ಸಾರಾಂಶ
ಸುದ್ದಿಗೋಷ್ಠಿ । ಗಾಂಧಿ ಹುತಾತ್ಮ ದಿನದ ಅಂಗವಾಗಿ ಸಿಐಟಿಯು ಆಯೋಜನೆ । ಜಿಲ್ಲಾಧ್ಯಕ್ಷ ಧರ್ಮೇಶ್ ಮಾಹಿತಿ
ಕನ್ನಡಪ್ರಭ ವಾರ್ತೆ ಹಾಸನಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಗಾಂಧಿ ಹುತಾತ್ಮ ದಿನದ ಅಂಗವಾಗಿ ಕಾರ್ಯಕ್ರಮ ನಡೆಯುವಂತೆ ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿ ಜನವರಿ ೩೦ ರಂದು ಸಂಜೆ ೪ ಗಂಟೆಗೆ ಸೌಹಾರ್ದತಾ ಮಾನವ ಸರಪಳಿ ಹಾಗೂ ಸಭೆ ನಡೆಯಲಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಇಂದು ವಿವೇಕ ಅವಿವೇಕ, ಸತ್ಯ-ಅಸತ್ಯ, ವಿಚಾರ-ವಿಕಾರಗಳ ನಡುವಿನ ಅಂತರ ಕಡಿಮೆಯಾಗುತ್ತಿದೆ. ಆದರೆ ಮನುಷ್ಯ-ಮನುಷ್ಯರ ನಡುವಿನ ’ಕಂದರ’ ಹೆಚ್ಚಾಗುತ್ತಿದೆ. ಈ ಕಂದರದ ಒಳಗಿಂದ ಬರುತ್ತಿರುವ ಕರುಳ ಬಳ್ಳಿಯ ಕರೆ ಕ್ಷೀಣ ದನಿಯಾಗುತ್ತಿದೆ. ಹೊರಗಿನ ಅನುಚಿತ ಗದ್ದಲದಲ್ಲಿ ಕರುಳಬಳ್ಳಿಯ ಮಾನವೀಯ ಕರೆ ಕೇಳಿಸದಂತಾಗಿದೆ. ಇಂಥ ಕಳವಳಕಾರಿ ವಾತಾವರಣದಲ್ಲಿ ಸೌಹಾರ್ದವನ್ನು ಮುನ್ನೆಲೆಗೆ ತರಲು ಎಲ್ಲ ಕ್ಷೇತ್ರಗಳ ಮಾನವೀಯ ಮನಸ್ಸುಗಳು ಮುಂದಾಗಬೇಕಾಗಿದೆ ಎಂದರು.‘ಸೌಹಾರ್ದ ಎಂದರೆ ಪಕ್ಷಪಾತವಲ್ಲ. ಪೂರ್ವಾಗ್ರಹವಲ್ಲ. ಇದು ಎಲ್ಲಾ ವಲಯದ ಅವಿವೇಕಗಳನ್ನು ಮೀರಿದ ವಿವೇಕದ ಹಾದಿ. ಶಾಂತಿ, ಸಮಾಧಾನ ಮತ್ತು ಸಮಾನ ಮನಸ್ಥಿತಿಯ ಸಾಮಾಜಿಕ ಮೌಲ್ಯಪರ ಮತ್ತು ವಿರೋಧಿ ನೆಲೆಗಳಲ್ಲಿರುವ ವೈರುಧ್ಯಗಳನ್ನು ಒಂದಾಗಿಸುವ ಪ್ರಕ್ರಿಯೆಯ ಪ್ರತೀಕವೇ ಸೌಹಾರ್ದ. ನಮ್ಮ ಭಾರತಕ್ಕೆ ಬಹುದೊಡ್ಡ ಸೌಹಾರ್ದ ಪರಂಪರೆಯಿದೆ. ಬಹು ಸಂಸ್ಕೃತಿ, ಬಹುಭಾಷೆ ಮತ್ತು ಬಹು ಧರ್ಮಗಳ ಎಲ್ಲರೂ ಪರಸ್ಪರ ಸೌಹಾರ್ದದಿಂದ ಬದುಕುತ್ತ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕೆಂಬ ಬದ್ಧತೆಯಿಂದ ಅನೇಕ ಸಾಧಕರು ಶ್ರಮಿಸಿದ್ದಾರೆ ಎಂದು ಹೇಳಿದರು.
ಹಿರಿಯ ಸಾಹಿತಿ ಭಾನುಮುಸ್ತಾಕ್ ಮಾತನಾಡಿ, ಹಲವು ದಶಕಗಳಿಂದಲೂ ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ ಎಂದು ಹೆಮ್ಮೆಯಿಂದ ಕರೆಯುತ್ತಾ ಬಂದ ಹಿರಿಮೆಗೆ ಈಗಾಗಲೇ ಗಂಭೀರ ಧಕ್ಕೆ ಬಂದೊದಗಿರುವುದು ನಿಚ್ಚಳವಾಗಿದೆ. ಜನರನ್ನು ಮತಾಂಧತೆಯ ಆಧಾರದಲ್ಲಿ ಜಾತಿ-ಮತಧರ್ಮಗಳ ಹೆಸರಿನಲ್ಲಿ ವಿಭಜಿಸುವ ಶಕ್ತಿಗಳಿಂದ ನಮ್ಮ ಸಾಮಾಜಿಕ ಸೌಹಾರ್ದತೆಗೆ ತೀವ್ರವಾದ ಹಾನಿಯಾಗಿದೆ. ಮತೀಯ ದ್ವೇಷ-ಹಗೆತನದ ಭಾವನೆಗಳು ಸಾಮಾನ್ಯ ಜನರ ಮನಸ್ಸನ್ನು ಆವರಿಸಿಕೊಳ್ಳುತ್ತಿರುವ ವಿಷಮ ಗಳಿಗೆಯಲ್ಲಿ ನಾವು ಹಾದು ಹೋಗುತ್ತಿದ್ದೇವೆ. ದೇವರು, ಮತಧರ್ಮ ಮುಂತಾದವುಗಳನ್ನು ಸಂಕುಚಿತ ಉದ್ದೇಶಗಳಿಗೆ ಎಗ್ಗಿಲ್ಲದೇ ಬಳಸಲಾಗುತ್ತಿದೆ. ಒಟ್ಟಿಗೆ ಹೋಗುವ ನಿಟ್ಟಿನಲ್ಲಿ ಪ್ರಗತಿಪರ ಮುಖಂಡರು, ವಿವಿಧ ಸಂಘಟನೆಗಳು, ರೈತರು, ಧಾರ್ಮಿಕ ಅಲ್ಪಸಂಖ್ಯಾತ ಸಂಘಟನೆಗಳು ಸಹಕಾರ ನೀಡಿವೆ. ಜ.೩೦ ರಂದು ಮಹಾತ್ಮ ಗಾಂಧಿ ಹುತಾತ್ಮ ದಿನದಂದು ಇಡೀ ರಾಜ್ಯಾಧ್ಯಂತ ಮಾನವ ಸರಪಳಿಯನ್ನು ಮಾಡಲು ಪಾಲ್ಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ಹಿರಿಯ ಸಾಹಿತಿ ಭಾನುಮಸ್ತಾಕ್, ಅಂತಾರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಸಂಚಾಲಕ ಅಂಬೂಗ ಮಲ್ಲೇಶ್, ಕ್ರೈಸ್ತ ಮುಖಂಡರಾದ ಸುರೇಶ್, ಹಿರಿಯ ಪತ್ರಕರ್ತರಾದ ವೆಂಕಟೇಶ್, ಅಜಾದ್ ಟಿಪ್ಪು ಸಂಘರ್ಷ ಸಮಿತಿ ಅಧ್ಯಕ್ಷ ಮುಬಾಶೀರ್ ಅಹಮದ್, ಸೌಹಾರ್ದ ವೇದಿಕೆಯ ಜಿಲ್ಲಾ ಸಂಚಾಲಕ ಎಂ.ಜಿ. ಪೃಥ್ವಿ ಉಪಸ್ಥಿತರಿದ್ದರು.ಸೌಹಾರ್ದತಾ ಮಾನವ ಸರಪಳಿ ಹಾಗೂ ಸಭೆ ಕುರಿತು ಸಿಐಟಿಯು ನಡೆಸಿದ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ಮಾತನಾಡಿದರು.