ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಮೈಸೂರು ಜಿಲ್ಲೆ ನಂತರ ಸಿಎಂ ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಭರಪೂರ ಅನುದಾನ ಒದಗಿಸಿದ್ದಾರೆ. ಕೋಲಾರದಲ್ಲಿ ಒಟ್ಟು ೧೦೩.೩೯ ಕೋಟಿ ಅನುದಾನದಲ್ಲಿ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ತಿಳಿಸಿದ್ದಾರೆ.ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಉನ್ನತ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮಹಿಳಾ ಕಾಲೇಜಿನ ನೂತನ ಕಟ್ಟಡಕ್ಕೆ ಶಂಕುಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಮಹಿಳಾ ಕಾಲೇಜು ಅಭಿವೃದ್ಧಿ (ಕೋಲಾರ ನಗರ)ಗೆ ೪೨.೬೭ ಕೋಟಿ ರು. ಅನುದಾನ ಒದಗಿಸಲಾಗಿದೆ. ಇದರಲ್ಲಿ ಮೊದಲ ಹಂತದಲ್ಲಿ ೨೦.೧೭ ಕೋಟಿ, ಎರಡನೇ ಹಂತದಲ್ಲಿ ೨೦ ಕೋಟಿ ಮತ್ತು ಮೂರನೇ ಹಂತದಲ್ಲಿ ಪಿಜಿ ಬ್ಲಾಕ್ ಹಾಗೂ ಸೈನ್ಸ್ ಬ್ಲಾಕ್‌ನ ಮೊದಲ ಮತ್ತು ಎರಡನೇ ಮಹಡಿಗಳ ನಿರ್ಮಾಣಕ್ಕಾಗಿ ೨.೫ ಕೋಟಿ ರು. ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದರು.ಅರಹಳ್ಳಿ ಸರ್ಕಾರಿ ಕಾನೂನು ಕಾಲೇಜು ಆವರಣದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ೬.೮೨ ಕೋಟಿ ರು. ವೆಚ್ಚದ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಗಿದೆ. ಬೆಂಗಳೂರು ಉತ್ತರ ವಿ.ವಿ ವ್ಯಾಪ್ತಿಯ ಮಂಗಸಂದ್ರ ಪಿ.ಜಿ. ಮಹಿಳಾ ವಸತಿ ನಿಲಯಕ್ಕಾಗಿ ೧೨.೫ ಕೋಟಿ, ಪ್ರಧಾನಮಂತ್ರಿ ಯೋಜನೆಯಡಿ ೧೦ ಕೋಟಿ ಮತ್ತು ಮೊದಲನೇ ಮಹಡಿ ಕಟ್ಟಡ ನಿರ್ಮಾಣಕ್ಕೆ ೨.೫ ಕೋಟಿ ವೆಚ್ಚದ ಕಾಮಗಾರಿಗೆ ಇಂದು ಅಡಿಗಲ್ಲು ಹಾಕಲಾಗಿದೆ. ಈ ವಿಶ್ವವಿದ್ಯಾಲಯಕ್ಕೆ ಸುವರ್ಣಗಂಗೆ ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ೨೪ ವಿಧಾನಸಭಾ ಕ್ಷೇತ್ರಗಳಿಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯ ಅಮರಾವತಿ ಬಳಿ ೧೬೦ ಎಕರೆ ವಿಸ್ತೀರ್ಣದಲ್ಲಿ ಉತ್ತಮ ಕ್ಯಾಂಪಸ್ ನಿರ್ಮಾಣವಾಗುತ್ತಿರುವುದು ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ನೆರವಾಗಲಿದೆ ಎಂದರು.ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವ್ಯಾಸಂಗ ಮಾಡಿ ಮುಂದಿನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು, ಸರ್ಕಾರ ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಶನ್ ಸಹಕಾರದೊಂದಿಗೆ ಪ್ರತಿ ವರ್ಷ ಉತ್ತೀರ್ಣರಾಗುವ ವಿದ್ಯಾರ್ಥಿನಿಯರಿಗೆ ೩೦,೦೦೦ ರು. ವಿದ್ಯಾರ್ಥಿವೇತನ ನೀಡಲಾಗುತ್ತದೆ. ರಾಜ್ಯದಲ್ಲಿ ಈಗಾಗಲೇ ೩೭ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಈ ಸೌಲಭ್ಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು. ವಿದೇಶಿ ವ್ಯಾಸಂಗಕ್ಕೆ ಬೆಂಬಲ:
ಪ್ರತಿ ವರ್ಷ ೫ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲು ಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿ, ಅಂತರ ಗಂಗೆಯಿಂದ ಕೋಲಾರಮ್ಮ ಕೆರೆವರೆಗೂ ೧೦೦ ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಕೋಲಾರ ನಗರಕ್ಕೆ ರಿಂಗ್ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎಸ್. ಸುರೇಶ ಮಾತನಾಡಿ, ಸರ್ಕಾರ ಕೋಲಾರ ಜಿಲ್ಲೆಗೆ ಈವರೆಗೆ ಸಾವಿರ ಕೋಟಿ ಅನುದಾನ ನೀಡಿದೆ. ಇದೀಗ ೧೦೦ ಕೋಟಿ ವೆಚ್ಚದಲ್ಲಿ ಅಂತರಗಂಗೆ-ಕೋಲಾರ ನಡುವಿನ ಕಾಲುವೆ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಉನ್ನತ ಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮದಿಂದ ಇದೀಗ ೧೦೩ ಕೋಟಿಗೂ ಅಧಿಕ ಅನುದಾನ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ಕಟ್ಟದ ಕಾಮಗಾರಿಗಳಿಗೆ ದೊರೆತಿರುವುದು ಸಂತಸದ ಸಂಗತಿ ಎಂದು ಹೇಳಿದರು.ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಸಚಿವರನ್ನು ಅಭಿನಂದಿಸಿ, ಇನ್ನೂ ನೂರು ಕೋಟಿಗೂ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಎಲ್ಲಾ ಸರ್ಕಾರಿ ಕಾಲೇಜುಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಬೆಂಗಳೂರು ಉತ್ತರ ವಿವಿ ಕುಲಪತಿ ಡಾ.ನಿರಂಜನ್ ವಾನಳ್ಳಿ, ಕುಲಸಚಿವ ಸಿ.ಎನ್.ಶ್ರೀಧರ್, ಮೌಲ್ಯಮಾಪನ ಕುಲಸಚಿವ ಲೋಕನಾಥ್, ಎಸ್‌ಪಿ ಡಾ.ಬಿ.ನಿಖಿಲ್, ಉನ್ನತ ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕ ರಾಮಕೃಷ್ಣರೆಡ್ಡಿ, ಎಸಿ ಡಾ ಎಚ್.ಪಿ.ಎಸ್. ಮೈತ್ರಿ, ತಹಸೀಲ್ದಾರ್ ಡಾ. ನಯನ, ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ರಾವ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮುನಿಶಾಮಪ್ಪ ಇದ್ದರು.;Resize=(128,128))
;Resize=(128,128))