ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ತಾಲೂಕಿನಲ್ಲಿ ಒಟ್ಟು ಒಂಬತ್ತು ಕಾವಲುಗಳಿದ್ದು, ಅವುಗಳಲ್ಲಿ ಅಮೃತ್ ಮಹಲ್ ಕಾವಲನ್ನು ರೈತರ ಹೆಸರಿಗೆ ಮಂಜೂರು ಮಾಡಲು ಸುಪ್ರೀಂಕೋರ್ಟ್ ಅನುಮತಿ ನೀಡಿಲ್ಲ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ನಗರದ ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಈಗಾಗಲೇ ಸ್ಪಷ್ಟ ಆದೇಶ ನೀಡಿದ್ದು, ಯಾವುದೇ ಅಮೃತ್ ಮಹಲ್ ಕಾವಲುಗಳನ್ನು ರೈತರ ಹೆಸರಿಗೆ ಮಂಜೂರು ಮಾಡುವ ಹಕ್ಕು ರಾಜ್ಯ ಸರ್ಕಾರಕ್ಕಾಗಲಿ, ಜನಪ್ರತಿನಿಧಿಗಳಿಗೆ ಆಗಲಿ ಇಲ್ಲ. ರೈತರು ಈ ಕುರಿತು ಕಾನೂನಾತ್ಮಕವಾಗಿ ಮರು ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.
ಈ ಬಾರಿ ಆರಂಭದಲ್ಲಿ ಅಲ್ಪಮಟ್ಟದ ಮಳೆ ಹಾಗೂ ನಂತರ ಹೆಚ್ಚಿನ ಮಳೆಯಾದ ಹಿನ್ನೆಲೆಯಲ್ಲಿ ಫಸಲ್ ಭಿಮಾ ಯೋಜನೆ ಅಡಿ ಎಷ್ಟು ಮಂದಿ ರೈತರಿಗೆ ಬೆಳೆ ಹಾನಿ ಪರಿಹಾರ ದೊರಕಿದೆ ಎಂಬ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳಲ್ಲಿ ಅವರು ವಿಚಾರಿಸಿದರು. ತಕ್ಷಣವೇ ವಿಮೆ ಕಂಪನಿಯ ಅಧಿಕಾರಿಗಳನ್ನು ಕರೆಸಿ ಹಾನಿಗೊಳಗಾದ ಜಮೀನುಗಳಿಗೆ ಭೇಟಿ ನೀಡಿ, ರೈತರಿಗೆ ಪರಿಹಾರ ಮೊತ್ತ ತಲುಪಿಸಲು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.ವಿಮೆ ಕಂಪನಿಗಳು ಕೃಷಿ ಭೂಮಿಯನ್ನು ಮಳೆ ಸಮಯದಲ್ಲೇ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಒಣಗಿದ ನಂತರ ಭೇಟಿ ನೀಡುವುದು ಪ್ರಯೋಜನವಿಲ್ಲ, ಮುಂದಿನ ಎಂಟು ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ನಾಮ ನಿರ್ದೇಶನ ಸದಸ್ಯ ಕುಮಾರಸ್ವಾಮಿ ಅವರು, ಈ ಬಾರಿಯ ರಾಗಿ ಬಿತ್ತನೆ ಸರಿಯಾಗಿಲ್ಲ, ಕೃಷಿ ಇಲಾಖೆಯಿಂದ ಸರಿಯಾದ ಬೀಜ ದೊರಕಲಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು, ಈ ಬಾರಿ ರಾಗಿಯ ಬೀಜವನ್ನು ಇಲಾಖೆಯವರು ಸೂಕ್ಷ್ಮವಾಗಿ ಪರಿಶೀಲಿಸಿ ರೈತರಿಗೆ ವಿತರಿಸಿದ್ದಾರೆ. ಜೊತೆಗೆ ಜೋಳಕ್ಕೆ ರೋಗ ಬಾರದಂತೆ ಹಳ್ಳಿಮಟ್ಟದಲ್ಲಿ ಕ್ಯಾಂಪೇನ್ ನಡೆಸಿ ಔಷಧಿ ಸಿಂಪಡಣೆಗೆ ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.ರೇಷ್ಮೆ ಬೆಳೆ ಲಾಭದಾಯಕವಾಗಿದ್ದು ತಾಲೂಕಿನಲ್ಲಿ ಈಗಾಗಲೇ 67 ಹಳ್ಳಿಗಳಲ್ಲಿ ರೇಷ್ಮೆ ಬೆಳೆ ಬೆಳೆದಿದ್ದಾರೆ. ಇದನ್ನು ಇನ್ನಷ್ಟು ಹಳ್ಳಿಗಳಿಗೆ ವಿಸ್ತರಿಸಲು ಜಾಗೃತಿ ಸಭೆ ಹಾಗೂ ಆಂದೋಲನ ನಡೆಸೋಣ. ಸರ್ಕಾರವು ರೇಷ್ಮೆ ಕಡ್ಡಿ ಬೆಳೆಗೆ ಪ್ರತಿ ಎಕರೆಗೆ ₹80,000 ಸಬ್ಸಿಡಿ ನೀಡುತ್ತಿದೆ ಎಂದು ಶಾಸಕರು ವಿವರಿಸಿದರು.
ರೈತರ ಬಹುಪಾಲು ಆದಾಯ ಹೈನುಗಾರಿಕೆಯಿಂದ ಬರುತ್ತಿದೆ. ಆದರೆ ಪಶುಪಾಲನಾ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪಶುವೈದ್ಯಾಧಿಕಾರಿಗಳು ಖಾಸಗಿ ಮೆಡಿಕಲ್ ಸ್ಟೋರ್‌ಗಳಿಗೆ ಮಾತ್ರೆಗಳನ್ನು ಬರೆದುಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಪಶು ವೈದ್ಯಾಧಿಕಾರಿ ಶಶಿಕಾಂತ್ ಅವರು, ತಾಲೂಕಿನಲ್ಲಿ ಒಟ್ಟು 35 ಪಶುವೈದ್ಯಕೀಯ ಆಸ್ಪತ್ರೆಗಳು ಇವೆ. ವರ್ಷಕ್ಕೆ 10–15 ಲಕ್ಷ ಔಷಧಿ ಬರುತ್ತದೆ. ಆದರೆ ಅಗತ್ಯವು ಕೋಟಿಗಿಂತ ಹೆಚ್ಚಾಗಿದೆ. ಎರಡು ಪಶು ಆ್ಯಂಬುಲೆನ್ಸ್‌ಗಳಲ್ಲಿ ವೈದ್ಯರು, ಡ್ರೈವರ್ ಹಾಗೂ ಅಸಿಸ್ಟೆಂಟ್ ಸಿದ್ಧರಾಗಿದ್ದಾರೆ ಎಂದು ವಿವರಿಸಿದರು.
ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಅವರು, ರೈತರು ಕೃಷಿ ಹೊಂಡ ತೆಗೆಸಿ ಮೀನು ಸಾಕಾಣಿಕೆ ಆರಂಭಿಸಲು ಸರ್ಕಾರದಿಂದ 64ರಿಂದ 84 ಸಾವಿರದ ವರೆಗೆ ಸಬ್ಸಿಡಿ ಪಡೆಯಬಹುದು. ರೈತರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪರಶಿವಮೂರ್ತಿ ಮಾತನಾಡಿ, ನಗರದಲ್ಲಿ ಆರಂಭಗೊಂಡಿರುದ ಹೊಸ ಐಟಿಐ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸೂಕ್ತ ಹಾಸ್ಟೆಲ್ ವ್ಯವಸ್ಥೆ ಅಗತ್ಯ ಎಂದು ಮನವಿ ಮಾಡಿದರು. ಶಾಸಕರು ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಶಿಕ್ಷಕರ ಭವನದ ಎದುರಿನ ಪ್ರದೇಶದಲ್ಲಿ ಮಳೆಯಾದಾಗ ನೀರು ನಿಂತು ಹಾಸ್ಟೆಲ್ ಮಕ್ಕಳಿಗೆ ಸಮಸ್ಯೆ ಕುರಿತು ಅಧಿಕಾರಿಗಳ ಗಮನ ಸೆಳೆಯಲಾಯಿತು. ತಕ್ಷಣ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.ತೋಟಗಾರಿಕಾ ಇಲಾಖೆಯ ಕುರಿತು ಮಾತನಾಡಿದ ಶಾಸಕರು, ತೆಂಗಿನ ಬೆಳೆಗೆ ರೋಗಗಳು ಹೆಚ್ಚಾಗಿವೆ. ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಸಹಾಯಕ ನಿರ್ದೇಶಕಿ ಸೀಮಾ ಪ್ರತಿಕ್ರಿಯಿಸಿ, ಕಪ್ಪು ತಲೆ ಹುಳು ರೋಗ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹೆಚ್ಚಾಗಿ ಕಂಡು ಬರುವ ಕಾಂಡ ರೋಗವನ್ನು ನಿಯಂತ್ರಿಸಲು ಎಕ್ಸಾಕನಾಜೋನ್ ಔಷಧಿ ರೈತರಿಗೆ ನೀಡಲಾಗುತ್ತಿದೆ ಎಂದು ವಿವರಿಸಿದರು.
ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಒಟ್ಟು 131 ಮನೆಗಳು ಮಳೆಯ ರೌದ್ರತೆಗೆ ಬಿದ್ದಿವೆ. ಹಾನಿಗೊಳಗಾದ ಮನೆಗಳಿಗೆ ಈಗಾಗಲೇ ಪರಹಾರದ ಹಣವನ್ನು ಕೊಡಲು ಪ್ರಾರಂಭಿಸಲಾಗಿದೆ, ಹಾನಿಗೊಳಗಾದ ಕೆರೆ, ರಸ್ತೆಗಳು ಹಾಗೂ ಆಸ್ಪತ್ರೆಗಳ ವೆಚ್ಚದ ಅಂದಾಜಿಗಾಗಿ ಕಳುಹಿಸಲಾಗಿದೆ. ಜಾವಗಲ್ ಸರ್ಕಾರಿ ಆಸ್ಪತ್ರೆಯ ಸೋರಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಬೇಲೂರು ಶಾಸಕ ಎಚ್.ಕೆ. ಸುರೇಶ್ ಮಾತನಾಡಿ, ಜಾವಗಲ್ ಹೋಬಳಿಯ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣವಾದರೂ ಉಪಯೋಗಕ್ಕೆ ಬರದಿರುವುದು ದುಃಖಕರ. ಕೃಷಿ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಭೆಯಲ್ಲಿ ವಿವಿಧ ಇಲಾಖೆಯ ಸಹಾಯಕ ನಿರ್ದೇಶಕರು, ಗ್ಯಾರಂಟಿ ಅಧ್ಯಕ್ಷ ಧರ್ಮಶೇಕರ್, ಇಒ ಗಂಗಣ್ಣ, ಡಿವೈಎಸ್ಪಿ ಗೋಪಿ, ನಾಮ ನಿರ್ದೇಶಿತ ಸದಸ್ಯರು ಕುಮಾರಸ್ವಾಮಿ, ರಂಗಪ್ಪ, ಗೌಸ್ ಅಹಮದ್ ಮತ್ತು ಇತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))