ಭಟ್ರಕೇರಿಯ ಭಾರದ್ವಾಜ ಆಶ್ರಮದಲ್ಲಿ ಅಮೃತಾಭಿಷೇಕ

| Published : Mar 15 2025, 01:04 AM IST

ಸಾರಾಂಶ

ಭಾರದ್ವಾಜೇಶ್ವರನಿಗೆ ಗಂಗಾ ಜಲದಿಂದ ಶತರುದ್ರಾಭಿಷೇಕ ನೆರವೇರಿಸಲಾಯಿತು.

ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸಮೀಪದ ಭಟ್ರಕೇರಿಯ ಭಾರದ್ವಾಜ ಆಶ್ರಮದಲ್ಲಿ ಆರ್ಷವಿದ್ಯಾ ಟ್ರಸ್ಟ್ ಹಾಗೂ ಆಯುಷ್ಮಾನ್ ಭವ ವಿಜಯೀಭವ ಬಳಗದಿಂದ ಅಮೃತಾಭಿಷೇಕ ಎಂಬ ವಿಶಿಷ್ಟ ಕಾರ್ಯಕ್ರಮ ನಡೆಯಿತು.

ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ ಭಾಗವಹಿಸಿ, ಪುಣ್ಯಸ್ನಾನ ಮಾಡಿದ ಹಲವರು ಗಂಗಾಜಲದೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರದ್ವಾಜೇಶ್ವರನಿಗೆ ಗಂಗಾ ಜಲದಿಂದ ಶತರುದ್ರಾಭಿಷೇಕ ನೆರವೇರಿಸಲಾಯಿತು. ಕುಂಭ ಮೇಳದಲ್ಲಿ ಭಾಗವಹಿಸಿದವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಡಾ.ಮಹೇಶ ಭಟ್ಟ ಇಡಗುಂದಿ ರಚಿಸಿದ "ಸಪ್ತರ್ಷ್ಯಾಷ್ಟಕ "ವನ್ನು ಬಿಡುಗಡೆಗೊಳಿಸಲಾಯಿತು. ಅಷ್ಟಕ ರಚನೆಯಲ್ಲಿನ ಆಶಯವನ್ನು ಮಹೇಶ ಭಟ್ಟ ವಿವರಿಸಿದರು.

ಭಾರದ್ವಾಜಾಶ್ರಮದ ವಿವಿಧ ಪ್ರಕಲ್ಪಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಆಯುಷ್ಮಾನ್ ಭವ ವಿಜಯೀಭವ ಬಳಗದ ಮುಖ್ಯಸ್ಥ ಮಂಜುನಾಥ ಭಟ್ಟ, ಭಾರದ್ವಾಜ ಆಶ್ರಮವನ್ನು ಸನಾತನ ಧಾರ್ಮಿಕ ಕೇಂದ್ರವನ್ನಾಗಿ ರೂಪಿಸುವುದು ಬಳಗದ ಉದ್ದೇಶ. ಗುರುಕುಲ, ಗೋಶಾಲೆ, ಯಾಗಶಾಲೆ, ಯೋಗಕೇಂದ್ರ, ಕಲ್ಯಾಣಿ, ನಕ್ಷತ್ರ ವನ, ರಾಶಿವನ, ನವಗ್ರಹವನಗಳನ್ನು ನಿರ್ಮಿಸುವ ಯೋಜನೆ ಹೊಂದಿದ್ದೇವೆ. ಈ ಸ್ಥಳವನ್ನು ವಿದ್ಯಾಕೇಂದ್ರ, ಶೃದ್ಧಾಕೇಂದ್ರ, ಯೋಗ ಕೇಂದ್ರವಾಗಿ ರೂಪಿಸಲಿದ್ದೇವೆ. ಹಿಂದೆ ಋಷಿಮುನಿಗಳು ಆಶ್ರಮದಲ್ಲಿ ರೂಪಿಸಿದ ಸನಾತನ ಧಾರ್ಮಿಕ ವಾತಾವರಣ ನಿರ್ಮಾಣ ನಮ್ಮ ಸಂಕಲ್ಪ. ಗಂಗಾಜಲದಿಂದ ಶತರುದ್ರಾಭಿಷೇಕದ ಮೂಲಕ ಶುಭಾರಂಭಗೊಂಡಿದೆ ಎಂದರು.

ನಂತರ ವೀರಮಾರುತಿ ತಾಳಮದ್ದಲೆ ಕೂಟ ಮಾಗೋಡ ಇವರಿಂದ "ಗಂಗಾವತರಣ " ತಾಳಮದ್ದಲೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ದಿನೇಶ ಭಟ್ಟ ಯಲ್ಲಾಪುರ, ಮಹಾಬಲೇಶ್ವರ ಭಟ್ಟ ಬೆಳಶೇರ, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ ಭಾಗವಹಿಸಿದ್ದರು.

ಡಾ.ಮಹೇಶ ಭಟ್ಟ ಇಡಗುಂದಿ (ಭಗೀರಥ), ನರಸಿಂಹ ಭಟ್ಟ ಕುಂಕಿಮನೆ (ಕಾಲಜಂಘ), ಶ್ರೀಧರ ಅಣಲಗಾರ (ಗಂಗೆ), ಡಾ.ಶಿವರಾಮ ಭಾಗ್ವತ ಮಣ್ಕುಳಿ (ಈಶ್ವರ), ನಾರಾಯಣ ಭಟ್ಟ ಮೊಟ್ಟೆಪಾಲ (ಜಹ್ನು ಮಹರ್ಷಿ) ಪಾತ್ರ ನಿರ್ವಹಿಸಿದರು.

ಭಟ್ರಕೇರಿಯ ಭಾರದ್ವಾಜ ಆಶ್ರಮದಲ್ಲಿ ಅಮೃತಾಭಿಷೇಕ ಕಾರ್ಯಕ್ರಮ ನಡೆಯಿತು.