ಅಮ್ಮಾ ನಿರ್ಮಲಾ, ನಮ್ಮ ದುಡ್ಡು ನೀಡಮ್ಮ: ಸಿದ್ದರಾಮಯ್ಯ

| Published : Feb 08 2024, 01:33 AM IST

ಅಮ್ಮಾ ನಿರ್ಮಲಾ, ನಮ್ಮ ದುಡ್ಡು ನೀಡಮ್ಮ: ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

‘ಹಣಕಾಸು ಆಯೋಗ ಸ್ವತಂತ್ರ ಸಂಸ್ಥೆ. ಅದರಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ’ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ‘ಅಮ್ಮಾ ನಿರ್ಮಲಾ, ನಮ್ಮ ದುಡ್ಡು ನೀಡಮ್ಮ’ ಎಂದು ವ್ಯಂಗ್ಯವಾಡಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

‘ಹಣಕಾಸು ಆಯೋಗ ಸ್ವತಂತ್ರ ಸಂಸ್ಥೆ. ಅದರಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದಿಲ್ಲ’ ಎಂಬ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡದೇ ಇದ್ದರೂ ಯಾಕೆ ಹಣ ನೀಡಿಲ್ಲ ಎಂದು ಪ್ರಶ್ನಿಸಿರುವ ಸಿಎಂ, ‘ಅಮ್ಮಾ ನಿರ್ಮಲಾ, ನಮ್ಮ ದುಡ್ಡು ನೀಡಮ್ಮ’ ಎಂದು ವ್ಯಂಗ್ಯವಾಡಿದ್ದಾರೆ.ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯ ಜಂತರ್‌ ಮಂತರ್‌ನಲ್ಲಿ ಬುಧವಾರ ನಡೆದ ಐತಿಹಾಸಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಹಾಗಾದರೆ ನಮಗೆ ಕೊಡಬೇಕಾದ 11,495 ಕೋಟಿ ರೂ.ಗಳನ್ನು ಯಾಕೆ ಕೊಟ್ಟಿಲ್ಲ?. ಯಾಕ್ರಿ ಸುಳ್ಳು ಹೇಳ್ತೀರಾ?. ‘ಕ್ಯೂ ಜೂಟ್ ಬೊಲ್ತಿ ಹೈ’ ಎಂದು ವ್ಯಂಗವಾಡಿದರು. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ಬಜೆಟ್‌ನಲ್ಲೇ ಘೋಷಿಸಿದ್ದರು. ಆದರೆ, ಒಂದು ರೂಪಾಯಿ ಕೊಟ್ಟಿಲ್ಲ ಎಂದು ಆರೋಪಿಸಿದರು.

ಹಣಕಾಸು ಆಯೋಗ ನಿಯೋಜಿಸುವ ಅಧಿಕಾರ ಪ್ರಧಾನಿ ನರೇಂದ್ರ ಮೋದಿ ಅವರಿಗಿದೆ. 15ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತದವರು ಯಾರೂ ಇರಲಿಲ್ಲ. ಇದರಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗಿದೆ. ಈ ಅನ್ಯಾಯವನ್ನು ಸರಿಪಡಿಸಲು ಈ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಕಿಡಿಕಾರಿದರು.

ಇದೇ ವೇಳೆ, ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಸಿಎಂ, ಕರ್ನಾಟಕಕ್ಕೆ ಅನ್ಯಾಯ ಆಗಲು ಸಿದ್ದರಾಮಯ್ಯ ಹೊಣೆ ಅಲ್ಲ. ಈ ಅನ್ಯಾಯಕ್ಕೆ ಕಾರಣ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ. ಸತ್ಯ ಮುಚ್ಚಿಡಲು ಸಾಧ್ಯವಿಲ್ಲ ಎಂದರು.ರಾಜ್ಯದ ಬಿಜೆಪಿ ಎಂಪಿಗಳು ಕೋಲೆ ಬಸವನ ತರ ತಲೆ ಅಲ್ಲಾಡಿಸ್ತಾರೆ:

ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿ ಸಂಸದರು ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎಂದು ಕಿಡಿ ಕಾರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸಂಸದರು ಕೋಲೆ ಬಸವನ ತರ ಮೋದಿ ಹೇಳಿದ್ದಕ್ಕೆಲ್ಲಾ ತಲೆ ಅಲ್ಲಾಡಿಸ್ತಾರೆ ಎಂದು ಕುಟುಕಿದ್ದಾರೆ.ತೆರಿಗೆ ಪಾಲು, ಅನುದಾನ ಹಂಚಿಕೆ, ಬರ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಖಂಡಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಬುಧವಾರ ರಾಜ್ಯ ಸರ್ಕಾರದ ವತಿಯಿಂದ ನಡೆದ ಐತಿಹಾಸಿಕ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ನಾನು ಹಿಂದೆ ಬಿಜೆಪಿ ನಾಯಕರಿಗೆ ಸಲಹೆ ಕೊಟ್ಟಿದ್ದೆ. ರಾಜ್ಯಕ್ಕೆ ಬರಬೇಕಿರುವ ಬಾಕಿ ಅನುದಾನ ಬಿಡುಗಡೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ಸದನದಲ್ಲಿ ಯಡಿಯೂರಪ್ಪ ಅವರಿಗೇ ಮನವಿ ಮಾಡಿದ್ದೆ. ಆದರೆ, ಬಿಜೆಪಿಯ ಯಾವ ನಾಯಕರೂ ಈ ಬಗ್ಗೆ ಬಾಯಿ ಬಿಡುತ್ತಿಲ್ಲ. ಮೋದಿ ತಲೆ ಅಲ್ಲಾಡಿಸಿ ಎಂದರೆ ತಲೆ ಅಲ್ಲಾಡಿಸ್ತಾರೆ ಎಂದು ವ್ಯಂಗ್ಯವಾಡಿದರು.ಹಾಗಿದ್ದರೆ ನಿಮ್ಮನ್ಯಾಕೆ ರಾಜ್ಯದ ಜನ ಆರಿಸಿ‌ ಕಳುಹಿಸಿದ್ದು?. ಬರೀ ತಲೆ ಅಲ್ಲಾಡಿಸಲು ಕಳುಹಿಸಿದ್ದಾ? ಎಂದು ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.