ಸಾರಾಂಶ
ಕನ್ನಡಪ್ರಭ ವಾರ್ತೆ ಹಳೇಬೀಡು
ಶೂನ್ಯದಿಂದ ಪ್ರಾರಂಭವಾದ ಪುಷ್ಪಗಿರಿ ಮಠ ಇಂದು ಪುಷ್ಪಗಿರಿ ಕ್ಷೇತ್ರವಾಗಿದೆ ಎಂದು ಶ್ರೀ ಪುಷ್ಪಗಿರಿ ಕ್ಷೇತ್ರದ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯರು ತಿಳಿಸಿದರು.ಹಳೇಬೀಡು ಸಮೀಪ ಪುಷ್ಪಗಿರಿ ಮಹಾಸಂಸ್ಥಾನದ ಆಡಿಟೋರಿಯಂನಲ್ಲಿ ಪುಷ್ಪಗಿರಿ ಮಹಾಸಂಸ್ಥಾನ ವತಿಯಿಂದ ಹಾಸನದ ನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನರ್ಸಿಂಗ್ ಕಾಲೇಜು, ಪ್ಯಾರಾ ಮೆಡಿಕಲ್, ಫಾರ್ಮಸಿ ಕಾಲೇಜು ಮತ್ತು ಹಾಸ್ಟೆಲ್ ಭೂಮಿಪೂಜೆ ನೆರವೇರಿಸಲು ಪೂರ್ವಭಾವಿ ಸಭೆಯನ್ನು ಕರೆದು ಅದರ ಸಾನ್ನಿಧ್ಯವನ್ನು ವಹಿಸಿ ಮಾತನಾಡುತ್ತಾ ಮಠಾಧೀಶರು ಕೇವಲ ಧ್ಯಾನ ಪೂಜೆಗೆ ಮೀಸಲು ಆಗಬಾರದು. ಸಮಾಜಕ್ಕೆ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ಆಸೆಯಿಂದ ಹಾಸನ ಜಿಲ್ಲೆಯಲ್ಲಿ ಸುಮಾರು ೨ ಎಕರೆ ಭೂಮಿಯಲ್ಲಿ ಅತ್ಯಾಧುನಿಕ ವಿಶೇಷ ಆಸ್ಪತ್ರೆಯನ್ನು ನಿರ್ಮಾಣ ಮಾಡಬೇಕೆಂಬ ಉದ್ದೇಶವಾಗಿದೆ. ಇದರ ಹಿನ್ನೆಲೆ ಎಂದರೆ ನಮ್ಮ ಹಿಂದಿನ ಮಠಾಧೀಶರಿಗೆ ಅನಾರೋಗ್ಯದಿಂದ ಅವರನ್ನು ಉಳಿಸಿಕೊಳ್ಳಲು ಒಳ್ಳೆಯ ಆಸ್ಪತ್ರೆ ಮತ್ತು ಹಣದ ಸೌಲಭ್ಯ ಇಲ್ಲದೆ ತೊಂದರೆ ಉಂಟಾಯಿತು. ಇದರ ನೋವಿನಿಂದ ನಾವು ಸಮಾಜದ ಬಡವರಿಗೆ ಒಳ್ಳೆಯ ಆಸ್ಪತ್ರೆ ನಿರ್ಮಾಣ ಮಾಡಲೇಬೇಕೆಂಬ ಉದ್ದೇಶದಿಂದ ಹಾಸನ ನಗರದ ಹೃದಯ ಭಾಗದಲ್ಲಿ ಜನತೆ ಹಾಗೂ ಭಕ್ತರ ಸಹಕಾರದಿಂದ ವಿಶೇಷವಾದ ಹಾಸ್ಪಿಟಲ್ ನಿರ್ಮಾಣ ಮಾಡಬೇಕೆಂದು ನಮ್ಮ ಕನಸನ್ನು ಭಕ್ತರು ನನಸು ಮಾಡಿದ್ದಾರೆ. ಸುಮಾರು ೨೦೦ ಕೋಟಿ ರು. ವೆಚ್ಚದಲ್ಲಿ ೫೦೦ ಬೆಡ್ ಇರುವ ಬೃಹತ್ ಆಸ್ಪತ್ರೆಯನ್ನು ಮಾಡಬೇಕೆಂಬ ನನ್ನ ಉದ್ದೇಶವಾಗಿದೆ. ಈ ಆಸ್ಪತ್ರೆಯಿಂದ ಸಾವಿರಾರು ಬಡ ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು. ಈ ಆಸ್ಪತ್ರೆ ನಿರ್ಮಾಣ ಮಾಡುವ ಮುಂಚೆ ಹಲವಾರು ದೇಶಗಳ ರಾಜ್ಯಗಳ ಆಸ್ಪತ್ರೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಬಂದ ನಂತರ ಕೆಲವು ವಿಚಾರ ತಿಳಿದ ಮೇಲೆ ಆಸ್ಪತ್ರೆಯನ್ನು ಮಾಡುವ ಮುಂಚೆ ಆಸ್ಪತ್ರೆಗೆ ಬೇಕಾಗುವ ವಿದ್ಯಾರ್ಥಿಗಳನ್ನು ನಾವು ಹೊರತರಬೇಕು. ಆಗ ಆಸ್ಪತ್ರೆಗಳು ಮುಂದುವರಿಯಲು ಸಾಧ್ಯವಾಗುತ್ತದೆ. ಆದ ಕಾರಣ ಈ ಆಸ್ಪತ್ರೆ ಹಿನ್ನೆಲೆಯಲ್ಲಿ ಫಾರ್ಮಸಿ, ಪ್ಯಾರಾಮೆಡಿಕಲ್, ನರ್ಸಿಂಗ್ ಕಾಲೇಜು ನಿರ್ಮಾಣ ಮಾಡಿದರೆ ಆಸ್ಪತ್ರೆಯ ಉಳಿಸಲು ಅನುಕೂಲವಾಗುತ್ತದೆ ಎಂಬ ಹಿರಿಯ ವೈದ್ಯರು ನಮಗೆ ಸಲಹೆ ನೀಡಿದರು. ಅದರ ಮೂಲಕ ನಾನು ಇಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಲಿಕ್ಕೆ ಪಣ ತೊಟ್ಟಿದ್ದೇನೆ. ಈ ವೇದಿಕೆಯ ಮೇಲೆ ಮುಕ್ತವಾಗಿ ಜನರು ತಮ್ಮ ಅನಿಸಿಕೆಗಳನ್ನು ತಿಳಿಸಿದರೆ ಅದರ ಪ್ರಕಾರವಾಗಿ ನಡೆದುಕೊಳ್ಳುತ್ತೇವೆ. ಸದ್ಯದಲ್ಲಿ ಭೂಮಿಪೂಜೆ ಪ್ರಾರಂಭವಾಗಲಿದೆ. ನಿಗದಿತ ದಿನಾಂಕವನ್ನು ತಕ್ಷಣ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಮನುಷ್ಯ ಅಂದು ಹಣಕ್ಕಾಗಿ ಭಾರಿ ಕಷ್ಟಪಡಬೇಕಾಗಿತ್ತು. ಇಂದಿನ ದಿನಗಳಲ್ಲಿ ಮನುಷ್ಯನಿಗೆ ಹಣದ ಅವಶ್ಯಕತೆ ಇಲ್ಲ. ಅವನಿಗೆ ಶಾಂತಿ, ನೆಮ್ಮದಿ ಬೇಕು. ಆದ ಕಾರಣ ಶಾಂತಿ ನೆಮ್ಮದಿ ಇರಬೇಕೆಂದರೆ ಮಾನವ ತನ್ನಲ್ಲಿರುವ ಹಣವನ್ನು ದಾನದ ಮೂಲಕ ಒಳ್ಳೆಯ ಕೆಲಸ ಮಾಡಿದರೆ ಅಂತ ಮನುಷ್ಯ ನೆಮ್ಮದಿಯಾಗಿರುತ್ತಾನೆ. ದೇವರು ಅವರಿಗೆ ಒಳ್ಳೆಯದು ಮಾಡುತ್ತಾನೆ. ಸಮಾಜ ಸೇವೆ ದೇವರ ಸೇವೆ. ಈ ಪೂರ್ವಭಾವಿ ಸಭೆಗೆ ೩೭ ತಾಲೂಕು, ೨೫೦ ಹಳ್ಳಿಗಳಿಂದ ಭಕ್ತರು ಬಂದಿದ್ದಾರೆ. ಶ್ರೀ ಪುಷ್ಪಗಿರಿ ಮಲ್ಟಿ ಸ್ಪೆಷಲಿಸ್ಟ್ ಆಸ್ಪತ್ರೆ ಬಡವರಿಗೆ ಅನುಕೂಲ ಮಾಡಿಕೊಡಲು ಸಿದ್ಧತೆ ನಡೆಯುತ್ತಿದೆ. ಹಾಸನದಲ್ಲಿ ಸರ್ಕಾರಿ ಆಸ್ಪತ್ರೆಯನ್ನು ಹೊರಪಡಿಸಿದರೆ ನಮ್ಮ ಆಸ್ಪತ್ರೆ ಎರಡನೇ ಸ್ಥಾನದಲ್ಲಿ ಬರಬೇಕೆಂಬುದು ನನ್ನ ಬಯಕೆಯಾಗಿದೆ. ಇಲ್ಲಿಗೆ ಬರುವ ರೋಗಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ಕಡಿಮೆ ವೆಚ್ಚದಲ್ಲಿ ನೀಡಬೇಕೆಂಬುದು ನಮ್ಮ ಆಸೆ. ಈ ಹಾಸ್ಪಿಟಲ್ ಸುಮಾರು ಹಣದ ವೆಚ್ಚವಿದೆ. ಆಧುನೀಕತೆಯ ಯಂತ್ರೋಪಕರಣಗಳನ್ನು ವಿಚಾರ ಮಾಡಿದರೆ ಕೋಟಿಗಟ್ಟಲೆ. ಹಾಗಾಗಿ ಆಸ್ಪತ್ರೆಯನ್ನು ಒಳ್ಳೆಯ ರೀತಿಯಲ್ಲಿ ಅನುಕೂಲ ಬಡವ ಜನತೆಗೆ ಅನುಕೂಲ ಮಾಡಿಕೊಡುವುದು ನಮ್ಮ ಉದ್ದೇಶ. ಇಲ್ಲಿ ಯಾವ ರಾಜಕೀಯ ಬರಬಾರದು ಎಂದು ತಿಳಿಸಿದರು.ಈ ಒಂದು ಕಾರ್ಯಕ್ರಮದಲ್ಲಿ ಆ ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಹಾಗೂ ನಿವೃತ್ತ ಮುಖ್ಯ ಕಾರ್ಯದರ್ಶಿ ಗುರುಪ್ರಸಾದ್, ಮೋಹನ್, ವಿರೂಪಾಕ್ಷ, ಮಾಜಿ ಶಾಸಕ ಲಿಂಗೇಶ್, ಮಠದ ಕಾರ್ಯದರ್ಶಿ ರಾಜಶೇಖರ್, ಆಡಳಿತ ಅಧಿಕಾರಿ ಕುಮಾರ್ ಸ್ವಾಮಿ, ಹಿರಣ್ಣಯ್ಯ , ಸಂದೀಪ್ ಪಾಟೀಲ್, ಜಗದೀಶ್, ಕೊರಟಗೆರೆ ಪ್ರಕಾಶ್, ಗಂಗೂರು ಶಿವಕುಮಾರ್, ವೀರಶೈವ ಅಧ್ಯಕ್ಷ ಬಸವರಾಜು, ರವಿ ಬಲ್ಲೆನಹಳ್ಳಿ, ಸಿದ್ದರಾಜಣ್ಣ, ಗಂಡೇಹಳ್ಳಿ ಚೇತನ್, ಶಿಕ್ಷಕರ ಸಂಘದ ಅಧ್ಯಕ್ಷ ಪಾಲಾಕ್ಷ ಹಾಗೂ ಎಲ್ಲಾ ಮುಖಂಡರು ಹಾಜರಿದ್ದರು.