ಬೊಂಬೆನಾಡಿನಲ್ಲಿಂದು ಅಮಿತ್ ಶಾ ರೋಡ್ ಶೋ

| Published : Apr 02 2024, 01:04 AM IST

ಸಾರಾಂಶ

ಚನ್ನಪಟ್ಟಣ: ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಪರ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರನ್ನು ಕರೆತರುತ್ತಿದೆ. ಏ.೨ರ ಮಂಗಳವಾರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಲಿರುವ ಅಮಿತ್ ಶಾ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಪರ ಮತಯಾಚಿಸಲಿದ್ದಾರೆ

ಚನ್ನಪಟ್ಟಣ: ಕಾಂಗ್ರೆಸ್ ಭದ್ರಕೋಟೆ ಎನಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಮಲ ಅರಳಿಸಲು ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಪರ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ಚುನಾವಣಾ ಚಾಣಕ್ಯ ಅಮಿತ್ ಶಾ ಅವರನ್ನು ಕರೆತರುತ್ತಿದೆ.

ಏ.೨ರ ಮಂಗಳವಾರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಲಿರುವ ಅಮಿತ್ ಶಾ ಎನ್‌ಡಿಎ ಅಭ್ಯರ್ಥಿ ಡಾ.ಮಂಜುನಾಥ್ ಪರ ಮತಯಾಚಿಸಲಿದ್ದಾರೆ.

ಮಂಗಳವಾರ ಬೆಂಗಳೂರಿನಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಅಮಿತ್ ಶಾ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ ಬಳಿ ನಿರ್ಮಿಸಿರುವ ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ನಗರದ ಮಂಗಳವಾರಪೇಟೆ ತಲುಪಲಿದ್ದು, ಮಂಗಳವಾರಪೇಟೆಯ ಬಸವನಗುಡಿ ಬಳಿಯಿಂದ ನಗರದ ಗಾಂಧಿ ಭವನದವರೆಗೆ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯಲ್ಲಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಲಿದ್ದಾರೆ.

ರೋಡ್ ಯಶಸ್ಸಿಗೆ ಸಿದ್ಧತೆ:

ಡಾ. ಮಂಜುನಾಥ್ ಪರ ಮತ ಪ್ರಚಾರಕ್ಕೆ ಆಗಮಿಸುತ್ತಿರುವ ಅಮಿತ್ ಶಾ ರೋಡ್ ಶೋ ಯಶಸ್ಸುಗೊಳಿಸಲು ಎನ್‌ಡಿಎ ಅಂಗಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಸಕಲ ಸಿದ್ಧತೆ ನಡೆಸಿದೆ. ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿರುವ ಎರಡು ಪಕ್ಷಗಳ ಮುಖಂಡರು ಅತಿ ಹೆಚ್ಚು ಸಂಖ್ಯೆಯಲ್ಲಿ ಜನರನ್ನು ಕರೆತರಲು ಸಿದ್ಧತೆ ನಡೆಸಿದ್ದಾರೆ.

ಶಕ್ತಿ ಪ್ರದರ್ಶನಕ್ಕೆ ಸಜ್ಜು:

ಇನ್ನು ಅಮಿತ್ ಶಾ ರೋಡ್ ಶೋಗೆ 25ರಿಂದ 30 ಸಾವಿರ ಜನ ಸೇರುವ ನಿರೀಕ್ಷೆ ಇದೆ. ನಗರ ಹಾಗೂ ಗ್ರಾಮಾಂತರ ಭಾಗದಿಂದ ಭಾರಿ ಸಂಖ್ಯೆಯಲ್ಲಿ ಜನ ರೋಡ್ ಶೋ ವೀಕ್ಷಿಸಲು ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವೇಳೆ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಿದ್ದಾರೆ. ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಏ.4ರಂದು ನಾಮಪತ್ರ ಸಲ್ಲಿಸುತ್ತಿದ್ದು, ಅದಕ್ಕೂ ಮುನ್ನ ಬೊಂಬೆನಾಡಿನಲ್ಲಿ ನಡೆಯುವ ಅಮಿತ್ ಶಾ ರೋಡ್ ಶೋನಲ್ಲಿ ಶಕ್ತಿ ಪ್ರದರ್ಶನಕ್ಕೆ ಮೈತ್ರಿ ಪಕ್ಷಗಳು ತಯಾರಿ ನಡೆಸಿವೆ.

ಠಕ್ಕರ್ ನೀಡಲು ಸಿದ್ಧತೆ:

ಕಳೆದ ಎರಡು ಲೋಕಸಭಾ ಸಾರ್ವತ್ರಿಕ ಚುನಾವಣೆ ಹಾಗೂ 2013ರ ಲೋಕಸಭಾ ಉಪಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶ್ ಗೆಲವು ಸಾಧಿಸಿದ್ದಾರೆ. ಮೂರು ಲೋಕಸಭಾ ಚುನಾವಣೆಗಳಲ್ಲೂ ಸುರೇಶ್‌ಗೆ ಚನ್ನಪಟ್ಟಣದಲ್ಲಿ ಹೆಚ್ಚು ಲೀಡ್ ದೊರೆತಿದೆ. ಆದರೆ, ಈ ಬಾರಿ ರಾಜಕೀಯ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಚನ್ನಪಟ್ಟಣದಿಂದಲೇ ಚುನಾವಣೆಗೆ ರಣಕಹಳೆ ಮೊಳಗಿಸಲು ಎರಡೂ ಪಕ್ಷಗಳು ಮುಂದಾಗಿವೆ.

ರಸ್ತೆಗಳು ಬಂದ್:

ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ ಹಿನ್ನೆಲೆಯಲ್ಲಿ ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ರೋಡ್ ಶೋ ನಡೆಯುವ ಬೆಂಗಳೂರು-ಮೈಸೂರು ಹಳೇ ಹೆದ್ದಾರಿಯ ರಸ್ತೆಯ ಎರಡು ಬದಿಗಳಲ್ಲಿ ಹಾಗೂ ರಸ್ತೆ ಮಧ್ಯದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಸಣ್ಣಪುಟ್ಟ ರಸ್ತೆಗಳನ್ನು ಬಂದ್ ಮಾಡಿದ್ದು, ರ್‍ಯಾಲಿ ಸಾಗುವ ವೇಳೆ ರಸ್ತೆಯ ಎರಡು ಬದಿಯ ಅಂಗಡಿಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಅಮಿತ್ ಶಾ ರೋಡ್ ಶೋ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಸಿ.ಎನ್.ಮಂಜುನಾಥ್, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್.ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ರಾಜ್ಯಮಟ್ಟದ ಮುಖಂಡರು ಭಾಗವಹಿಸಲಿದ್ದಾರೆ. ಬಾಕ್ಸ್..............

ಪೊಲೀಸ್ ಸರ್ಪಗಾವಲು!

ಅಮಿತ್ ಶಾ ರೋಡ್ ಶೋ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಎಲ್ಲಡೆ ಪೊಲೀಸ್ ಸರ್ಪಗಾವಲಿದೆ. ರೋಡ್ ಶೋ ವೇಳೆ ಬಂದೋಬಸ್ತ್ ಕಲ್ಪಿಸುಲು ಐವರು ಡಿವೈಎಸ್‌ಪಿ, 21 ಸಿಪಿಐ, 61 ಎಎಸ್‌ಐ, 62 ಪಿಎಸ್‌ಐ, 616 ಜನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಯೊಬ್ಬರ ಚಲನವಲನದ ಮೇಲು ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.

ಬಾಕ್ಸ್...................

ಬೊಂಬೆನಾಡಿಗೆ ೨ನೇ ಬಾರಿ ಅಮಿತ್ ಶಾ ಭೇಟಿ

ಚುನಾವಣಾ ಪ್ರಚಾರಕ್ಕೆ ಅಮಿತ್ ಶಾ ಚನ್ನಪಟ್ಟಣಕ್ಕೆ ಎರಡನೇ ಬಾರಿಗೆ ಭೇಟಿ ನೀಡುತ್ತಿದಾರೆ. ಈ ಹಿಂದೆ ೨೦೧೮ರ ವಿಧಾನಸಭೆ ಚುನಾವಣೆ ವೇಳೆ ತಾಲೂಕಿಗೆ ಆಗಮಿಸಿದ್ದ ಅವರು ಸಿ.ಪಿ.ಯೋಗೇಶ್ವರ್ ಪರ ಬಹಿರಂಗ ಸಭೆಯಲ್ಲಿ ಮತಯಾಚನೆ ನಡೆಸಿದರು. ಆ ಚುನಾವಣೆಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಎದುರು ಯೋಗೇಶ್ವರ್ ಪರಾಭವಗೊಂಡಿದ್ದರು. ಇದೀಗ ಮತ್ತೆ ಬೊಂಬೆನಾಡಿಗೆ ಆಗಮಿಸುತ್ತಿರುವ ಅಮಿತ್ ಶಾ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ. ಮಂಜನಾಥ್ ಪರ ರೋಡ್ ಶೋ ನಡೆಸಲಿದ್ದಾರೆ.ಬಾಕ್ಸ್..................

ಒಂದು ತಾಸು ರೋಡ್ ಶೋ!

ಮಂಗಳವಾರ ಬೆಂಗಳೂರಿನ ಎಚ್‌ಎಎಲ್ ಏರ್‌ಪೋರ್ಟ್‌ನಿಂದ ಸಂಜೆ 4.10ಕ್ಕೆ ವಿಶೇಷ ಹೆಲಿಕಾಪ್ಟರ್ ಮೂಲಕ ಹೊರಡಲಿರುವ ಅಮಿತ್ ಶಾ, ಸಂಜೆ 4.40ರ ಹೊತ್ತಿಗೆ ತಾಲೂಕಿನ ಶೆಟ್ಟಿಹಳ್ಳಿ ಬಳಿ ನಿರ್ಮಿಸಿರುವ ತಾತ್ಕಾಲಿಕ ಹೆಲಿಪ್ಯಾಡ್‌ಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಮಂಗಳವಾರಪೇಟೆಯ ಬಸವನಗುಡಿ ತಲುಪಲಿದ್ದು, ಸಂಜೆ 4.50ರಿಂದ 5.50ರವರೆಗೆ ಒಂದು ತಾಸು ರೋಡ್ ಶೋ ನಡೆಸಲಿದ್ದಾರೆ. ರೋಡ್ ಶೋ ಮುಗಿದ ತಕ್ಷಣ ಮತ್ತೆ ಶೆಟ್ಟಿಹಳ್ಳಿಯ ಹೆಲಿಪ್ಯಾಡ್‌ಗೆ ತೆರಳರುವ ಅಮಿತ್ ಶಾ ಅಲ್ಲಿಂದ 6.00 ಗಂಟೆಗೆ ಹೆಲಿಕಾಪ್ಟರ್ ಮೂಲಕ ಹಿಂದಿರುಗಲಿದ್ದಾರೆ. (ಈ ಕೋಟ್‌ ಬೇಕಾದರೆ ಪ್ಯಾನಲ್‌ನಲ್ಲಿ ಬಳಸಬಹುದು)ಕೋಟ್.....

ಎನ್‌ಡಿಎ ಅಭ್ಯರ್ಥಿ ಡಾ. ಮಂಜುನಾಥ್ ಪರ ಚುನಾವಣಾ ಪ್ರಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಚನ್ನಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ರೋಡ್ ಶೋಗೆ ಸುಮಾರು 25ರಿಂದ 30 ಸಾವಿರ ಜನ ಆಗಮಿಸುವ ನಿರೀಕ್ಷೆ ಇದೆ. ಅಮಿತ್ ಶಾ ರೋಡ್ ಶೋನಿಂದ ಡಾ.ಮಂಜುನಾಥ್ ಪರ ಬಲ ಹೆಚ್ಚಾಗಲಿದೆ.

-ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯಪೊಟೋ1ಸಿಪಿಟ1:

ಅಮಿತ್ ಶಾ ರೋಡ್ ಶೋ ಹಿನ್ನೆಲೆಯಲ್ಲಿ ನಗರದದಲ್ಲಿ ತಾತ್ಕಾಲಿಕ ಬ್ಯಾರಿಕೇಡ್‌ಗಳನ್ನು ಅಳವಡಿಸುತ್ತಿರುವುದು.