ಸಾರಾಂಶ
ಕೊಪ್ಪಳ: ಮಾರುಕಟ್ಟೆ ಹಾಲಿನ ದರ ₹50-60 ಇದೆಯಾದರೂ ರೈತರಿಗೆ ಇದರ ಅರ್ಧ ಕೊಡುತ್ತಿದ್ದ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ (ರಾಬಕೊವಿ) ಒಕ್ಕೂಟ, ಈಗ ಅದರಲ್ಲಿಯೂ ಕಡಿತ ಮಾಡಿ ರೈತರ ಆಕ್ರೋಶಕ್ಕೆ ತುತ್ತಾಗಿದೆ.
ಹೈನುಗಾರರಿಗೆ ಈಗ ನೀಡುತ್ತಿರುವ ಹಾಲಿನ ದರವೇ ಕಡಿಮೆ. ಈಗ ಅದರಲ್ಲಿಯೂ ಕಡಿಮೆ ಮಾಡಿದೆ. ರಾಬಕೊವಿ ಒಕ್ಕೂಟದ ಆಡಳಿತ ಮಂಡಳಿ ಸಭೆ ನಡೆಸಿ, ಹಾಲಿನ ದರದಲ್ಲಿ ಸೆ. 1ರಿಂದ ಒಂದೂವರೆ ರುಪಾಯಿ ಇಳಿಕೆ ಮಾಡಿದೆ.3.5 ಎಸ್‌ಎನ್‌ಎಫ್ ಇರುವ ಹಾಲಿನ ದರ ಈಗ ಲೀಟರ್‌ಗೆ ₹30.50 ಇದ್ದು, ಅದನ್ನು ಸೆ. 1ರಿಂದ ₹1.50 ಕಡಿಮೆ ಮಾಡಿ ₹29ಗೆ ಇಳಿಸಿದೆ. ಇದು 3.5 ಎಸ್ಎನ್‌ಎಫ್ ಇರುವ ಹಾಲಿನ ದರದ ಲೆಕ್ಕಾಚಾರ, ಫ್ಯಾಟ್ ಕಡಿಮೆ ಆದಂತೆ ಇನ್ನೂ ಹಾಲಿನ ದರ ಕಡಿಮೆಯಾಗುತ್ತದೆ ಎನ್ನುತ್ತಾರೆ ರೈತರು.
ಪಶು ಆಹಾರ ದರ ಏರಿಸುವ ರಾಬಕೊವಿ ಹಾಲಿನ ದರವನ್ನು ತಾನು ಮಾರಾಟ ಮಾಡುವುದರಲ್ಲಿಯೂ ಹೆಚ್ಚಳ ಮಾಡುತ್ತದೆ. ಆದರೆ, ರೈತರಿಂದ ತಾನು ಕೊಂಡುಕೊಳ್ಳುವ ದರವನ್ನು ಇಳಿಸುವುದು ಯಾವ ನ್ಯಾಯ ಎನ್ನುತ್ತಾರೆ ಹಾಲು ಉತ್ಪಾದಕರು.ರಾಬಕೊವಿ ಒಕ್ಕೂಟದಲ್ಲಿಯೇ ಪ್ರತಿನಿತ್ಯ ಒಂದೂವರೆಯಿಂದ 2 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತದೆ. ಹಾಲಿಗೆ ಬೇಡಿಕೆ ಇದೆಯಾದರೂ ಹಾಲಿನ ಸಂಸ್ಕರಣೆ ಮಾಡುವ ನೆಪ ಮಾಡಿಕೊಂಡು ಹಾಲಿನ ದರ ಇಳಿಸುತ್ತಿದ್ದಾರೆ.
ಖಾಸಗಿಯರಿಂದ ಬೇಡಿಕೆಮಾರುಕಟ್ಟೆಯಲ್ಲಿ ಖಾಸಗಿ ಕಂಪನಿಗಳಿಂದ ಹಾಲಿಗೆ ಬೇಡಿಕೆ ಸಾಕಷ್ಟಿದೆ. ಅನೇಕ ಖಾಸಗಿ ಕಂಪನಿಗಳು ಫ್ಯಾಟ್ ಲೆಕ್ಕಾಚಾರ ಇಲ್ಲದೆಯೇ ಇದಕ್ಕಿಂತಲೂ ಅಧಿಕ ಹಣದಿಂದ ರೈತರ ಹಾಲನ್ನು ಖರೀದಿ ಮಾಡುತ್ತವೆ. ಆದರೆ, ಸರ್ಕಾರಿ ಅಧೀನದ ರಾಬಕೊವಿಯಲ್ಲಿ ಮಾತ್ರ ಈ ರೀತಿಯಾಗಿ ರೈತರ ಶೋಷಣೆ ಮಾಡುವುದು ಯಾವ ನ್ಯಾಯ? ಎಂದು ಕಿಡಿಕಾರಿದ್ದಾರೆ.
ಇತರ ಒಕ್ಕೂಟಗಳಿಗಿಂತಲೂ ಕಡಿಮೆ ದರ ರಾಬಕೊವಿಯಲ್ಲಿ ಇದ್ದರೂ ಈಗ ಅದನ್ನು ಕಡಿಮೆ ಮಾಡುವುದು ಯಾಕೆ ಎನ್ನುವುದಕ್ಕೆ ಆಡಳಿತ ಮಂಡಳಿ ಉತ್ತರ ನೀಡಬೇಕಾಗಿದೆ.ಅವಧಿ ಮುಗಿದರೂ ಅಧಿಕಾರರಾಬಕೊವಿ ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದು ಹೋಗಿದೆ. ಆದರೂ ನಾನಾ ಕಾರಣಗಳಿಗಾಗಿ ಚುನಾವಣೆಯನ್ನು ಪದೇ ಪದೇ ಮುಂದೂಡುತ್ತಲೇ ಬರಲಾಗುತ್ತಿದೆ. ಈಗ ಅವಧಿ ಮುಗಿದಿರುವ ಆಡಳಿತ ಮಂಡಳಿಯ ಸಭೆ ನಡೆಸಿರುವ ಅಧಿಕಾರಿಗಳು, ಅದರ ಮೂಲಕವೇ ಈಗ ದರ ಪರಿಷ್ಕರಣೆ ನಿರ್ಧಾರ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅವಧಿ ಮುಗಿದಿರುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ಮಾನ್ಯತೆ ಇದೆಯಾ ಎನ್ನುವುದು ರೈತರ ಪ್ರಶ್ನೆಯಾಗಿದೆ.ದರ ಕಮ್ಮಿ
ಈಗ ನೀಡುತ್ತಿರುವ ಹಾಲಿನ ದರವೇ ಕಡಿಮೆಯಾಗಿದೆ. ಈಗ ಏಕಾಏಕಿ ಒಂದೂವರೆ ರುಪಾಯಿ ಕಡಿಮೆ ಮಾಡಿರುವುದು ಸರಿಯಲ್ಲ. ತಕ್ಷಣ ಇದನ್ನು ಹಿಂದೆ ಪಡೆದು, ಹಾಲಿನ ದರವನ್ನು ಏರಿಕೆ ಮಾಡಬೇಕು.ನಾಗನಗೌಡ ನಂದಿನಗೌಡ್ರ, ಮಾಜಿ ನಿರ್ದೇಶಕರು ರಾಬಕೊವಿ ನಷ್ಟ
ಹಾಲಿನ ದರವನ್ನು ಪರಿಷ್ಕರಣೆ ಮಾಡಿ ಆಡಳಿತ ಮಂಡಳಿ ನಿರ್ಧಾರ ತೆಗೆದುಕೊಂಡಿದೆ. ನಷ್ಟದ ಹೊರೆಯನ್ನು ಕಡಿಮೆ ಮಾಡುವುದಕ್ಕಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಪೀರಾನಾಯಕ, ವ್ಯವಸ್ಥಾಪಕರು ರಾಬಕೊವಿ