ಸಾರಾಂಶ
ಪಟ್ಟಣದ ಕೆಪಿಎಸ್‌ನ ಪ್ರೌಢ ಶಾಲಾ ವಿಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ರಾಷ್ಟೀಯ ಮತದಾನ ದಿನ ಹಾಗೂ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಮಂಜುನಾಥ್ ಪ್ರಪಂಚದಲ್ಲೇ ಭಾರತ ದೇಶ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟವಾಗಿದೆ ಎಂದರು.
ಕೆಪಿಎಸ್‌ನ ಶಾಲೆಯಲ್ಲಿ ತಾಲೂಕು ಕಸಾಪ ಆಶ್ರಯದಲ್ಲಿ ರಾಷ್ಟೀಯ ಮತದಾನ, ಹೆಣ್ಣು ಮಕ್ಕಳ ದಿನಾಚರಣೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪ್ರಪಂಚದಲ್ಲೇ ಭಾರತ ದೇಶ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜೆ.ಮಂಜುನಾಥ್ ತಿಳಿಸಿದರು.
ಶನಿವಾರ ಪಟ್ಟಣದ ಕೆಪಿಎಸ್‌ನ ಪ್ರೌಢ ಶಾಲಾ ವಿಭಾಗದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ ರಾಷ್ಟೀಯ ಮತದಾನ ದಿನ ಹಾಗೂ ರಾಷ್ಟೀಯ ಹೆಣ್ಣು ಮಕ್ಕಳ ದಿನಾಚರಣೆಯಲ್ಲಿ ಮತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಚುನಾವಣೆಗೆ ಸರ್ಕಾರವನ್ನೇ ಬದಲಾಯಿಸುವ ಶಕ್ತಿ ಇದೆ. ಲೋಕ ಸಭೆಯಲ್ಲಿ 543 ಸದಸ್ಯರಿದ್ದು ಇವರಲ್ಲಿ 272 ಕ್ಕಿಂತ ಹೆಚ್ಚು ಸ್ಥಾನ ಪಡೆದವರು ಸರ್ಕಾರ ನಡೆಸುತ್ತಾರೆ. ಮತದಾರರು ಯಾವುದೇ ಪ್ರಲೋಭನೆಗೆ ಒಳಗಾಗದೆ ಮತ ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ಚುನಾಯಿಸಬೇಕು. ಭಾರತ ದೇಶದಲ್ಲಿ 1947 ರಲ್ಲಿ ಸ್ವಾತಂತ್ತ್ರ್ಯ ಬಂದಿದ್ದು 1950 ರಿಂದಲೇ ಎಲ್ಲಾ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು. ಆದರೆ, ಅಮೇರಿಕಾ ಹಾಗೂ ಇತರ ದೊಡ್ಡ ಪ್ರಜಾ ಪ್ರಭುತ್ವ ರಾಷ್ಟಗಳು ಮಹಿಳೆಯರಿಗೆ ಮತದಾನ ನೀಡಲು ವಿಳಂಬ ಮಾಡಿತ್ತು ಎಂದರು. ತಾಲೂಕು ಕಸಾಪ ಅಧ್ಯಕ್ಷ ಎಸ್.ಎಚ್.ಪೂರ್ಣೇಶ್ ಮಾತನಾಡಿ, ತಾಲೂಕು ಕಸಾಪ ದಿಂದ ಮುಂದಿನ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಕನ್ನಡದಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಇಂಗ್ಲೀಷ್ ಭಾಷೆ ಸೇರಿದಂತೆ ಬೇರೆ ಭಾಷೆಗಳನ್ನು ಕಲಿಯಿರಿ. ಆದರೆ, ಕನ್ನಡ ಭಾಷೆ, ಕನ್ನಡ ಶಾಲೆಗಳನ್ನು ಪ್ರೀತಿಸಬೇಕು.18 ವರ್ಷ ತುಂಬಿದ ಎಲ್ಲರೂ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಬಹುದು. ಸಂಸಾರದಿಂದ ಹಿಡಿದು ದೇಶಕಟ್ಟುವುವರೆಗೂ ಹೆಣ್ಣಿನ ಪಾತ್ರ ದೊಡ್ಡದಾಗಿದ್ದು ಮಹಿಳೆಯರಿಗೆ ವಿಶೇಷ ಗೌರವ ನೀಡಬೇಕು. ಕನ್ನಡ ದಿನ ಪತ್ರಿಕೆಗಳು ಸಾಹಿತ್ಯದ ಒಂದು ಭಾಗ ವಾಗಿದ್ದು ಕನ್ನಡ ಬೆಳೆಯಲು ಕನ್ನಡ ದಿನ ಪತ್ರಿಕೆಗಳು ಸಹ ಕಾರಣ ಎಂದರು. ಕಸಾಪ ಕಸಬಾ ಹೋಬಳಿ ಅಧ್ಯಕ್ಷೆ ಜುಬೇದ ಮಾತನಾಡಿ, ಹೆಣ್ಣನ್ನು ಭೂಮಿ ತಾಯಿಗೆ ಹೋಲಿಸುತ್ತಾರೆ. ಹೆಣ್ಣಿಗೆ ಮೀಸಲಾತಿ ಇದೆ. ಆದರೂ ಮಹಿಳೆಯರಿಗೆ ಭದ್ರತೆ ಇಲ್ಲವಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಮಕ್ಕಳು ಮುಂದೆ ಹೋಗದಂತೆ ತಡೆಯುತ್ತಾರೆ. ಮಹಿಳೆಯರು ಮೊದಲು ಆತ್ಮ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಇಂದು ಹೆಣ್ಣು ಎಲ್ಲಾ ಕ್ಷೇತ್ರ ಗಳಲ್ಲೂ ಕಾಲಿಟ್ಟು ಯಶಸ್ಸು ಕಂಡಿದ್ದಾಳೆ. ಮಕ್ಕಳಿಗೆ ತಂದೆ, ತಾಯಿ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಸಲಹೆ ನೀಡಿದರು. ಕೆಪಿಎಸ್ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಪುರುಶೋತ್ತಮ್ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಗುರಿಯನ್ನು ಸಾಕಾರ ಗೊಳಿಸಲು ಪ್ರಯತ್ನ ನಡೆಸಬೇಕು. ವಿದ್ಯಾರ್ಥಿಗಳು ತಮಗೆ ಇಷ್ಟವಾದ ಕ್ಷೇತ್ರಗಳನ್ನು ಆರಿಸಿಕೊಳ್ಳಬೇಕು. ಮಹಿಳೆ ಯರು ಇತ್ತೀಚೆಗೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ರಾಷ್ಟ್ರಪತಿಯಿಂದ ಹಿಡಿದು ರಕ್ಷಣಾ ವ್ಯವಸ್ಥೆಯಲ್ಲೂ ಕಾಲಿಟ್ಟಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಹೆಣ್ಣು ಮಕ್ಕಳ ದಿನಾಚರಣೆ ಪ್ರಯಕ್ತ ಮುರಾರ್ಜಿ ದೇಸಾಯಿ ವಸತಿ ಶಾಲೆ 10 ನೇ ತರಗತಿ ಉದಯೋನ್ಮುಖ ಬರಹಗಾರ್ತಿ ಪಿ.ಮಾನ್ಯ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಕೆಪಿಎಸ್ ಪ್ರೌಢ ಶಾಲೆ ಸಹ ಶಿಕ್ಷಕ ಎ.ವಿಜು ಉಪಸ್ಥಿತರಿದ್ದರು.