, ನಾಲ್ಕಾರು ಮಂದಿಗೆ ಸಹಾಯ ಮಾಡುವ ಕೆಲಸ ಅನಾದಿ ಕಾಲದಿಂದಲೂ ಮಾಡುತ್ತಿದ್ದಾರೆ ಎಂದರು.ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಾಜಿ ನಿರ್ದೇಶಕ, ತಾಲೂಕು ಗಂಗಾಮತಸ್ಥ ಸಮಾಜ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಶರಣರನ್ನು ಕೇವಲ ಜಾತಿಗೆ ಸೀಮಿತಗೊಳಿಸದೇ ವಿಶಾಲ ದೃಷ್ಟಿಕೋನದಿಂದ ಸ್ವೀಕರಿಸಬೇಕು. ಅವರ ತತ್ವ -ಸಿದ್ಧಾಂತವನ್ನು ಬದುಕಿನಲ್ಲಿ ಕನಿಷ್ಠ ಅಳವಡಿಸಿಕೊಂಡು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.
ಅಂಬಿಗರ ಚೌಡ್ಯಯ ಅಭಿವೃದ್ಧಿ ನಿಗಮದ ಮೂಲಕ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಪ್ರಾಧಿಕಾರ ರಚಿಸಿ ಸಮಾಜವನ್ನು ಪ್ರಥಮ ಬಾರಿಗೆ ಗುರುತಿಸಿದ್ದಾರೆ. ಇದರೊಂದಿಗೆ ತಾಲೂಕಿನ 10-15 ಗ್ರಾಮದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಕೋಟ್ಯಂತರ ಅನುದಾನ ನೀಡಿ, ಸಮಾಜದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಪಟ್ಟಣದಲ್ಲಿ ನಿರ್ಮಾಣಕ್ಕೆ ಸಿಎ ನಿವೇಶನ ಗುರುತಿಸುವಂತೆ ತಿಳಿಸಿದ್ದಾರೆ ಎಂದು ಹೇಳಿದರು.ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ಸಮಾಜದ ಮುಖಂಡ ರಾಮಪ್ಪ ಗಾಮ, ಬಗನಕಟ್ಟೆ ಶಿವಪ್ಪ, ಕೃಷ್ಣಪ್ಪ ಕಿಟ್ಟದಹಳ್ಳಿ, ಮುಗುಳಗೆರೆ ರಾಮಚಂದ್ರಪ್ಪ, ನಾಗರಾಜ, ಸಂತೋಷ, ವಿನಯ್ ಮತ್ತಿತರರು ಹಾಜರಿದ್ದರು.
- - - -21ಕೆ.ಎಸ್.ಕೆ.ಪಿ1:ಶಿಕಾರಿಪುರದ ತಾ.ಪಂ. ಸಭಾಂಗಣದಲ್ಲಿ ಭಾನುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ನಡೆಯಿತು.