ಗಣೇಶಗುಡಿಗೆ ಬೇಕಿದೆ ಆ್ಯಂಬುಲೆನ್ಸ್‌ ಸೌಲಭ್ಯ

| Published : May 31 2024, 02:18 AM IST

ಸಾರಾಂಶ

ಕಳೆದ ವಾರ ರಾಫ್ಟಿಂಗ್‌ಗೆ ಬಂದ ಪ್ರವಾಸಿಗರೊಬ್ಬರು ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದರು. ಇಂತಹ ಸಮಯದಲ್ಲಿ ಆ್ಯಂಬುಲೆನ್ಸ್‌ ಹತ್ತಿರದಲ್ಲೇ ಇದ್ದರೆ ಅವರ ಜೀವ ಉಳಿಯುತ್ತಿತ್ತು ಎಂಬುದು ಇಲ್ಲಿನ ಜನರ ಮಾತು.

ಜೋಯಿಡಾ: ಸುಪಾ ಡ್ಯಾಂ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳನ್ನು ಹೊಂದಿರುವ ತಾಲೂಕಿನ ಪ್ರವಾಸಿಗರ ನೆಚ್ಚಿನ ತಾಣ ಗಣೇಶಗುಡಿಗೆ ದಿನವೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇಲ್ಲಿ ಯಾವುದೇ ಅಪಘಾತ, ಅವಘಡ ಸಂಭವಿಸಿದಾಗ ಆ್ಯಂಬುಲೆನ್ಸ್‌ ವ್ಯವಸ್ಥೆ ಇಲ್ಲದೆ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ.ಗಣೇಶಗುಡಿ, ಇಳವಾ, ಅವೇಡಾ ಸೇರಿದಂತೆ ಅವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಆಸ್ಪತ್ರೆಗಳಿಲ್ಲ. ಗಣೇಶಗುಡಿಯಲ್ಲಿ ಕೆಪಿಸಿ ಆಸ್ಪತ್ರೆ ಇದ್ದು, ಇಲ್ಲಿ ಕೆಪಿಸಿಯವರಿಗೆ ಮಾತ್ರ ಮೊದಲ ಆದ್ಯತೆ. ಹೀಗಾಗಿ ಇಲ್ಲಿನ‌ ಜನಸಾಮಾನ್ಯರು ಆಸ್ಪತ್ರೆಗೆ ಜೋಯಿಡಾ ಅಥವಾ ದಾಂಡೇಲಿಗೆ ಹೋಗಬೇಕಾಗುತ್ತದೆ. ಅಲ್ಲದೇ ಈ ಭಾಗದಲ್ಲಿ ಹೆಚ್ಚಾಗಿ ಅಪಘಾತ ಸಂಭವಿಸುತ್ತಿದ್ದು, ಆ್ಯಂಬುಲೆನ್ಸ್‌ ಅವಶ್ಯಕತೆ ಇದೆ. ಸರ್ಕಾರ ಈ ಭಾಗಕ್ಕೆ ಹೊಸದಾಗಿ ಆ್ಯಂಬುಲೆನ್ಸ್‌ ಮತ್ತು ಆಸ್ಪತ್ರೆ ಸ್ಥಾಪಿಸಬೇಕಿದೆ. ಇಲ್ಲವಾದರೆ ರಾಮನಗರ ಭಾಗದಲ್ಲಿರುವ 3 ಆ್ಯಂಬುಲೆನ್ಸ್‌ಗಳ ಪೈಕಿ ಒಂದನ್ನು ಗಣೇಶಗುಡಿಗೆ ನೀಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಕಳೆದ ವಾರ ರಾಫ್ಟಿಂಗ್‌ಗೆ ಬಂದ ಪ್ರವಾಸಿಗರೊಬ್ಬರು ಉಸಿರಾಟದ ಸಮಸ್ಯೆಯಿಂದ ನಿಧನರಾಗಿದ್ದರು. ಇಂತಹ ಸಮಯದಲ್ಲಿ ಆ್ಯಂಬುಲೆನ್ಸ್‌ ಹತ್ತಿರದಲ್ಲೇ ಇದ್ದರೆ ಅವರ ಜೀವ ಉಳಿಯುತ್ತಿತ್ತು ಎಂಬುದು ಇಲ್ಲಿನ ಜನರ ಮಾತು. ಈ ಭಾಗದಲ್ಲಿ ಪ್ರವಾಸೋದ್ಯಮ ಉತ್ತಮವಾಗಿ ಬೆಳೆದಿದ್ದು, ದಿನವೂ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಬರುವುದರಿಂದ ಆ್ಯಂಬುಲೆನ್ಸ್‌ ಅವಶ್ಯಕತೆ ಇದೆ ಎಂಬುದು ಜನರ ಮಾತಾಗಿದೆ.

ವ್ಯವಸ್ಥೆ ಆಗಲಿ: ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಳವಾ ಗಣೇಶಗುಡಿಯಲ್ಲಿ ದಿನವೂ ಬಹಳಷ್ಟು ಪ್ರವಾಸಿಗರು ಬರುತ್ತಾರೆ. ಏನಾದರೂ ಅನಾಹುತವಾದರೆ ತಕ್ಷಣಕ್ಕೆ ಕರೆದೊಯ್ಯಲು ಆ್ಯಂಬುಲೆನ್ಸ್‌ ವ್ಯವಸ್ಥೆ ಇಲ್ಲ. ಹೀಗಾಗಿ ಗಣೇಶಗುಡಿ ಭಾಗಕ್ಕೆ ಆಂಬುಲೆನ್ಸ್‌ ವ್ಯವಸ್ಥೆ ಆಗಬೇಕಿದೆ ಎಂದು ಅವೇಡಾ ಗ್ರಾಪಂ ಅಧ್ಯಕ್ಷ ಅರುಣ ಭಗವತಿರಾಜ್ ತಿಳಿಸಿದರು.

ಎಲ್ಲರಿಗೂ ಚಿಕಿತ್ಸೆ: ನಮ್ಮ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳಿವೆ. ಕೆಪಿ‌ಸಿ ಸಿಬ್ಬಂದಿಗೆ ಅಷ್ಟೇ ಅಲ್ಲದೇ ಇಲ್ಲಿನ ಸ್ಥಳೀಯ ಜನರಿಗೂ ಮಾನವೀಯತೆ ದೃಷ್ಟಿಯಿಂದ ಎಲ್ಲರಿಗೂ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಗಣೇಶಗುಡಿಯ ಕೆಪಿಸಿ ಚೀಫ್ ಎಂಜಿನಿಯರ್‌ ಮಧುಚಂದ ಶಿರಾಲಿ ತಿಳಿಸಿದರು.