ಬಿಜೆಪಿ ಕೋರ್‌ ಕಮಿಟಿ ಸದಸ್ಯರಿಗೆ ತಲಾ 2 ಕ್ಷೇತ್ರ ಹೊಣೆ: ಅಮಿತ್‌ ಶಾ

| Published : Feb 12 2024, 01:36 AM IST / Updated: Feb 12 2024, 12:43 PM IST

ಬಿಜೆಪಿ ಕೋರ್‌ ಕಮಿಟಿ ಸದಸ್ಯರಿಗೆ ತಲಾ 2 ಕ್ಷೇತ್ರ ಹೊಣೆ: ಅಮಿತ್‌ ಶಾ
Share this Article
  • FB
  • TW
  • Linkdin
  • Email

ಸಾರಾಂಶ

ಗೊಂದಲ ಬಗೆಹರಿಸಲು ಟಾಸ್ಕ್‌ ನೀಡಲಾಗಿದ್ದು, ಪ್ರತಿ ಬೂತ್‌ನಲ್ಲಿ ಮತ ಗಳಿಕೆ ಶೇ.10ರಷ್ಟು ಹೆಚ್ಚಿಸಲು ಸೂಚನೆ ನೀಡಿದ್ದಾರೆ. ಎಲ್ಲ 28 ಸ್ಥಾನ ಗೆಲ್ಲುವ ಗುರಿಯೊಂದಿಗೆ ಮೈಸೂರಲ್ಲಿ ಹಿರಿಯ ನಾಯಕರ ಸಭೆ ನಡೆಸಿದ ಕೇಂದ್ರ ಸಚಿವ ಅಮಿತ್‌ ಶಾ ರಣತಂತ್ರ ಹೆಣೆದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು/ಮೈಸೂರು

ಪಕ್ಷದ ಕೋರ್ ಕಮಿಟಿ ಸದಸ್ಯರು ತಲಾ ಎರಡು ಕ್ಷೇತ್ರಗಳಂತೆ ಉಸ್ತುವಾರಿ ತೆಗೆದುಕೊಂಡು ಅಲ್ಲಿನ ಸಂಘಟನೆಯಲ್ಲಿರುವ ಗೊಂದಲಗಳನ್ನು ಬಗೆಹರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ನಾಯಕ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚನೆ ನೀಡಿದ್ದಾರೆ.

ಅಲ್ಲದೆ, ಪ್ರತಿ ಬೂತ್‌ನಲ್ಲಿ ಪಕ್ಷದ ಮತಗಳಿಕೆ ಪ್ರಮಾಣ ಶೇ.10ರಷ್ಟು ಹೆಚ್ಚಳವಾಗಬೇಕು. ರಾಜ್ಯದ ಎಲ್ಲಾ 28 ಸ್ಥಾನಗಳನ್ನು ಗೆಲ್ಲಬೇಕು ಎಂದೂ ಅವರು ಗುರಿ ಕೊಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾನುವಾರ ಮೈಸೂರಿನಲ್ಲಿ ರಾಜ್ಯ ಬಿಜೆಪಿಯ ಹಿರಿಯ ನಾಯಕರನ್ನು ಒಳಗೊಂಡ ಕೋರ್ ಕಮಿಟಿ ಸಭೆಯ ಆರಂಭದಲ್ಲಿ ರಾಜ್ಯ ನಾಯಕರು ಅಯೋಧ್ಯೆಯ ಶ್ರೀರಾಮಮಂದಿರ ಉದ್ಘಾಟನೆ ವಿಷಯ ಪ್ರಸ್ತಾಪಿಸಿ ಅದರಿಂದ ಪಕ್ಷದ ವರ್ಚಸ್ಸಿಗೆ ಅನುಕೂಲವಾಗಿರುವ ಬಗ್ಗೆ ಮೆಚ್ಚುಗಯೆ ಮಾತುಗಳನ್ನಾಡಿದರು. 

ಇದನ್ನು ಅರ್ಧಕ್ಕೆ ತಡೆದ ಅಮಿತ್ ಶಾ ಅವರು ಸಕಾರಾತ್ಮಕ ಅಂಶಗಳನ್ನು ಬಿಟ್ಟು ನಕಾರಾತ್ಮಕ ಅಂಶಗಳನ್ನು ತಿಳಿಸಿ. ಅದನ್ನು ಸರಿಪಡಿಸೋಣ ಎಂಬ ಸಲಹೆ ನೀಡಿದರು.

ಆಗ ರಾಜ್ಯ ನಾಯಕರು ಕೆಲವು ಲೋಕಸಭಾ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಅದು ಬಣ ರಾಜಕೀಯಕ್ಕೂ ತಿರುಗಿದೆ. 

ಕೆಲವೆಡೆ ಗೊಂದಲ ಏರ್ಪಟ್ಟಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ನೀವು ಕೋರ್ ಕಮಿಟಿಯಲ್ಲಿರುವವರು ಎಲ್ಲರೂ ಹಿರಿಯ ನಾಯಕರು. 

ಪಕ್ಷದ ರಾಜ್ಯ ಘಟಕದ ಯಜಮಾನರಿದ್ದಂತೆ. ನೀವೆಲ್ಲರೂ ತಲಾ ಎರಡು ಲೋಕಸಭಾ ಕ್ಷೇತ್ರಗಳ ಜವಾಬ್ದಾರಿ ತೆಗೆದುಕೊಂಡು ಅಲ್ಲಿಗೆ ಖುದ್ದಾಗಿ ಭೇಟಿ ನೀಡಿ. 

ಸ್ಥಳೀಯ ಮುಖಂಡರೊಂದಿಗೆ ಮಾತುಕತೆ ನಡೆಸಿ ಗೊಂದಲ ಬಗೆಹರಿಸಿ ಎಂದು ಸೂಚಿಸಿದರು ಎನ್ನಲಾಗಿದೆ.ಇದೇ ತಿಂಗಳ 20 ಅಥವಾ 21ರಂದು ಪಕ್ಷದ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವ ರಾಧಾ ಮೋಹನ್ ದಾಸ್ ಅಗರ್‌ವಾಲ್‌ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದು ಪಕ್ಷದ ಹಿರಿಯ ನಾಯಕರ ಜತೆ ದಿನವಿಡೀ ಸಭೆ ನಡೆಸಲಿದ್ದಾರೆ. 

ಆ ವೇಳೆ ಕೋರ್ ಕಮಿಟಿ ಸದಸ್ಯರಿಗೆ ಲೋಕಸಭಾ ಕ್ಷೇತ್ರಗಳ ಜವಾಬ್ದಾರಿ ಹಂಚಿಕೆ ಮಾಡಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.ಕಳೆದ ಬಾರಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 26ರಲ್ಲಿ ಗೆದ್ದಿದ್ದೇವೆ. 

ಮುಂಬರುವ ಚುನಾವಣೆಯಲ್ಲಿ 28 ಕ್ಷೇತ್ರಗಳೂ ಎನ್‌ಡಿಎ ಪಾಲಾಗಬೇಕು. ಪ್ರತಿ ಬೂತ್‌ ನಿಂದ ಶೇ.10 ರಷ್ಟು ಮತ ಕಳೆದ ಬಾರಿಗಿಂತ ಹೆಚ್ಚಾಗಬೇಕು ಎಂಬ ಗುರಿ ನೀಡಿದ ಅಮಿತ್ ಶಾ ಅವರು ಚುನಾವಣೆಯಲ್ಲಿ ಗೆಲ್ಲಲು ಬೇಕಾದ ಕಾರ್ಯತಂತ್ರಗಳನ್ನು ವಿವರಿಸಿದರು. 

ಜೆಡಿಎಸ್ ಜೊತೆ ಸೀಟು ಹಂಚಿಕೆ ವಿಷಯ ಕುರಿತು ಪ್ರಸ್ತಾಪಿಸಿಲ್ಲ. ಆದರೆ, ಒಟ್ಟಾರೆ ಪಕ್ಷದ ನಾಯಕರಿಗೆ ಅಜೆಂಡಾ ಮತ್ತು ಟಾರ್ಗೆಟ್‌ ಎರಡನ್ನೂ ನೀಡಿದ್ದಾರೆ ಎನ್ನಲಾಗಿದೆ.

ರಾಜ್ಯದ 28 ಲೋಕಸಭಾ ಕ್ಷೇತ್ರಗಳಿಗೆ ಮುಂಚಿತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪ್ರಕಟಿಸುವ ಕುರಿತು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈ ವೇಳೆ ಸಭೆಯಲ್ಲಿ ಪ್ರಸ್ತಾಪಿಸಿದರು. 

ರಾಜ್ಯಸಭಾ ಮತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೂ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕುರಿತು ಸಲಹೆ ಪಡೆದರು. ರಾಜ್ಯಸಭೆಯಲ್ಲಿ ಬಿಜೆಪಿ ಎರಡು ಸ್ಥಾನ ಪಡೆಯಬಹುದಾಗಿದ್ದರೆ, ವಿಧಾನ ಪರಿಷತ್ ಸದಸ್ಯ ಸ್ಥಾನಗಳಿಗೆ ಮೂವರನ್ನು ಆಯ್ಕೆ ಮಾಡಲು ಅವಕಾಶವಿದೆ. 

ಮುಂದಿನ ದಿನಗಳಲ್ಲಿ ಮತ್ತೊಂದು ಸಭೆ ನಡೆಸಿ ಅಂತಿಮಗೊಳಿಸುವಂತೆ ಸೂಚಿಸಿರುವುದಾಗಿ ತಿಳಿದು ಬಂದಿದೆ.

ಸಭೆಯಲ್ಲಿ ಕರ್ನಾಟಕ ಲೋಕಸಭಾ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ ಅಗರವಾಲ್‌, ರಾಜ್ಯಾಧ್ಯಕ್ಷ ವಿಜಯೇಂದ್ರ, ಕೋರ್‌ ಕಮಿಟಿ ಸದಸ್ಯರಾದ ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ, ಬಿ.ಶ್ರೀರಾಮುಲು, ನಿರ್ಮಲ್‌ಕುಮಾರ್ ಸುರಾನಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಮತ್ತಿತರರು ಪಾಲ್ಗೊಂಡಿದ್ದರು