ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಮಾಹೆ ಮತ್ತು ಮಣಿಪಾಲದ ರೋಟರಿ ಕ್ಲಬ್ ವತಿಯಿಂದ ವಿಶ್ವ ಆಲ್ಝೈಮರ್ ದಿನ ಮತ್ತು ವೃದ್ಧರ ಅಂತಾರಾಷ್ಟ್ರೀಯ ದಿನವನ್ನು ಇಲ್ಲಿನ ಮಟ್ಟು ಬೀಚ್‌ನಲ್ಲಿ ವಿಶಿಷ್ಟ ಮತ್ತು ಅರ್ಥಪೂರ್ಣ ರೀತಿಯಲ್ಲಿ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿದ್ದ ಮಾಹೆಯ ಔದ್ಯೋಗಿಕ ಚಿಕಿತ್ಸಾ ವಿಭಾಗದ ವೃದ್ಧಾಪ್ಯ ಮತ್ತು ಸ್ಮರಣೆ ಘಟಕದ ಉಸ್ತುವಾರಿ ಡಾ. ಸೆಬೆಸ್ಟಿನಾ ಅನಿತಾ ಡಿಸೋಜ ಮಾತನಾಡಿ, ಮರೆಗುಳಿತನವು ಜನಸಂಖ್ಯೆಯ ಶೇ.10ರಷ್ಟು ಜನರನ್ನು ಕಾಡುವ ನರವೈಜ್ಞಾನಿಕ ಸ್ಥಿತಿಯಾಗಿದೆ. ಮರೆಗುಳಿತನ ರೋಗಿಯ ಮೇಲೆ ಮಾತ್ರವಲ್ಲ, ಅವರ ಆರೈಕೆಯ ಹೊರೆಯನ್ನು ಅನುಭವಿಸುವ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸಮಾಜಕ್ಕೆ ಹಿರಿಯ ನಾಗರಿಕರು ಹೆಚ್ಚಿನ ಕೊಡುಗೆ ನೀಡಿರುತ್ತಾರೆ. ಅವರ ವೃದ್ಧಾಪ್ಯದ ಆರೋಗ್ಯವನ್ನು ಕಾಪಾಡುವುದು ಅತ್ಯಗತ್ಯ ಎಂದರು.ರೋಟರಿ ಕ್ಲಬ್ ಮಣಿಪಾಲ ಅಧ್ಯಕ್ಷೆ ರೋಟರಿ ಸದಸ್ಯೆ ಶಶಿಕಲಾ ರಾಜವರ್ಮ, ಆಲ್ಝೈಮರ್ ಮತ್ತು ಡಿಮೆನ್ಷಿಯ ಕಾಯಿಲೆಗಳ ನಿರ್ವಹಣೆಗೆ ಜಾಗೃತಿ, ಆರಂಭಿಕ ಗುರುತಿಸುವಿಕೆ ಮತ್ತು ವಯಸ್ಸಾದವರೊಂದಿಗೆ ಕೆಲಸ ಮಾಡುವ ಆರೋಗ್ಯ ವೃತ್ತಿಪರರಿಗೆ ವಿಶೇಷ ತರಬೇತಿಯ ಅಗತ್ಯವಿದೆ ಎಂದು ಹೇಳಿದರು.ರೋಟರಿ ಕ್ಲಬ್ ಕಾರ್ಯದರ್ಶಿ ವಾಣಿಶ್ರೀ ರಾವ್, ನಿವೃತ್ತ ಸರ್ಕಾರಿ ಅಧಿಕಾರಿ ಶ್ರೀನಿವಾಸ್ ತೋನ್ಸೆ ಮತ್ತು ಆರೈಕೆದಾರರ ಪ್ರತಿನಿಧಿ ಕಿರಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಮಾತ್ರವಲ್ಲದೇ ಆಗುಂಬೆ, ಪುತ್ತೂರುನಿಂದಲೂ ಆರೈಕೆದಾರರು ಭಾಗವಹಿಸಿದ್ದರು. ಔದ್ಯೋಗಿಕ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿಯರಾದ ಡಾ. ವಿನಿತಾ ಆಚಾರ್ಯ ಮತ್ತು ಸದಿಚ್ಚ ಕಾಮತ್ ಕಾರ್ಯಕ್ರಮ ಸಂಯೋಜಿಸಿದರು.