ಗದಗ ಸೇರಿ ಐದು ರೈಲು ನಿಲ್ದಾಣಗಳಿಗೆ ಅಮೃತ ಸ್ಪರ್ಶ

| Published : May 21 2025, 02:37 AM IST

ಗದಗ ಸೇರಿ ಐದು ರೈಲು ನಿಲ್ದಾಣಗಳಿಗೆ ಅಮೃತ ಸ್ಪರ್ಶ
Share this Article
  • FB
  • TW
  • Linkdin
  • Email

ಸಾರಾಂಶ

ಅಮೃತ ಭಾರತ ರೈಲ್ವೆ ಸ್ಟೇಶನ್ ಯೋಜನೆಯಡಿ ಯೋಜನೆಯ ಮೊದಲ ಹಂತದ, ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿನ 5 ನಿಲ್ದಾಣಗಳು ಮೇ 22ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಯಾಣಿಕರ ಬಹು ವರ್ಷದ ಕನಸು ನನಸಾದಂತಾಗಿದೆ.

ಶಿವಕುಮಾರ ಕುಷ್ಟಗಿ

ಗದಗ:ಅಮೃತ ಭಾರತ ರೈಲ್ವೆ ಸ್ಟೇಶನ್ ಯೋಜನೆಯಡಿ ಯೋಜನೆಯ ಮೊದಲ ಹಂತದ, ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿನ 5 ನಿಲ್ದಾಣಗಳು ಮೇ 22ರಂದು ಲೋಕಾರ್ಪಣೆಗೊಳ್ಳಲಿದ್ದು, ಪ್ರಯಾಣಿಕರ ಬಹು ವರ್ಷದ ಕನಸು ನನಸಾದಂತಾಗಿದೆ.

ಗದಗ, ಮುನಿರಾಬಾದ್, ಧಾರವಾಡ, ಗೋಕಾಕ, ಬಾಗಲಕೋಟೆ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಿದ್ದು ಪ್ರಯಾಣಿಕರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಕಡಿಮೆ ಇಲ್ಲದಂತೆ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಎಸ್ಕಿಲೇಟರ್, ಲಿಫ್ಟ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಒಳಗೊಂಡಿದೆ.ಗದಗ ನಿಲ್ದಾಣ: ಗದಗ ರೈಲು ನಿಲ್ದಾಣದ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ನೆಲಮಹಡಿ ಹಾಗೂ ಮೊದಲ ಮಹಡಿ ನಿರ್ಮಿಸಲಾಗಿದೆ. ಪ್ಲಾಟ್‌ಫಾರ್ಮ್ 1, 2 ಮತ್ತು 3ರಲ್ಲಿ ಹೊಸ ಚಾವಣಿ ಅಳವಡಿಸಲಾಗಿದೆ. ಅದರ ಮೇಲೆ ಸೋಲಾರ್ ಅಳವಡಿಕೆ ಮಾಡಲಾಗಿದ್ದು, 150 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ. ನಿಲ್ದಾಣ ಎಲ್ಲ ಚಾವಣಿಯಲ್ಲಿ ಸಂಗ್ರಹವಾಗುವ ಮಳೆ ನೀರು ಸಂಗ್ರಹಿಸಲು ಅತ್ಯಾಧುನಿಕ ಸೌಲಭ್ಯ ಹೊಂದಿರುವ ಮಳೆ ಕೊಯ್ಲು ಯೋಜನೆ ಅಳವಡಿಸಲಾಗಿದೆ. ಒಂದು ಪ್ಲಾಟ್‌ಫಾರ್ಮ್‌ನಿಂದ ಇನ್ನೊಂದು ಪ್ಲಾಟ್‌ಫಾರ್ಮ್‌ ಸಂಪರ್ಕ ಕಲ್ಪಿಸಲು 12 ಮೀಟರ್ ಅಗಲದ ಮೇಲ್ಸೇತುವೆ ನಿರ್ಮಿಸಲಾಗಿದೆ. 12 ಮೀಟರ್ ಎಫ್‌ಒಬಿಯನ್ನು ಸಂಪರ್ಕಿಸುವ ಪ್ಲಾಟ್‌ಫಾರ್ಮ್ 1 ಮತ್ತು 2, 3ರಲ್ಲಿ 2 ಲಿಫ್ಟ್‌ಗಳು ಹಾಗೂ ಪ್ಲಾಟ್‌ಫಾರ್ಮ್ 1ರಲ್ಲಿ 2 ಎಸ್ಕಲೇಟರ್‌ಗಳನ್ನು ಒದಗಿಸಲಾಗಿದೆ. ಇದರೊಟ್ಟಿಗೆ 3500 ಚದರ ಅಡಿ ಜಾಗದಲ್ಲಿ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗಿದೆ. ಎಫ್‌ಒಬಿ, ಪ್ಲಾಟ್‌ಫಾರ್ಮ್ ಸಂಖ್ಯೆಗಳು, ಟಿಕೆಟ್ ಕೌಂಟರ್, ಕಾಯುವ ಹಾಲ್, ಬಸ್ ಬೇ, ಆಟೋ ಬೇ, ಎಸಿ ಕಾಯುವ ಕೊಠಡಿ, ರೆಸ್ಟೋರೆಂಟ್, ಸ್ಟೇಷನ್ ಮ್ಯಾನೇಜರ್ ಕೊಠಡಿ, ಆರ್‌ಪಿಎಫ್ ಕೊಠಡಿ, ಜಿಆರ್‌ಪಿ ಕಚೇರಿ ಮತ್ತು ನಿರ್ಗಮನವನ್ನು ಸೂಚಿಸುವ ನಾಮಫಲಕಗಳು, ಕೋಚ್ ಮಾರ್ಗದರ್ಶನ ಪ್ರದರ್ಶನ ಫಲಕಗಳು, ಏಕ ಸಾಲಿನ ಪ್ರದರ್ಶನ ಫಲಕಗಳು, ವೆಸ್ಟರ್ನ್ ಟಾಯ್ಲೆಟ್‌, ರ್ಯಾಂಪ್‌, ಮಾರ್ಗದರ್ಶಿ, ದಿವ್ಯಾಂಗರಿಗೆ ವಿಶೇಷ ಸೌಲಭ್ಯಗಳ‌ನ್ನು ಕಲ್ಪಿಸಲಾಗಿದೆ. ರೈಲು ನಿಲ್ದಾಣ ಬೋರ್ಡಗಳನ್ನೇ ಕೇಸರಿ, ಬಿಳಿ, ಹಸಿರು ಬಣ್ಣದಿಂದ ನಿರ್ಮಿಸಿ ರಾಷ್ಟ್ರಧ್ವಜವನ್ನು ಪ್ರತಿಬಿಂಬಿಸುವಂತೆ ಮಾಡಿದ್ದು ಆಕರ್ಷಕವಾಗಿದೆ.ಮುನಿರಾಬಾದ್ ನಿಲ್ದಾಣ:ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ ಅತ್ಯಂತ ಹಳೆಯ ನಿಲ್ದಾಣವನ್ನು ಸಂಪೂರ್ಣ ನೆಲಸಮಗೊಳಿಸಿ ನೆಲಮಹಡಿ ಮತ್ತು ಮೊದಲ ಅಂತಸ್ತು ಅತ್ಯಂತ ಆಕರ್ಷಕವಾಗಿ ನಿರ್ಮಿಸಲಾಗಿದೆ. ಪ್ಲಾಟ್‌ಫಾರ್ಮ್ 1 ಮತ್ತು 2ರಲ್ಲಿ ಹೊಸ ಪ್ಲಾಟ್‌ಫಾರ್ಮ್ ಚಾವಣಿ ಹಾಗೂ ನೆಲಹಾಸು ನಿರ್ಮಿಸಲಾಗಿದೆ. ಪ್ಲಾಟ್‌ಫಾರ್ಮ್ 1 ಮತ್ತು 2 ಅನ್ನು ಸಂಪರ್ಕಿಸುವ 12 ಮೀಟರ್ ಅಗಲದ ಮೇಲ್ಸೇತುವೆಯ ಕಾಲುದಾರಿ, 12 ಮೀ ಎಫ್‌ಒಬಿಯನ್ನು ಸಂಪರ್ಕಿಸುವ ಪ್ಲಾಟ್‌ಫಾರ್ಮ್ 1 ಮತ್ತು ಪ್ಲಾಟ್‌ಫಾರ್ಮ್ 2ರಲ್ಲಿ 2 ಲಿಫ್ಟ್‌ಗಳನ್ನು ಒದಗಿಸಲಾಗಿದೆ. ಟಿಕೆಟ್ ಕೌಂಟರ್, ಕಾಯುವ ಹಾಲ್, ಎಸಿ ಕಾಯುವ ಹಾಲ್, ರೆಸ್ಟೋರೆಂಟ್, ನಿರ್ಗಮನವನ್ನು ಸೂಚಿಸುವ ಅತ್ಯಾಧುನಿಕ ನಾಮಫಲಕಗಳು, ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವ ವಿಶೇಷ ವಿನ್ಯಾಸದ ಫಲಕಗಳನ್ನು ಅಳವಡಿಸಲಾಗಿದೆ.

ಗೋಕಾಕ ರಸ್ತೆ:ಗೋಕಾಕ ರಸ್ತೆಯಲ್ಲಿಯೂ ಜಿ+1 ಮಾದರಿಯಲ್ಲಿ ನೂತನ ನಿಲ್ದಾಣ ನಿರ್ಮಿಸಲಾಗಿದೆ. ಹೊಸ ಪ್ಲಾಟ್‌ಫಾರ್ಮ್‌ಗಳ ನಿರ್ಮಾಣ, ಪ್ಲಾಟ್‌ಫಾರ್ಮ್‌ಗೆ ಸಂಪರ್ಕಿಸುವ 12 ಮೀಟರ್ ಅಗಲದ ಕಾಲುದಾರಿ, 2 ಲಿಫ್ಟ್‌ಗಳನ್ನು ಒದಗಿಸಲಾಗಿದೆ. ಕೋಚ್ ಮಾರ್ಗದರ್ಶನ ಪ್ರದರ್ಶನ ಫಲಕಗಳು, ಏಕ ಹಾಗೂ ಬಹು ಸಾಲಿನ ಪ್ರದರ್ಶನ ಫಲಕ, ಪ್ರಯಾಣಿಕರ ಅನೌನ್ಸ್‌ಮೆಂಟ್ ವ್ಯವಸ್ಥೆಯಂತಹ ಪ್ರಯಾಣಿಕರ ಮಾಹಿತಿ ಫಲಕ, ಪ್ರಯಾಣಿಕರ ಮಾಹಿತಿಗಾಗಿ ನಿಲ್ದಾಣದ ಒಳಗೆ ಪ್ರವಾಸಿ ನಕ್ಷೆ, ಅತ್ಯಾಧುನಿಕ ಟಿಕೆಟ್ ಕೌಂಟರ್, ವೇಟಿಂಗ್ ಹಾಲ್, ರೆಸ್ಟೋರೆಂಟ್, ರ್ಯಾಂಪ್‌, ಪಾರ್ಕಿಂಗ್, ಆಟೋ ಬೇ, ಕುಡಿಯುವ ನೀರು, ದಿವ್ಯಾಂಗರಿಗೆ ಶೌಚಾಲಯ, ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳ ಅನುಕೂಲಕ್ಕಾಗಿ ಪ್ರವೇಶದ್ವಾರದಲ್ಲಿ ರ್ಯಾಂಪ್‌ ಮತ್ತು ಎಫ್‌ಒಬಿ ರ್ಯಾಂಪ್‌ ನಿರ್ಮಿಸಲಾಗಿದೆ. ಮುಖ್ಯ ಕಟ್ಟಡಕ್ಕೆ ಬಹು ಥೀಮ್ ಲೈಟ್‌ಗಳನ್ನು ಅಳವಡಿಸಲಾಗಿದ್ದು, ಅತ್ಯಂತ ಆಕರ್ಷಕವಾಗಿದೆ.

ಧಾರವಾಡ:ವಿದ್ಯಾಕಾಶಿ ಧಾರವಾಡ ರೈಲು ನಿಲ್ದಾಣಕ್ಕೂ ಅತ್ಯಾಧುನಿಕ ಟಚ್ ನೀಡಲಾಗಿದ್ದು, ಪ್ರಯಾಣಿಕರಿಗೆ ಹೊಸ ಎರಡನೇ ಪ್ರವೇಶ ಕಲ್ಪಿಸಲಾಗಿದೆ. ಪ್ಲಾಟ್‌ಫಾರ್ಮ್ 1, 2/3 ಮತ್ತು 4 ಅನ್ನು ಸಂಪರ್ಕಿಸುವ 12 ಮೀ ಅಗಲದ ಕಾಲುದಾರಿ ನಿರ್ಮಿಸಲಾಗಿದೆ. 12 ಮೀಟರ್ ಎಫ್‌ಒಬಿಯನ್ನು ಸಂಪರ್ಕಿಸುವ ಪ್ಲಾಟ್‌ಫಾರ್ಮ್ 1, 2/3 ಮತ್ತು 4ರಲ್ಲಿ 3 ಲಿಫ್ಟ್‌ಗಳನ್ನು ಕಲ್ಪಿಸಿದ್ದು, ಪ್ಲಾಟ್‌ಫಾರ್ಮ್ 1ರಲ್ಲಿ 2 ಎಸ್ಕಲೇಟರ್‌ಗಳನ್ನು ಅಳವಡಿಸಲಾಗಿದೆ. ನಿಲ್ದಾಣದ ಸೌಂದರ್ಯ ಹೆಚ್ಚಿಸಲು ಮುಂಭಾಗದಲ್ಲಿ ವಿಶೇಷ ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ನೂತನ ವೇಟಿಂಗ್ ಹಾಲ್‌ನಲ್ಲಿ ಪುರುಷರಿಗೆ, ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮತ್ತು ಎಸಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ದಿವ್ಯಾಂಗರು ಮತ್ತು ಸಾಮಾನ್ಯ ಪ್ರಯಾಣಿಕರಿಗಾಗಿ ಆಧುನಿಕ ಶೌಚಾಲಯಗಳು ನಿರ್ಮಾಣವಾಗಿದ್ದು, ಮುಖ್ಯವಾಗಿ ನಿಲ್ದಾಣಕ್ಕೆ ಬರುವ ಜನರಿಗಾಗಿ ಪಾರ್ಕಿಂಗ್ ವ್ಯವಸ್ಥೆಗೆ ವಿಶೇಷ ಪ್ರಾಧಾನ್ಯ ನೀಡಲಾಗಿದೆ. ಬಾಗಲಕೋಟೆ: ಬಾಗಲಕೋಟೆ ನಿಲ್ದಾಣವನ್ನು ಜಿ+1 ಮಾದರಿಯಲ್ಲಿ ಹೊಸದಾಗಿ ನಿರ್ಮಿಸಲಾಗಿದೆ. ಪ್ಲಾಟ್‌ಫಾರ್ಮ್ 1, 2 ಮತ್ತು 3 ಅನ್ನು ಸಂಪರ್ಕಿಸುವ 12 ಮೀಟರ್ ಅಗಲದ ದಾರಿ ನಿರ್ಮಿಸಿದ್ದು, 12 ಮೀ ಎಫ್‌ಒಬಿಯನ್ನು ಸಂಪರ್ಕಿಸುವ ಪ್ಲಾಟ್‌ಫಾರ್ಮ್ 1, 2, 3 ಮತ್ತು 4ರಲ್ಲಿ 2 ಲಿಫ್ಟ್‌ಗಳನ್ನು ಒದಗಿಸಲಾಗಿದೆ. ಪ್ಲಾಟ್‌ಫಾರ್ಮ್ 1ರಲ್ಲಿ 2 ಎಸ್ಕಲೇಟರ್‌, 1 ಮತ್ತು 2ರಲ್ಲಿ 2 ಲಿಫ್ಟ್‌ಗಳನ್ನು ಒದಗಿಸಲಾಗಿದೆ. ಉಳಿದಂತೆ ಎಲ್ಲ ಅಮೃತ ಭಾರತ್ ರೈಲು ನಿಲ್ದಾಣದ ವಿನ್ಯಾಸದಂತೆ ಕೋಚ್ ಮಾರ್ಗದರ್ಶನ ಫಲಕಗಳು ಸೇರಿದಂತೆ ಅತ್ಯಾಧುನಿಕ ಟಿಕೆಟ್ ಕೌಂಟರ್, ರೆಸ್ಟೋರೆಂಟ್, ರ್ಯಾಂಪ್‌, ಪಾರ್ಕಿಂಗ್, ಆಟೋ ಬೇ, ಕುಡಿಯುವ ನೀರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ.

ಸುರಕ್ಷತೆಗೆ ಆದ್ಯತೆ: ಹೊಸ ತಂತ್ರಜ್ಞಾನದೊಂದಿಗೆ ಹಳೆಯ ಸೊಬಗು ಉಳಿಸಿಕೊಂಡು ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಪ್ರತಿ ಹಂತದಲ್ಲಿಯೂ ಪ್ರಯಾಣಿಕ ಸುರಕ್ಷತೆ, ಹಿರಿಯರ ನಾಗರಿಕರಿಗೆ ಅನುಕೂಲ ಕಲ್ಪಿಸಲಾಗಿದ್ದು, ಅಗಲವಾದ ಮತ್ತು ಎತ್ತರ ಮೇಲ್ಸೇತುವೆಗಳ ನಿರ್ಮಾಣಕ್ಕೆ ಆದ್ಯತೆ ನೀಡಿರುವ ಹಿನ್ನೆಲೆಯಲ್ಲಿ ನಿಲ್ದಾಣಗಳಲ್ಲಿ ಹಳಿ ದಾಟುವ ವೇಳೆಯಲ್ಲಿ ಸಂಭವಿಸುತ್ತಿದ್ದ ಅಪಘಾತಗಳ ಕಡಿಮೆಯಾಗಿ ಜೀವ ಹಾನಿ ತಪ್ಪಲಿದೆ. ನಿಲ್ದಾಣಗಳಲ್ಲಿ ಡಾರ್ಮೆಟರಿಗಳನ್ನು (ವಸತಿ ವ್ಯವಸ್ಥೆ) ಕಲ್ಪಿಸಲಾಗಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿಯೇ ಮುಂಬರುವ ರೈಲು ತಡವಿದ್ದಲ್ಲಿ ನಿಲ್ದಾಣದಲ್ಲಿಯೇ ವಿಶ್ರಾಂತಿ ಪಡೆಯಲು ಅನುಕೂಲ ಕಲ್ಪಿಸಲಾಗಿದೆ. ಹವಾನಿಯಂತ್ರಿತ ಕೊಠಡಿಗಳನ್ನು ಕಲ್ಪಿಸಲಾಗಿದ್ದು, ಇವುಗಳಿಗೆ ವಿಶೇಷ ಭದ್ರತೆಯ ವ್ಯವಸ್ಥೆ ಇರುವ ಹಿನ್ನೆಲೆಯವಲ್ಲಿ ಒಬ್ಬಂಟಿ ಮಹಿಳೆಯರು, ಹಿರಿಯರ ನಾಯಕರು ನೂತನ ನಿಲ್ದಾಣಗಳ ಮೂಲಕ ನೆಮ್ಮದಿಯಿಂದ ಸಂಚರಿಸಬಹುದಾಗಿದೆ.

ಅಮೃತ ಭಾರತ್ ರೈಲ್ವೆ ನಿಲ್ದಾಣ ಯೋಜನೆಯಡಿ ನೈಋತ್ಯ ರೈಲ್ವೆ ವಲಯದ 5 ನಿಲ್ದಾಣಗಳು ನವೀಕರಣಗೊಂಡಿದ್ದು, ಮೇ 22ರಂದು ಲೋಕಾರ್ಪಣೆಗೆ ಸಿದ್ಧವಾಗಿವೆ. ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ಸೇವೆ ಲಭ್ಯವಾಗಲಿದೆ ಎಂದು ನೈಋತ್ಯ ರೈಲ್ವೆ ವಲಯದ ಸಾರ್ವಜನಿಕ ಮುಖ್ಯ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ಹೇಳಿದರು.