ವಿಜೃಂಭಣೆಯ ಹಾರನಕಣಿವೆ ರಂಗನಾಥನ ಅಂಬಿನೋತ್ಸವ

| Published : Oct 14 2024, 01:17 AM IST

ವಿಜೃಂಭಣೆಯ ಹಾರನಕಣಿವೆ ರಂಗನಾಥನ ಅಂಬಿನೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಹಿರಿಯೂರು: ತಾಲೂಕಿನ ವಾಣಿವಿಲಾಸ ಸಾಗರದ ಬಳಿಯಿರುವ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಹಾಗೂ ಹರಕೆಯ ಹಾವು, ಚೇಳುಗಳ ಅರ್ಪಿಸುವ ಜಾತ್ರೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಮಧ್ಯಾಹ್ನ ವಿಜೃಂಭಣೆಯಿಂದ ನಡೆಯಿತು.

ಹಿರಿಯೂರು: ತಾಲೂಕಿನ ವಾಣಿವಿಲಾಸ ಸಾಗರದ ಬಳಿಯಿರುವ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಹಾಗೂ ಹರಕೆಯ ಹಾವು, ಚೇಳುಗಳ ಅರ್ಪಿಸುವ ಜಾತ್ರೆಯು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಮಧ್ಯಾಹ್ನ ವಿಜೃಂಭಣೆಯಿಂದ ನಡೆಯಿತು.

ರಂಗನಾಥಸ್ವಾಮಿಗೆ ದಸರಾ ಪ್ರಯುಕ್ತ ವಿಶೇಷ ಜಾತ್ರೆ, ಅಂಬಿನೋತ್ಸವ ಹಾಗೂ ವಿಶೇಷ ಪೂಜೆಗಳು ನಡೆದವು. ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಿಸಲಾಯಿತು.

ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ಧೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಲಾಯಿತು. ಬಳಿಕ ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಪೂಜಾರಿಯು ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಿಲ್ಲು ಹಿಡಿದು ಬಾಣ ಹೊಡೆದು ಬಾಳೆಗಿಡ ಕಡಿಯುವ ಮೂಲಕ ಅಂಬಿನೋತ್ಸವ ಕಾರ್ಯ ನೇರವೇರಿತು.

ಮನೆ, ಹೊಲ ಗದ್ದೆಗಳಲ್ಲಿ ರಾತ್ರಿವೇಳೆ ವಿಷ ಜಂತುಗಳು ಕಾಣಿಸಿಕೊಂಡಾಗ ಭಕ್ತರು ರಂಗನಾಥನ ಸನ್ನಿಧಿಗೆ ಬಂದು ಜಾತ್ರೆಯಲ್ಲಿ ಹುಳುಗಳನ್ನು ಅರ್ಪಿಸುತ್ತೇವೆಂದು ಹರಕೆ ಕಟ್ಟಿಕೊಳ್ಳುತ್ತಾರೆ. ಕಟ್ಟಿಕೊಂಡ ಹರಕೆ ತೀರಿಸಲು ತಾಮ್ರ, ಕಂಚಿನ ಜರಿ ಹಾವು, ಚೇಳುಗಳನ್ನು ಭಕ್ತರು ಸರತಿ ಸಾಲಿನಲ್ಲಿ ನಿಂತು ಹುಂಡಿಯಲ್ಲಿ ಹಾಕಿ ಹರಕೆ ತೀರಿಸುತ್ತಾರೆ. ಈ ದೃಶ್ಯ ಪ್ರತಿ ವರ್ಷ ಎಲ್ಲರ ಗಮನ ಸೆಳೆಯುತ್ತದೆ.

ಕೆಲವು ಭಕ್ತರು ಮತ್ತೊಂದು ಹರಕೆಯಾದ ಬಾಳೆಹಣ್ಣು ಹಾಗೂ ಸಕ್ಕರೆ ಕಲೆಸಿದ ರಸಾಯನಕ್ಕೆ ಪೂಜೆ ಸಲ್ಲಿಸಿ ನಂತರ ದಾಸಯ್ಯರಿಂದ ಗೋವಿಂದ ಅನ್ನಿಸಿ ಸುತ್ತ ಮುತ್ತ ಇದ್ದ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಣೆ ಮಾಡುವುದು ಮತ್ತೊಂದು ವಿಶೇಷವಾಗಿದೆ. ಒಂದೇ ದಿನ ಅಂಬಿನೋತ್ಸವ ನಡೆದರೂ ತುಮಕೂರು, ಬಳ್ಳಾರಿ, ದಾವಣಗೆರೆ, ಹಾವೇರಿ ಚಿತ್ರದುರ್ಗ, ಬೆಂಗಳೂರು, ಹಾಸನ ಸೇರಿದಂತೆ ನೆರೆ ರಾಜ್ಯಗಳಾದ ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಸಂಸದ ಗೋವಿಂದ ಕಾರಜೋಳ, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಕಾಡುಗೊಲ್ಲ ಸಂಘದ ರಾಜ್ಯಾಧ್ಯಕ್ಷ ರಾಜಣ್ಣ, ಶಿಮುಲ್ ನಿರ್ದೇಶಕ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಮುಖಂಡರಾದ ಎನ್.ಆರ್.ಲಕ್ಷ್ಮೀಕಾಂತ್, ಎಂ.ರವೀoದ್ರಪ್ಪ, ಕೆ.ಅಭಿನಂದನ್, ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಡಾ.ಆರ್.ರಂಗನಾಥ್, ಕಂದಿಕೆರೆ ಜಗದೀಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಹನುಮಂತರಾಯಪ್ಪ ಹಾಗೂ ವಿಶೇಷವಾಗಿ ರಾಜ್ಯದ ಭಕ್ತರ ಜೊತೆ ಹೊರ ರಾಜ್ಯಗಳಿಂದಲೂ ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದರು.

ಗಂಟೆಗಟ್ಟಲೆ ಟ್ರಾಫಿಕ್ ಜಾಮ್

ಹಾರನಕಣಿವೆ ರಂಗನಾಥಸ್ವಾಮಿಯ ಅಂಬಿನೋತ್ಸವ ಹಿನ್ನೆಲೆಯಲ್ಲಿ ಹೊಸದುರ್ಗ ಗಡಿ ಭಾಗದ ರಸ್ತೆಯಲ್ಲಿ ಕಿಮೀ ದೂರದವರೆಗೂ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಿ ಸುಧಾಕರ್, ಸಂಸದ ಗೋವಿಂದ ಕಾರಜೋಳ ಅವರಿಗೂ ಟ್ರಾಫಿಕ್ ಬಿಸಿ ತಟ್ಟಿತು. ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಬೈಕ್ ಸವಾರರು ಅಕ್ಕ ಪಕ್ಕದ ಹೊಲ, ತೋಟಗಳ ಮೂಲಕ ಸಂಚರಿಸುವ ದೃಶ್ಯ ಕಂಡು ಬಂತು. ಟ್ರಾಫಿಕ್ ಜಾಮ್‌ನಿಂದ ಹೊರಬರಲು ಸಂಸದರು ಗಂಟೆ ಗಟ್ಟಲೆ ಕಾರಿನಲ್ಲಿ ಕುಳಿತು ಕಾಯಬೇಕಾಯಿತು. ಅಂತಿಮವಾಗಿ ಸ್ಥಳಕ್ಕೆ ಡಿವೈಎಸ್‌ಪಿ ಶಿವಕುಮಾರ್, ಸಿಪಿಐ ಕಾಳಿಕೃಷ್ಣ, ಹೊಸದುರ್ಗ ಪಿಎಸ್ಐ ಪಾಟೀಲ್ ಭೇಟಿ ನೀಡಿ ಟ್ರಾಫಿಕ್ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾದರು.