ಸಾರಾಂಶ
ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಸುಸಜ್ಜಿತ ಸಮುದಾಯ ಭವನ ಆಸ್ಪತ್ರೆ ನಿರ್ಮಿಸಲಾಗಿದ್ದರೂ, ಕಾಯಂ ವೈದ್ಯರ ಕೊರತೆಯಿಂದ ತುರ್ತು ಸಂದರ್ಭದಲ್ಲಿ ಪುತ್ತೂರು ಅಥವಾ ಮಂಗಳೂರಿನ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ನೆರವಾಗುವ ಸಲುವಾಗಿ ಒದಗಿಸಲಾಗುವ ೧೦೮ ಆಂಬುಲೆನ್ಸ್ ಸೇವೆಯು ಕಡಬದಲ್ಲಿ ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿದೆ. ಈಗಿರುವ ಆಂಬುಲೆನ್ಸ್ ವಾಹನದ ಟಯರ್ ಸವೆದಿದ್ದು, ಬದಲಿ ಟಯರ್ ಹಾಕದ ಕಾರಣಕ್ಕೆ ಒಂದು ತಿಂಗಳಿನಿಂದ ನಿಂತಲ್ಲೇ ನಿಂತಿದೆ. ತುರ್ತು ಸಂದರ್ಭದಲ್ಲಿ ಪಕ್ಕದ ಊರಿನಿಂದ ಆಂಬುಲೆನ್ಸ್ ವಾಹನ ಬರುವವರೆಗೆ ಕಾಯುವ ದುಸ್ಥಿತಿ ಇಲ್ಲಿನ ಜನತೆಯದ್ದಾಗಿದೆ. ಸಮಸ್ಯೆಗಳ ನಡುವೆಯೇ ಆರೋಗ್ಯ ಸೇವೆ: ಕಳೆದ ಒಂದೂವರೆ ದಶಕದಿಂದ ಕಡಬದಲ್ಲಿ 108 ಆಂಬುಲೆನ್ಸ್ ಉಚಿತ ಸೇವೆ ನೀಡುತ್ತಿದ್ದು, ಈ ಹಿಂದೆ 2012 ನವೆಂಬರ್‌ನಲ್ಲಿ ಕುಂಟು ನೆಪವೊಡ್ಡಿ ಆಂಬುಲೆನ್ಸನ್ನು ಹೊರ ಜಿಲ್ಲೆಗೆ ಕಳುಹಿಸಲಾಗಿತ್ತು. ತಿಂಗಳುಗಳ ಕಾಲ ಕಾದ ಕಡಬದ ಜನತೆ 2013ರ ಜನವರಿ 07ರಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದರಿಂದ ಮತ್ತೆ ಕಡಬಕ್ಕೆ ಹೊಸ ಆಂಬುಲೆನ್ಸ್ ನೀಡಲಾಗಿತ್ತು. ಗ್ರಾಮೀಣ ಪ್ರದೇಶವಾದ ಕಡಬವನ್ನು ಕೇಂದ್ರೀಕರಿಸಿ ಕಾರ್ಯಾಚರಿಸುತ್ತಿದ್ದ ಈ ಆಂಬುಲೆನ್ಸ್‌ನಲ್ಲಿ ಟಯರ್ ಸಮಸ್ಯೆ ಎದುರಾಗಿ ವಾರಗಟ್ಟಲೆ ಮೂಲೆಗೆ ಸರಿದು ನಿಂತಿತ್ತು.ತಿಂಗಳಿಂದ ಸೇವೆ ಸ್ಥಗಿತ: ಬಳಿಕ ಕಳೆದ ವರ್ಷ ಏಪ್ರಿಲ್‌ನಲ್ಲಿ ಕಡಬಕ್ಕೆ ಅತ್ಯಾಧುನಿಕ ವೆಂಟಿಲೇಟರ್ ಇರುವ ಹೊಸ ಆಂಬುಲೆನ್ಸ್ ವಾಹನವನ್ನು ನೀಡಲಾಗಿತ್ತು. ಸುಮಾರು 40 ಸಾವಿರಕ್ಕೂ ಅಧಿಕ ಕಿಲೋಮೀಟರ್ ಓಡಿದ್ದರಿಂದಾಗಿ ಟಯರ್ ಸವೆದು ವಾಹನ ನಿಂತಲ್ಲೇ ನಿಂತಿದೆ. ಟಯರ್ ಬದಲಾವಣೆ ಮಾಡದ ಕಾರಣ ಡಿಸೆಂಬರ್ 6ರಿಂದ ಆಂಬುಲೆನ್ಸನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ವಠಾರದಲ್ಲಿ ನಿಲ್ಲಿಸಲಾಗಿದೆ. ಜನರು ತುರ್ತು ಸಂದರ್ಭದಲ್ಲಿ ಪಕ್ಕದ ಆಲಂಕಾರು, ಬೆಳ್ಳಾರೆ, ಶಿರಾಡಿ, ಸುಬ್ರಹ್ಮಣ್ಯದಿಂದ ಆಂಬುಲೆನ್ಸ್ ಬರುವವರೆಗೆ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಕಾಯಂ ವೈದ್ಯರ ಕೊರತೆ: ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಸುಸಜ್ಜಿತ ಸಮುದಾಯ ಭವನ ಆಸ್ಪತ್ರೆ ನಿರ್ಮಿಸಲಾಗಿದ್ದರೂ, ಕಾಯಂ ವೈದ್ಯರ ಕೊರತೆಯಿಂದ ತುರ್ತು ಸಂದರ್ಭದಲ್ಲಿ ಪುತ್ತೂರು ಅಥವಾ ಮಂಗಳೂರಿನ ಆಸ್ಪತ್ರೆಯನ್ನು ಅವಲಂಬಿಸಬೇಕಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಂಬುಲೆನ್ಸ್ ಸೇವೆಯನ್ನು ಸ್ಥಗಿತಗೊಳಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತುರ್ತು ಸಂದರ್ಭಗಳಲ್ಲಿ ಖಾಸಗಿ ವಾಹನಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಹೊಸ ಟಯರ್‌ಗಳನ್ನು ನೀಡುವ ಮೂಲಕ ಆಂಬುಲೆನ್ಸ್ ಸೇವೆಯನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಇಲ್ಲಿನ 108 ವಾಹನದ ಸಿಬ್ಬಂದಿಯನ್ನು ಪಕ್ಕದ ಸುಳ್ಯ, ಬೆಳ್ಳಾರೆ, ಶಿರಾಡಿ, ಆಲಂಕಾರು, ಕೊಕ್ಕಡದ ಆಂಬುಲೆನ್ಸ್‌ಗಳಿಗೆ ನಿಯೋಜಿಸಲಾಗಿದೆ.ಆಂಬುಲೆನ್ಸ್ ಸ್ಥಗಿತಗೊಂಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ವಾರದ ಒಳಗೆ ಟಯರ್ ಹಾಕಿಸಿ ಸಮಸ್ಯೆಯನ್ನು ಸರಿಪಡಿಸಲಾಗುವುದು- ಡಾ. ತಿಮ್ಮಯ್ಯ, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ