ಉತ್ತಮ ಮನಸ್ಸಿನಿಂದ ಮಾಡಿದ ಕಾರ್ಯ ಭಗವಂತನ ಕೃಪೆಗೆ ಕಾರಣವಾಗುತ್ತದೆ. ಅದನ್ನು ಸಮಾಜ ಯಾವತ್ತೂ ಗುರುತಿಸುತ್ತದೆ.
ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ವರ್ಧಂತಿ ಉತ್ಸವ
ಕನ್ನಡಪ್ರಭ ವಾರ್ತೆ ಭಟ್ಕಳಉತ್ತಮ ಮನಸ್ಸಿನಿಂದ ಮಾಡಿದ ಕಾರ್ಯ ಭಗವಂತನ ಕೃಪೆಗೆ ಕಾರಣವಾಗುತ್ತದೆ. ಅದನ್ನು ಸಮಾಜ ಯಾವತ್ತೂ ಗುರುತಿಸುತ್ತದೆ ಎಂದು ನಾಮಧಾರಿ ಸಮಾಜದ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಹೇಳಿದರು.ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ಥಾನದ ವರ್ಧಂತಿ ಉತ್ಸವದ ಅಂಗವಾಗಿ ದೇವಸ್ಥಾನದ ಆಡಳಿತ ಮಂಡಳಿ, ಶ್ರೀನಿವಾಸ ಕಲಾ ಮಿತ್ರ ಮಂಡಳಿ ಹಾಗೂ ಆಸರಕೇರಿಯ ಶ್ರೀ ವೆಂಕಟೇಶ್ವರ ನಾಮಧಾರಿ ಅಭಿವೃದ್ಧಿ ಸಂಘ ಜಂಟಿಯಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ದೇವಸ್ಥಾನ ಧಾರ್ಮಿಕ ಕಾರ್ಯಕ್ರಮಕ್ಕೆ ಯಾವುದೆ ಫಲಾಪೇಕ್ಷೆ ಇಲ್ಲದೇ ಅನೇಕರು ತೊಡಗಿಸಿಕೊಡಿದ್ದಾರೆ. ಅಂಥವರನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಹಿರಿಯರಾದ ಎಲ್.ಎಸ್. ನಾಯ್ಕ ಅವರು ದೇವಸ್ಥಾನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ನಮ್ಮೊಂದಿಗಿಲ್ಲದಿದ್ದರೂ ಇಂದಿಗೂ ಸಮಾಜದ ಅಂತಹ ಮಹಾನ ವ್ಯಕ್ತಿಗಳ ಕಾರ್ಯವನ್ನು ಸದಾ ನೆನೆಯುತ್ತದೆ ಎಂದರಲ್ಲದೆ ಸಮಾಜದ ಕೆಲಸಕ್ಕೆ ಯುವಕರು ಸದಾ ಮುಂದೆ ಬರಬೇಕು ಎಂದರು.ಶ್ರೀನಿವಾಸ ಕಲಾ ಮಿತ್ರ ಮಂಡಳಿಯ ಕಲಾವಿದ ಸುರೇಶ ನಾಯ್ಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಕೊಂಡ ಶ್ರೀಧರ ನಾಯ್ಕ ಆಸರಕೇರಿ ಹಾಗೂ ಗುರುಮಠದ ವರ್ಧಂತಿ ಉತ್ಸವದಲ್ಲಿ ಚಪ್ಪರ ಹಾಕುವ ಕಾರ್ಯದಲ್ಲಿ ತೊಡಗಿಕೊಂಡ ಗೊರಟೆ ಭಾಗದ ಸುರೇಶ ನಾಯ್ಕ ನೇತೃತ್ವದ ತಂಡವನ್ನು ಗೌರವಿಸಲಾಯಿತು.
ಕೆ.ಆರ್. ನಾಯ್ಕ, ಹಿರಿಯ ಕಲಾವಿದ ವೆಂಕಟೇಶ ನಾಯ್ಕ ತಲಗೋಡು, ಶ್ರೀಧರ ನಾಯ್ಕ, ಪ್ರಕಾಶ ನಾಯ್ಕ, ವೆಂಕಟೇಶ ನಾಯ್ಕ, ಸುರೇಶ ನಾಯ್ಕ ಮತ್ತಿತರರು ಇದ್ದರು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಆನಂತರ ಉಡುಪಿಯ ತೆಕ್ಕಟ್ಟೆ ಓಂಕಾರ ಕಲಾವಿದರಿಂದ ಹಾಸ್ಯಮಯ ವಾಚ್‌ಮ್ಯಾನ್ ಎಂಬ ನಾಟಕ ಪ್ರರ್ಶನ ನಡೆಯಿತು. ಅಣ್ಣಪ್ಪ ನಾಯ್ಕ ಹಾಗೂ ಪಾಂಡುರಂಗ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಬಹುಮಾನದ ಪ್ರಾಯೋಜಕತ್ವವನ್ನು ರಾಘವೇಂದ್ರ ಸಾಗರ, ಈಶ್ವರ ನಾಯ್ಕ, ಆಸರಕೇರಿ ವಹಿಸಿದ್ದರು.