ಸಾರಾಂಶ
ಗದಗ: ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಕುರಿತು ಅಪಮಾನಕರ ಮಾತುಗಳನ್ನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಬಂಧಿಸುವಂತೆ ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘ
ಜಿಲ್ಲಾ ಸಮಿತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಪ್ರಧಾನಮಂತ್ರಿ, ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲಾ ಗೌರವ ಅಧ್ಯಕ್ಷ ಬಾಲು ರಾಠೋಡ ಮಾತನಾಡಿ, ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಆಡಿರುವ ಅಪಮಾನಕರ ಮಾತುಗಳು ಅತ್ಯಂತ ಖಂಡನೀಯವಾದುದು. ಈ ಮಾತುಗಳು ಅಮಿತ್ ಶಾ ಮನುವಾದಿ ಮನಸ್ಥಿತಿ ಎತ್ತಿ ತೋರಿಸುತ್ತದೆ ಹಾಗೂ ಅವರು ಹಿಂದೆಯೂ ಈಗಲೂ ಮುಂದೆಯೂ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎನ್ನುವುದು ಸಾಬೀತಾಗುತ್ತದೆ. ಇಂತಹ ಮನುವಾದಿ ಮನಸ್ಥಿತಿಯ ಅಮಿತ್ ಶಾ ಭಾರತದ ಗೃಹ ಸಚಿವರಾಗಿ ಮುಂದುವರಿದರೆ ಬಾಬಾಸಾಹೇಬ್ ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಆಶಯಗಳಿಗೆ ವಿರುದ್ಧವಾಗುತ್ತದೆ ಹಾಗೂ ಭಾರತದ ಸಂವಿಧಾನದ ಮೂಲ ತತ್ವಗಳಿಗೆ ಧಕ್ಕೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಸಂವಿಧಾನದ 75ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ರಾಜ್ಯ ಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿಯೇ ಡಾ. ಅಂಬೇಡ್ಕರ್ ಕುರಿತು ಅಮಿತ್ ಶಾ ಆಡಿರುವ ಅಪಮಾನಕರ ಮಾತುಗಳು ಕೇವಲ ಆಕಸ್ಮಿಕವೇನೂ ಅಲ್ಲ. ಅವಮಾನ ಮಾಡುವುದು ಅವರ ನೈಜ ಉದ್ದೇಶವಾಗಿತ್ತು. ಅಂಬೇಡ್ಕರ್ ಜಾತಿ ಹಿನ್ನೆಲೆ ಎತ್ತಿ ತೋರಿಸುತ್ತಾ ಅಂಬೇಡ್ಕರ್ ಸಂವಿಧಾನ ಬರೆಯಲೇ ಇಲ್ಲ ಎನ್ನುವ ಸುಳ್ಳು ಪ್ರಚಾರ ಮಾಡುವುದರ ಜತೆಗೆ ಅಂಬೇಡ್ಕರ್ ರಚಿಸಿರುವ ಭಾರತದ ಸಂವಿಧಾನ ತಾನು ಒಪ್ಪುವುದೂ ಇಲ್ಲ ಎನ್ನುವುದನ್ನು ಆರ್‌ಎಸ್ಎಸ್ ಆಗ ಬಹಿರಂಗವಾಗಿಯೇ ಹೇಳಿತ್ತು. ಅಂತಹ ಸಂಘಪರಿವಾರ ಮತ್ತು ಬಿಜೆಪಿಯ ಅಮಿತ್ ಶಾ ಬಾಬಾಸಾಹೇಬ್ ಅಂಬೇಡ್ಕರ್ ಬಗ್ಗೆ ಆಡಿರುವ ಅಪಮಾನಕರವಾದ ಮಾತುಗಳು ಅವರ ಮನುವಾದಿ ಪರಂಪರೆಯ ಮುಂದುವರಿಕೆಯ ಭಾಗವಾಗಿಯೇ ಬಂದಿವೆ. ಇದು ಅಂಬೇಡ್ಕರ್ ವ್ಯಕ್ತಿತ್ವ ಮತ್ತು ಭಾರತದ ಸಂವಿಧಾನಕ್ಕೆ ಆಗಿರುವ ಅತ್ಯಂತ ಘೋರ ಅಪಮಾನವಾಗಿದೆ.ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ವಿರೋಧಿ, ಸಂವಿಧಾನ ವಿರೋಧಿ ಮನುವಾದಿ ಅಮಿತ್ ಶಾ ಅವರನ್ನು ಕೂಡಲೇ ಕೇಂದ್ರ ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಕಾನೂನು ಕ್ರಮ ಜರುಗಿಸಿ ಬಂಧಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಕಾರ್ಯದರ್ಶಿ ಹುಲಿಗೇಮ್ಮ ಮಾತಿನ, ಫಕ್ಕೀರಮ್ಮ ಪೂಜಾರ, ಮಹಾದೇವಿ ಬೆಟಗೇರಿ, ಮಂಜವ್ವ ಮಾದರ, ಶಿವಕ್ಕ ಮಾದರ, ಯಲ್ಲಪ್ಪ ಮಾದರ ಸೇರಿದಂತೆ ಇತರರು ಇದ್ದರು.