ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆಯೇ ಕುಷ್ಟಗಿ ತಾಲೂಕಿನಲ್ಲಿ ಇಸ್ಪೀಟ್ ಜೂಜಾಟದ ಅಬ್ಬರ ಜೋರಾಗಿದೆ. ಪೊಲೀಸರು ವಿವಿಧೆಡೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ 70 ಜನರನ್ನು ವಶಕ್ಕೆ ಪಡೆದು 10 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಪರಶಿವಮೂರ್ತಿ ಮಾಟಲದಿನ್ನಿ

ಕುಷ್ಟಗಿ: ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮದ ನಡುವೆಯೇ ಕುಷ್ಟಗಿ ತಾಲೂಕಿನಲ್ಲಿ ಇಸ್ಪೀಟ್ ಜೂಜಾಟದ ಅಬ್ಬರ ಜೋರಾಗಿದೆ.

ಹಬ್ಬದ ನೆಪದಲ್ಲಿ ಹಣದಾಸೆಗೆ ಇಸ್ಪೀಟ್ ಆಟದಲ್ಲಿ ತೊಡಗಿದ್ದವರ ವಿರುದ್ಧ ಕುಷ್ಟಗಿ ಪೊಲೀಸರು ದಾಳಿ ನಡೆಸಿದ್ದು, ಠಾಣಾ ವ್ಯಾಪ್ತಿಯ ವಿವಿಧೆಡೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿ 70 ಜನರನ್ನು ವಶಕ್ಕೆ ಪಡೆದು 10 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದಾರೆ. ದಾಳಿಯ ವೇಳೆ ಒಟ್ಟು ₹1.56 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಕುಷ್ಟಗಿ ಪಟ್ಟಣವೊಂದರಲ್ಲೇ ಮೂರು ಕಡೆ ದಾಳಿ ನಡೆಸಿ 15 ಜನರನ್ನು ವಶಕ್ಕೆ ಪಡೆಯಲಾಗಿದೆ. ಯಲಬುರ್ತಿಯಲ್ಲಿ 7, ಹಿರೇಬನ್ನಿಗೋಳದಲ್ಲಿ 9, ಮೇಣಸಗೇರಿಯಲ್ಲಿ 9, ಗೋತಗಿಯಲ್ಲಿ 7 ಹಾಗೂ ಶಿರಗುಂಪಿಯಲ್ಲಿ 6 ಜನರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಗುಮಗೇರಿ ಮತ್ತು ಶಾಖಾಪುರ ಗ್ರಾಮಗಳಲ್ಲಿಯೂ ಇಸ್ಪೀಟ್ ಜೂಜಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ಇಸ್ಪೀಟ್ ಜೂಜಾಟ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಮುನ್ನೆಚ್ಚರಿಕೆ ವಹಿಸಿ ನಿಗಾ ಇರಿಸಿದ್ದರು. ಅದರಂತೆ ವಿವಿಧ ಗ್ರಾಮಗಳಲ್ಲಿ ತಂಡಗಳನ್ನು ರಚಿಸಿ ದಾಳಿ ನಡೆಸಿರುವುದು ಜೂಜಾಟದ ಚಟುವಟಿಕೆ ಪಟ್ಟಣಕ್ಕೆ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿರುವುದನ್ನು ಎತ್ತಿ ತೋರಿಸಿದೆ.

ಹಬ್ಬದ ಸಂಭ್ರಮದ ಹೆಸರಿನಲ್ಲಿ ಹಣ ಪಣಕ್ಕಿಟ್ಟು ಜೂಜಾಟದಲ್ಲಿ ತೊಡಗುವವರ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಂಡಿದೆ. ಒಟ್ಟು 10 ಪ್ರಕರಣಗಳಲ್ಲಿ 70 ಜನರ ವಿರುದ್ಧ ಕ್ರಮ ಜರುಗಿಸಿ ₹1,56,000 ನಗದು ವಶಪಡಿಸಿಕೊಂಡಿರುವುದು ಗಮನಾರ್ಹವಾಗಿದೆ. ದೀಪಾವಳಿ ಹಬ್ಬದ ನೆಪದಲ್ಲಿ ನಡೆಯುವ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಕಠಿಣ ಕ್ರಮ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಇಸ್ಪೀಟ್ ಜೂಜಾಟ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ 10 ಪ್ರಕರಣ ದಾಖಲಿಸಿ 70 ಜನರ ವಿರುದ್ಧ ಕ್ರಮ ಕೈಗೊಂಡು ₹1.56 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಜೂಜಾಟದಲ್ಲಿ ತೊಡಗುವವರ ವಿರುದ್ಧ ಮುಂದೆಯೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕುಷ್ಟಗಿ ಪಿಎಸ್‌ಐ ಹನುಮಂತಪ್ಪ ತಳವಾರ ಹೇಳಿದರು.