ಉಡುಪಿ ಧರ್ಮಾಧ್ಯಕ್ಷರ ಅಮೃತ-ರಜತ ಸಂಭ್ರಮಾಚರಣೆ

| Published : Feb 10 2025, 01:48 AM IST

ಸಾರಾಂಶ

ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ 75ನೇ ಹುಟ್ಟುಹಬ್ಬ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25ನೇ ವರ್ಷಾಚರಣೆ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಅದ್ಧೂರಿಯಾಗಿ ಜರುಗಿತು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ 75ನೇ ಹುಟ್ಟುಹಬ್ಬ ಹಾಗೂ ಧರ್ಮಾಧ್ಯಕ್ಷ ದೀಕ್ಷೆಯ 25ನೇ ವರ್ಷಾಚರಣೆ ಭಾನುವಾರ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಅದ್ಧೂರಿಯಾಗಿ ಜರುಗಿತು.

ಆರಂಭದಲ್ಲಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಎಲ್ಲಾ ಧರ್ಮಾಧ್ಯಕ್ಷರು, ಧರ್ಮಗುರುಗಳು ಹಾಗೂ ಭಕ್ತಾದಿಗಳೊಂದಿಗೆ ಕೃತಜ್ಞಾತಾ ಬಲಿಪೂಜೆ ನೆರವೇರಿಸಿದರು.

ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ಭಾರತ - ನೇಪಾಳದ ರಾಯಭಾರಿ ವಂ.ಡಾ.ಲಿಯೊಪೊಲ್ಡೊ ಗಿರೆಲ್ಲಿ ತಮ್ಮ ಆಶೀರ್ವಚನ ಸಂದೇಶದಲ್ಲಿ ಬಿಷಪ್ ಜೆರಾಲ್ಡ್ ಅವರ ಜೀವನ ಇಡೀ ಸಮಾಜಕ್ಕೆ ಒಂದು ಮಾದರಿಯಾಗಿದ್ದು, ಅವರ ಸೇವಾ ಮನೋಭಾವದ ಕಾರ್ಯವೈಖರಿಯಿಂದಾಗಿ ಧರ್ಮಪ್ರಾಂತ್ಯದಲ್ಲಿ ಪಾಲನಾ ಯೋಜನೆ ಜಾರಿಗೆಗೊಳಿಸಿರುವುದು ದೇಶದ ಇತರ ಧರ್ಮಪ್ರಾಂತ್ಯಗಳಿಗೂ ಮಾದರಿಯಾಗಿದೆ. ಇವರ ಸೇವೆ ಇನ್ನಷ್ಟು ಮುಂದುವರಿಯಲಿ ಎಂದರು. ಕನ್ನಡದಲ್ಲಿ ‘ನಮಸ್ತೆ’ ಎಂದು ಹೇಳುವ ಮೂಲಕ ತಮ್ಮ ಮಾತನ್ನು ಆರಂಭಿಸಿದ ಗಿರೆಲ್ಲಿ ಅವರು ಕೊಂಕಣಿಯಲ್ಲಿ ದೇವ್ ಬೊರೆಂ ಕರುಂ ಎನ್ನುವ ಮೂಲಕ ಕೊನೆಗೊಳಿಸಿದರು.

ಶಿವಮೊಗ್ಗ ಧರ್ಮಾಧ್ಯಕ್ಷ ವಂ.ಡಾ.ಪ್ರಾನ್ಸಿಸ್ ಸೆರಾವೊ ತಮ್ಮ ಪ್ರವಚನ ನೀಡಿದರು. ಬೆಂಗಳೂರು ಮಹಾಧರ್ಮಕ್ಷೇತ್ರದ ಆರ್ಚ್ ಬಿಷಪ್ ವಂ.ಡಾ. ಪೀಟರ್ ಮಚಾದೊ ಅಭಿನಂದನಾ ಸಂದೇಶ ನೀಡಿದರು. ಧರ್ಮಪ್ರಾಂತ್ಯದ ಎಲ್ಲಾ ಆಯೋಗಗಳ ವತಿಯಿಂದ ಧರ್ಮಾಧ್ಯಕ್ಷ ವಂ.ಡಾ. ಜೆರಾಲ್ಡ್ ಲೋಬೊ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ, ತಮ್ಮ ಜೀವನದಲ್ಲಿ ಸಹಕಾರ ನೀಡಿದ ಸರ್ವರಿಗೂ ಧನ್ಯವಾದವಿತ್ತರು.

ಬೆಂಗಳೂರಿನ ನಿವೃತ್ತ ಮಹಾ ಧರ್ಮಾಧ್ಯಕ್ಷ ಬರ್ನಾಡ್ ಮೊರಾಸ್, ಆಗ್ರಾ ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಆಲ್ಬರ್ಟ್ ಡಿಸೋಜಾ, ಭದ್ರಾವತಿ ಬಿಷಪ್ ಜೊಸೇಫ್ ಅರುಮಚಾಡತ್, ಬೆಳಗಾವಿ ಧರ್ಮಾಧ್ಯಕ್ಷ ಡೆರಿಕ್ ಫೆರ್ನಾಂಡಿಸ್, ಬಳ್ಳಾರಿ ಬಿಷಪ್ ಹೆನ್ರಿ ಡಿಸೋಜಾ, ಬೆಳ್ತಂಗಡಿ ಬಿಷಪ್ ಲೊರೆನ್ಸ್ ಮುಕ್ಕುಝಿ, ಚಿಕ್ಕಮಗಳೂರು ಬಿಷಪ್ ತೋಮಸಪ್ಪ ಅಂತೋನಿ ಸ್ವಾಮಿ, ಗುಲ್ಬರ್ಗಾ ಬಿಷಪ್ ರೊಬರ್ಟ್ ಎಮ್ ಮಿರಾಂದಾ, ಕಾರವಾರ ಬಿಷಪ್ ದುಮಿಂಗ್ ಡಯಾಸ್, ಮಂಗಳೂರಿನ ನಿವೃತ್ತ ಬಿಷಪ್ ಅಲೋಶಿಯಸ್ ಪಾವ್ಲ್ ಡಿಸೋಜಾ, ಪುತ್ತೂರು ಬಿಷಪ್ ಗೀವರ್ಗಿಸ್ ಮಾರ್ ಮಕಾರಿಯೋಸ್ ಕಲಾಯಿಲ್, ಶಿವಮೊಗ್ಗ ಬಿಷಪ್ ಪ್ರಾನ್ಸಿಸ್ ಸೆರಾವೊ, ಲಕ್ನೊ ಬಿಷಪ್ ಜೆರಾಲ್ಡ್ ಜೋನ್ ಮಥಾಯಸ್, ಬರಾಯಿಪುರ್ ನಿವೃತ್ತ ಬಿಷಪ್ ಸಾಲ್ವದೊರ್ ಲೋಬೊ, ಅಲಹಾಬಾದ್ ಬಿಷಪ್ ಲೂಯಿಸ್ ಮಸ್ಕರೇನ್ಹಸ್, ಬೆಂಗಳೂರಿನ ಸಹಾಯಕ ಧರ್ಮಾಧ್ಯಕ್ಷ ಜೊಸೇಫ್ ಸುಶಿನಾಥನ್, ಮೈಸೂರು ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಆಲ್ಫ್ರೇಡ್ ಮೆಂಡೊನ್ಸಾ, ಮಂಗಳೂರಿನ ಶ್ರೇಷ್ಠಗುರು ಮೊನ್ಸಿಂಜ್ಞೊರ್ ಮ್ಯಾಕ್ಷಿಮ್ ನೊರೊನ್ಹಾ, ಕುಲಪತಿಗಳಾದ ರೋಶನ್ ಡಿಸೋಜಾ, ಜೊರ್ಜ್ ವಿಕ್ಟರ್ ಡಿಸೋಜಾ, ಉಡುಪಿ ಧರ್ಮ ಪ್ರಾಂತ್ಯದ ಸಲಹೆಗಾರರಾದ ಚಾರ್ಲ್ಸ್ ಮಿನೇಜಸ್, ಆಲ್ಬನ್ ಡಿಸೋಜಾ, ರೆಜಿನಾಲ್ಡ್ ಪಿಂಟೊ, ಜೋರ್ಜ್ ಡಿಸೋಜಾ, ಲೆಸ್ಲಿ ಡಿಸೋಜಾ, ಅನಿಲ್ ಡಿಸೋಜಾ, ಪಾವ್ಲ್ ರೇಗೊ, ಡೆನಿಸ್ ಡೆಸಾ ಇದ್ದರು.

ಕಾರ್ಯಕ್ರಮದ ಸಂಚಾಲಕರು ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮೊನ್ಸಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಧರ್ಮಪ್ರಾಂತ್ಯದ ಪಾಲನಾ ಮಂಡಳಿಯ ಕಾರ್ಯದರ್ಶಿ ಲೆಸ್ಲಿ ಅರೋಝಾ ವಂದಿಸಿದರು. ಧರ್ಮಪ್ರಾಂತ್ಯದ ಹಣಕಾಸು ಸಮಿತಿ ಸದಸ್ಯ ಪ್ರಿತೇಶ್ ಡೆಸಾ ಹಾಗೂ ಜೆನಿಶಾ ಕೆಮ್ಮಣ್ಣು ನಿರೂಪಿಸಿದರು