ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ವ್ಯಾಪಾರ ಕೌಶಲ್ಯ, ಉದ್ಯಮಶೀಲತೆ ಮತ್ತು ವ್ಯಾವಹಾರಿಕ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ‘ಮಾರ್ಕೆಟ್ ಫೆಸ್ಟ್’ ಎಂಬ ವಿನೂತನ ಕಾರ್ಯಕ್ರಮ
ಪುತ್ತೂರು: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಕೇಳಿದ್ದೆಲ್ಲವೂ ಸುಲಭವಾಗಿ ಸಿಗುತ್ತಿರುವುದರಿಂದ ಕಷ್ಟದ ದಿನಗಳ ಅರಿವು ಕಡಿಮೆಯಾಗುತ್ತಿದೆ. ಆದರೆ ಹಿಂದಿನ ತಲೆಮಾರಿನವರು ತಮ್ಮ ಬಾಲ್ಯದಲ್ಲಿ ಹಳ್ಳಿಯಿಂದ ಕಿಲೋಮೀಟರ್ಗಟ್ಟಲೆ ನಡೆದುಕೊಂಡು ಶಾಲೆಗೆ ಹೋಗುವ ದಿನಮಾನಗಳಿದ್ದವು. ಸೀಮಿತ ಸೌಲಭ್ಯಗಳ ನಡುವೆ ಕಷ್ಟಪಟ್ಟು ಬೆಳೆದಿದ್ದರಿಂದಲೇ ಇಂದು ಹಲವರು ಎತ್ತರಕ್ಕೆ ಏರಲು ಸಾಧ್ಯವಾಗಿದೆ ಎಂದು ಉದ್ಯಮಿ ಎನ್. ಶಿವಪ್ರಸಾದ್ ಶೆಟ್ಟಿ ಹೇಳಿದರು.
ವಿದ್ಯಾರ್ಥಿಗಳಲ್ಲಿ ಬಾಲ್ಯದಿಂದಲೇ ವ್ಯಾಪಾರ ಕೌಶಲ್ಯ, ಉದ್ಯಮಶೀಲತೆ ಮತ್ತು ವ್ಯಾವಹಾರಿಕ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಇಲ್ಲಿನ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ವಿದ್ಯಾಲಯ ಸಿ.ಬಿ.ಎಸ್.ಇ. ಸಂಸ್ಥೆಯಲ್ಲಿ ‘ಮಾರ್ಕೆಟ್ ಫೆಸ್ಟ್’ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದರು.ಇಂದಿನ ಮಕ್ಕಳಿಗೆ ಸಾಕಷ್ಟು ಅವಕಾಶಗಳಿವೆ. ಮಕ್ಕಳು ಆಧುನಿಕ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಸಂಸ್ಥೆಗೆ ಕೀರ್ತಿ ತರುವ ಕೆಲಸವನ್ನು ಮಾಡಬೇಕು. ಬಾಲ್ಯದಲ್ಲೇ ವ್ಯಾಪಾರದ ಆದರ್ಶಗಳನ್ನು ಕಲಿಯಲು ಮತ್ತು ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಲು ಶಾಲೆಗಳಲ್ಲಿ ಆಯೋಜಿಸುವ ಮಾರ್ಕೆಟ್ ಫೆಸ್ಟ್ನಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ಶಿಕ್ಷಣವೆಂದರೆ ಕೇವಲ ನಾಲ್ಕು ಗೋಡೆಗಳ ಮಧ್ಯೆ ಪಡೆಯುವ ಪಾಠವಲ್ಲ. ವ್ಯಕ್ತಿತ್ವ ರೂಪುಗೊಳಿಸುವ, ಸಮಾಜಕ್ಕೆ ಮಕ್ಕಳನ್ನು ಅಣಿಗೊಳಿಸುವ ಪ್ರಕ್ರಿಯೆಯೂ ಆಗಿದೆ. ವ್ಯವಹಾರದಲ್ಲಿ ಕೇವಲ ಶ್ರಮವಷ್ಟೇ ಸಾಲದು, ‘ಸ್ಮಾರ್ಟ್ ವರ್ಕ್’ ಕೂಡ ಅತ್ಯಗತ್ಯ. ಎಂದರಲ್ಲದೆ ಮಕ್ಕಳು ಮುಂದಿನ ದಿನಗಳಲ್ಲಿ ಸ್ವಂತ ಉದ್ಯಮಗಳನ್ನು ಸ್ಥಾಪಿಸಬೇಕು. ನಮ್ಮ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡುವ ಮೂಲಕ ಭಾರತದ ಆರ್ಥಿಕ ಮೌಲ್ಯವನ್ನು ಹೆಚ್ಚಿಸಬೇಕು. ವಿದೇಶಿಯರನ್ನು ನಮ್ಮ ಸಂಸ್ಥೆಗಳಲ್ಲಿ ದುಡಿಸಿಕೊಳ್ಳುವ ಶಕ್ತಿಯನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ಉದ್ಯಮಿ ಸದಾನಂದ ನಾಯ್ಕ್ ಕೆ., ಪ್ರಾಂಶುಪಾಲೆ ಮಾಲತಿ ಡಿ. ಹಾಗೂ ಉಪಪ್ರಾಂಶುಪಾಲೆ ಸುಜನಿ ಬೋರ್ಕರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ 10ನೇ ತರಗತಿಯ ದ್ವಿತಿ ಸ್ವಾಗತಿಸಿ, ತನ್ವಿ ಬಿ. ವಂದಿಸಿದರು. 9ನೇ ತರಗತಿಯ ಸಾಯಿಲಕ್ಷ್ಮಿ ಕಾರ್ಯಕ್ರಮವನ್ನು ನಿರೂಪಿಸಿದರು.