ಸಾರಾಂಶ
ಕನ್ನಡಪ್ರಭವಾರ್ತೆ ಸಾಗರ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಾಗರ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೧೯೮ ಕೋಟಿ ರು. ಅನುದಾನ ಮಂಜೂರಾಗಿದೆ. ರಾಜ್ಯ ಸರ್ಕಾರದ ಬಳಿ ಹಣವಿಲ್ಲ, ಹಾಗಾಗಿ ಅನುದಾನ ಬರಲ್ಲ ಎಂದು ಟೀಕಿಸುವವರಿಗೆ ಅನುದಾನ ಬಿಡುಗಡೆಯಾಗಿರುವುದು ಉತ್ತರವಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದ್ದ ನಗರೋತ್ಥಾನದ ಕಾಮಗಾರಿ ಯೂ ಸೇರಿದಂತೆ ನಗರ ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗೆ ಅನುದಾನದ ಯಾವುದೇ ಕೊರತೆ ಇಲ್ಲದ ರೀತಿಯಲ್ಲಿ ಉತ್ತಮ ಕಾಮಗಾರಿ ಮಾಡಿಸಲಾಗುವುದು ಎಂದರು.
ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚುವರಿಯಾಗಿ ೨೫ ಕೋಟಿ ರು. ಅನುದಾನ ನೀಡಿದ್ದಾರೆ. ನಗರೋತ್ಥಾನ ಯೋಜನೆಗೆ ಹೆಚ್ಚಿನ ಹಣ ಮಂಜೂರು ಮಾಡಿಸಲಾಗಿದೆ. ತಾಲ್ಲೂಕಿನ ಆಸ್ಪತ್ರೆಗಳಲ್ಲಿನ ಮೂಲಭೂತ ಸೌಲಭ್ಯಕ್ಕಾಗಿ ೧೪೨ ಲಕ್ಷ ರೂ., ಆಸ್ಪತ್ರೆಗಳ ಅಭಿವೃದ್ದಿಗೆ ೪.೧೬ ಕೋಟಿ ರೂ., ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ೨.೫೦ ಕೋಟಿ ರು., ಸಣ್ಣ ನೀರಾವರಿ ವಿಭಾಗಕ್ಕೆ ೧೧.೫೦ ಕೋಟಿ ರು., ಆರ್.ಟಿ.ಓ. ಕಚೇರಿ ಆವರಣದಲ್ಲಿ ಡ್ರೈವಿಂಗ್ ಟ್ರಾಕ್ ನಿರ್ಮಾಣಕ್ಕೆ ೫.೬೫ ಕೋಟಿ ರು.ಸೇರಿದಂತೆ ಬೇರೆಬೇರೆ ವಿಭಾಗದಲ್ಲಿ ಹಣ ಮಂಜೂರಾಗಿದ್ದು ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.ವಿಶ್ವವಿಖ್ಯಾತ ಜೋಗ ಜಲಪಾತವನ್ನು ೧೮೫ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು ಈತನಕ ೨೦ ಕೋಟಿ ರೂ. ಮಾತ್ರ ಮಂಜೂರಾಗಿದೆ. ಬಾಕಿ ಹಣ ಬಿಡುಗಡೆ ಮಾಡುವಂತೆ ಸಚಿವರ ಮೇಲೆ ಒತ್ತಡ ಹೇರಲಾಗಿದೆ. ಶರಾವತಿ ಹಿನ್ನೀರಿನಲ್ಲಿ ಅಗತ್ಯ ಇರುವ ಕಡೆಗಳಲ್ಲಿ ರ್‍ಯಾಂಪ್ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಹಿನ್ನೀರು ಕಡಿಮೆಯಾಗಿ ಸ್ಥಳೀಯ ನಿವಾಸಿಗಳಿಗೆ ಲಾಂಚ್ ಸಂಚಾರಕ್ಕೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದರು.
ಗಣಪತಿ ಕೆರೆ ದಂಡೆಯಲ್ಲಿರುವ ಉದ್ಯಾನವನ್ನು ಇನ್ನಷ್ಟು ಅಭಿವೃದ್ದಿಪಡಿಸಲು ನೀಲನಕ್ಷೆ ತಯಾರಿಸಲಾಗಿದೆ. ಇದರ ಜೊತೆಗೆ ಮಕ್ಕಳ ಉದ್ಯಾನವನವೊಂದನ್ನು ನಿರ್ಮಿಸುವ ಉದ್ದೇಶ ಸಹ ಹೊಂದಲಾಗಿದೆ. ಗಣಪತಿ ದೇವಸ್ಥಾನದ ಎದುರು ಭಾಗದಲ್ಲಿ ನಕ್ಷತ್ರವನ ನಿರ್ಮಾಣ ಮಾಡುವ ಜೊತೆಗೆ ಕೆರೆಕೋಡಿ ಆಂಜನೇಯಸ್ವಾಮಿ ದೇವಸ್ಥಾನದ ಪಕ್ಕ ಸಂಜೆ ವೇಳೆ ವಾಯುವಿಹಾರಿಗಳಿಗೆ ಕುಳಿತುಕೊಳ್ಳಲು ಸ್ಥಳಾವಕಾಶ ಕಲ್ಪಿಸುವ ಚಿಂತನೆ ನಡೆಸಲಾಗಿದೆ ಎಂದರು.ಕಾಂಗ್ರೆಸ್ ಮುಖಂಡರಾದ ಕೆ.ಹೊಳೆಯಪ್ಪ, ಗಣಪತಿ ಮಂಡಗಳಲೆ, ಸುರೇಶಬಾಬು, ಸೋಮಶೇಖರ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ತಾರಾಮೂರ್ತಿ, ಗಿರೀಶ್ ಕೋವಿ, ಜಾಕೀರ್, ಸುಧಾ ಗಂಗಾಧರ್ ಇನ್ನಿತರರು ಹಾಜರಿದ್ದರು.
ರಾಮ ಪ್ರಾಣಪ್ರತಿಷ್ಠೆಯಂದು ದೇಗುಲಗಳಲ್ಲಿ ವಿಶೇಷ ಪೂಜೆಕ್ಷೇತ್ರ ವ್ಯಾಪ್ತಿಯಲ್ಲಿ ದ್ವೇಷದ ರಾಜಕಾರಣ ನಾನು ಮಾಡುತ್ತಿದ್ದೇನೆ ಎಂದು ವಿಪಕ್ಷಗಳು ಸುಳ್ಳುಸುದ್ದಿ ಹರಡುತ್ತಿದೆ. ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಜನರಿಗೆ ಗೊತ್ತಿದೆ. ಇನ್ನು, ಅಯೋಧ್ಯೆಯಲ್ಲಿ ರಾಮನ ಪ್ರಾಣಪ್ರತಿಷ್ಠೆಯಂದು ರಾಜ್ಯ ಸರ್ಕಾರದ ಸೂಚನೆಯಂತೆ ಎಲ್ಲ ದೇವಸ್ಥಾನದಲ್ಲೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ ಶಾಸಕ ಬೇಳೂರು ಗೋಪಾಲ ಕೃಷ್ಣ ಹೇಳಿದರು.