ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಗೃಹಮಂತ್ರಿಯಾಗಿ ದೇಶವನ್ನು ಉನ್ನತ ಮಟ್ಟಕ್ಕೆ ನಡೆಸಿಕೊಂಡು ಬಂದಂತಹ ಅಮಿತ್ ಶಾ ಅವರು ಹಲವಾರು ಯೋಜನೆ ಕೊಟ್ಟಿದ್ದು, ಅವರು ಹೇಳಿರುವುದನ್ನು ಬಿಟ್ಟು ಯಾರೋ ಅದನ್ನು ತಿರುಚಿ ಅಪಪ್ರಚಾರ ಮಾಡಿದ್ದಾರೆ. ಇಷ್ಟಕ್ಕೆ ಸಂಸದರು ರಾಜೀನಾಮೆ ಕೇಳುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ದೇಶದ ಭದ್ರತೆಗಾಗಿ ಅಮಿತ್ ಶಾ ಅವರು ಅನೇಕ ಯೋಜನೆ ತಂದಿದ್ದು, ಕಾಶ್ಮೀರದಲ್ಲಿ ೩೧೭ ಆರ್ಟಿಕಲ್ ತೆಗೆಯಬೇಕಾದರೇ ಮುಖ್ಯ ಕಾರಣ ಅಮಿತ್ ಶಾ. ಕೇಂದ್ರ ಗೃಹಮಂತ್ರಿ ರಾಜೀನಾಮೆ ಕೊಡಬೇಕು ಎಂದು ಜಿಲ್ಲೆಯ ಸಂಸದರು ಹೇಳಿದ್ದು, ಕಾಂಗ್ರೆಸ್ ಪಕ್ಷವು ಎಷ್ಟು ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ ಹಾಗೂ ಅಂಬೇಡ್ಕರ್ ಬಗ್ಗೆ ಏನೇನು ಮಾಡಿದ್ದಾರೆ ಬಗ್ಗೆ ತಿಳಿದಿದೆ, ಕಾಂಗ್ರೆಸ್‌ನಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಶ್ರೇಯಸ್ ಪಟೇಲ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಟಾಂಗ್ ನೀಡಿದರು. ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಯೋಜನೆ ತಂದಿದ್ದಾರೆ. ವಿಶ್ವದಲ್ಲಿ ಗುರುತಿಸುವ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಅಮಿತ್ ಶಾ ಬಗ್ಗೆ ಮಾತನಾಡುವಾಗ ಅರಿವು ಇರಬೇಕು ಹಾಗೂ ನಾಲಿಗೆಯಲ್ಲಿ ಬಿಗಿ ಇರಬೇಕು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕೇವಲ ಗ್ಯಾರಂಟಿ ಮಾತ್ರ ಬಿಂಬಿಸಿ ಇತರೆ ಯಾವ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಎಲ್ಲಾ ಕಚೇರಿಯಲ್ಲಿ ಲಂಚದ ಮೂಲಕ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು. ಮುಡಾ, ವಾಲ್ಮೀಕಿ ಸೇರಿದಂತೆ ಹಲವಾರು ಹಗರಣಗಳಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯರ ರಕ್ಷಣೆಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಆದರೆ ಕಾಂಗ್ರೆಸ್ ನಾಯಕರು ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚಿ ಜನರಿಗೆ ತಪ್ಪು ಅಭಿಪ್ರಾಯ ಮೂಡಿಸುವ ಕೆಲಸ ಮಾಡುತ್ತಿದ್ದಾರೆ ಜೊತೆಗೆ ಹಾಸನದ ಸಂಸದರು ಸುದ್ದಿಗೋಷ್ಠಿ ನಡೆಸಿ ಕೇಂದ್ರ ಗೃಹ ಸಚಿವರ ರಾಜೀನಾಮೆ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು. ಅಂಬೇಡ್ಕರ್ ಬದುಕಿದ್ದಾಗ ಗೌರವಯುತವಾಗಿ ನಡೆಸಿಕೊಳ್ಳದ ಕಾಂಗ್ರೆಸ್ ಅವರನ್ನು ರಾಜಕೀಯವಾಗಿಯೂ ಹತ್ತಿಕ್ಕುವ ಕೆಲಸ ಮಾಡಿದೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರ ಕೊಡುಗೆಗಳನ್ನು ಸ್ಮರಿಸುವ ಕೆಲಸ ಮಾಡುತ್ತಿದೆ ಕಾಂಗ್ರೆಸ್ ನವರು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನದ ಬಗ್ಗೆ ತಿಳಿಸುವಾಗ ಅವರು ಅವರು ಹೇಳಿರುವ ಸಂಪೂರ್ಣ ಮಾತುಗಳ ಪೈಕಿ ಅರ್ಧ ಕತ್ತರಿಸಿ ಜನರಿಗೆ ತಪ್ಪು ಅಭಿಪ್ರಾಯ ಬರುವ ರೀತಿ ಮಾಡಿದ್ದಾರೆ ಜನರು ಕಾಂಗ್ರೆಸ್ ಮಾತಿಗೆ ಕಿವಿ ಕೊಡಬಾರದು ಎಂದು ಕೋರಿದರು. ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಕಾಂಗ್ರೆಸ್ ಈ ಹಿಂದಿನಿಂದಲೂ ವಿಡಿಯೋ ಹರಿಬಿಡುವ ಮೂಲಕ ಸಿಡಿ ರಾಜಕಾರಣ ಮಾಡಿಕೊಂಡು ಬಂದಿದೆ, ಅದರಂತೆ ಈಗಲೂ ಕೇಂದ್ರ ಗೃಹ ಸಚಿವರ ಹೇಳಿಕೆಯನ್ನು ತಿರುಚಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ, ಅವರ ಕುತಂತ್ರಕ್ಕೆ ಯಾರೂ ಮಣಿಯಬಾರದು ಎಂದರು. ರಾಜ್ಯ ರಾಜಕಾರಣದಲ್ಲಿ ಕೂಡ ಸಿಟಿ ರವಿ ಅವರ ಮೇಲೆ ಕಾಂಗ್ರೆಸ್ ನಾಯಕರ ದಬ್ಬಾಳಿಕೆ ಖಂಡನೀಯ ಅವರ ಮೇಲೆ ಹಲ್ಲೆ ಮಾಡಿಸಿದ್ದಲ್ಲದೆ ಅವರನ್ನು ರಾತ್ರಿಯಿಡೀ ಸುತ್ತಿಸಿ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಜನಪ್ರತಿನಿಧಿಗಳ ಮೇಲೆಯೇ ಹೀಗಾದರೆ ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ್, ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ಡಿ. ರಾಜ್ ಕುಮಾರ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್ ಇತರರು ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))