ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಆಂಬ್ಯುಲೆನ್ಸ್ ಹಿಂದಿನಿಂದ ಅಪ್ಪಳಿಸಿದ ಪರಿಣಾಮ ಆಂಬ್ಯುಲೆನ್ಸ್ ಚಾಲಕ ಮೃತಪಟ್ಟು, ಓರ್ವ ಪ್ರಯಾಣಿಕ ತೀವ್ರವಾಗಿ ಗಾಯಗೊಂಡಿರುವ ಘಟನೆ ಪಟ್ಟಣದ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ನಲ್ಲಿ ಜರುಗಿದೆ.ಮೈಸೂರಿನ ಕೆಸರೆ ನಿವಾಸಿ ಅಬ್ದುಲ್ ರಶೀದ್ ಪುತ್ರ ಸುಹೇಲ್ ಅಹಮದ್ (23) ಮೃತಪಟ್ಟ ಆಂಬ್ಯುಲೆನ್ಸ್ ಚಾಲಕ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುಹೇಲ್ ನನ್ನು ಮಂಡ್ಯ ಖಾಸಗಿ ಆಸ್ಪತ್ರೆಯ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕ್ಕೆಸಿಗಾಗಿ ಮೈಸೂರಿನ ಪ್ರಜ್ವಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸುಹೇಲ್ ಕೊನೆ ಉಸಿರೆಳೆದಿದ್ದಾನೆ.
ಆಂಬ್ಯುಲೆನ್ಸ್‌ನ ಪ್ರಯಾಣಿಸುತ್ತಿದ್ದ ಮಹಮ್ಮದ್ ಸದ್ದಾಂ ಸಹ ತೀವ್ರವಾಗಿ ಗಾಯಗೊಂಡಿದ್ದು, ಈತನನ್ನು ಪ್ರಜ್ವಲ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಮೈಸೂರಿನ ಜಿ.ಬಿ.ಆಂಬ್ಯುಲೆನ್ಸ್ ಸರ್ವಿಸ್‌ಗೆ ಸೇರಿದ ಮಾರುತಿ ಆಮ್ನಿ ವ್ಯಾನ್‌ಲ್ಲಿ ರೋಗಿಯನ್ನು ಬೆಂಗಳೂರು ಆಸ್ಪತ್ರೆಗೆ ದಾಖಲು ಮಾಡಿದ ನಂತರ ಮೈಸೂರಿಗೆ ವಾಪಸ್ ಆಗುತ್ತಿತ್ತು.ಬೆಳಗಿನ ಜಾವ 3.15ರ ಸುಮಾರಿಗೆ ಪಟ್ಟಣದ ಸಂಜಯ ಚಿತ್ರಮಂದಿರದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮೇಲ್ ಸೇತುವೆ ಮೇಲೆ ಸುಹೇಲ್ ಅಹಮದ್ ಚಾಲನೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಮುಂದೆ ಹೋಗುತ್ತಿದ್ದ ವಾಹನಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಡಿಕ್ಕಿ ಹೊಡೆಸಿಕೊಂಡ ವಾಹನ ಸ್ಥಳದಿಂದ ಪರಾರಿಯಾಗಿದೆ. ಈ ಸಂಬಂಧ ಮದ್ದೂರು ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.ಅಪರಿಚಿತ ಶವ ಪತ್ತೆಮಂಡ್ಯ: ನಗರದ ಕಲ್ಲಹಳ್ಳಿ ವಾಟರ್ ಟ್ಯಾಂಕ್ ಬಳಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಗೆ ಸುಮಾರು 60 ರಿಂದ 65 ವರ್ಷ ವಯಸ್ಸಾಗಿದೆ. 5.3 ಅಡಿ ಎತ್ತರ, ತೆಳ್ಳನೆ ಮೈಕಟ್ಟು ಹೊಂದಿದ್ದು, ತಲೆಯಲ್ಲಿ ಬಿಳಿ ಮಿಶ್ರಿತ ಕಪ್ಪು ಕೂದಲು, ಮೀಸೆ ಗಡ್ಡ ಬಿಟ್ಟಿದ್ದು, ಮೈಮೇಲೆ ಖಾಕಿ ಬಣ್ಣದ ತುಂಬು ತೋಳಿನ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ತುಂಬುತೋಳಿನ ಬಿಳಿ ಬನಿಯನ್ ಇರುತ್ತದೆ. ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಂಬಂಧಪಟ್ಟವರು ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.